ADVERTISEMENT

ಯುವ ಸಂಭ್ರಮ: ಚಿತ್ರಗೀತೆಗಳಿಗೆ ಪ್ರೇಕ್ಷಕರ ಹೆಜ್ಜೆ

ಎಂಟನೇ ದಿನ ವಿವಿಧ ಜಿಲ್ಲೆಯ 59 ತಂಡಗಳಿಂದ ನೃತ್ಯ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 3:24 IST
Last Updated 18 ಸೆಪ್ಟೆಂಬರ್ 2025, 3:24 IST
ಮೈಸೂರಿನ ಮಾನಸ ಗಂಗೋತ್ರಿ ಬಯಲು ರಂಗಮಂದಿರಲ್ಲಿ ಆಯೋಜಿಸಿದ್ದ ಯುವ ಸಂಭ್ರಮದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು– ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ಮೈಸೂರಿನ ಮಾನಸ ಗಂಗೋತ್ರಿ ಬಯಲು ರಂಗಮಂದಿರಲ್ಲಿ ಆಯೋಜಿಸಿದ್ದ ಯುವ ಸಂಭ್ರಮದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು– ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.   

ಮೈಸೂರು: ಯುವ ಸಂಭ್ರಮದ ಎಂಟನೇ ದಿನವಾದ ಬುಧವಾರ ಬಯಲು ರಂಗಮಂದಿರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ನೆರೆದಿದ್ದ ನೂರಾರು ಯುವಕ, ಯುವತಿಯರು ಪ್ರತಿ ಹಾಡಿಗೆ ಕೈಬೀಸಿ ಕುಣಿದರು. ಕನ್ನಡದ ಹಾಡುಗಳ ಹಬ್ಬಕ್ಕೆ ಪ್ರೇಕ್ಷಕರ ಹೆಜ್ಜೆ ರಂಗು ತುಂಬಿತು.

ಸಾಂಸ್ಕೃತಿಕ ಪರಂಪರೆ, ದೇಶಭಕ್ತಿ, ಅಂಬಾರಿ ಆನೆ ಕೃಷ್ಣ, ದಸರಾ ವೈಭವ, ಆರೋಗ್ಯ, ಜನಕೇಂದ್ರಿತ, ಪರಿಸರ ಸಂರಕ್ಷಣೆಯಲ್ಲಿ ಯುವ ಜನತೆಯ ಪಾತ್ರ, ಪೌರಾಣಿಕ, ಭಾರತೀಯ ಯೋಧರ ಪಾತ್ರ, ಕೊಡವ ನೃತ್ಯ, ಕರ್ನಾಟಕ ಜಾನಪದವನ್ನು ವರ್ಣಿಸುವ 59 ತಂಡಗಳ ನೃತ್ಯ ‌ಪ್ರದರ್ಶನ ನಡೆಯಿತು. ವೇದಿಕೆಯ ಮೇಲೆ ಕಲಾವಿದರು ಪ್ರದರ್ಶನ ನೀಡುತ್ತಿದ್ದಂತೆ, ಮುಂಭಾಗದ ಸಭಿಕರ ನಡುವೆ ಇದ್ದ ಕೆಲವರೂ ಎದ್ದು ನಿಂತು ನೃತ್ಯ ಮಾಡಿ ಗಮನಸೆಳೆದರು.

ಚಾಮರಾಜನಗರ ಜಿಲ್ಲೆಯ ಯಳಂದೂರು ಮಲ್ಲಿಕಾರ್ಜುನಸ್ವಾಮಿ ಕಾಲೇಜಿನ ವಿದ್ಯಾರ್ಥಿಗಳು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳ ಮಾಹಿತಿ ನೀಡುವ ನೃತ್ಯ ಪ್ರದರ್ಶಿಸಿದರು. ಕಾರ್ಯಕ್ರಮದುದ್ದಕ್ಕೂ ಜಾನಪದದ ಸೊಗಡು ಅನಾವರಣಗೊಂಡಿತು. ವಿದ್ಯಾವಿಕಾಸ್‌ ಎಂಜಿನಿಯರಿಂಗ್‌ ಕಾಲೇಜು, ಮಾತೃ ಮಂಡಳಿ ಶಿಶು ವಿಕಾಸ ಕೇಂದ್ರ, ಚಾಮರಾಜನಗರ ವಿಶ್ವವಿದ್ಯಾಲಯ, ನಾಗಮಂಗಲ ತಾಲ್ಲೂಕಿನ ಎಸ್‌.ಜೆ.ಬಿ.ಜಿ.ಎಸ್‌ ಕಾಲೇಜು, ಜೆಎಸ್‌ಎಸ್‌ ಪಾಲಿಟೆಕ್ನಿಕ್‌, ಮಂಡ್ಯದ ಭೈರವೇಶ್ವರ ಗ್ರಾಮಾಂತರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಜಾನಪದ ಹಾಡುಗಳಿಗೆ ಹೆಜ್ಜೆ ಹಾಕಿ ಗಮನಸೆಳೆದರು.

ADVERTISEMENT

‘ಬಂಗಾರ ತೆನೆತೆನೆಯೆಲ್ಲಾ, ಬಂಗಾಡಿ ಮನೆ, ಮನೆಗೆ’, ‘ಈ ಸುಗ್ಗಿ ತಂದವರಾಳಮ್ಮ, ನಮ್ಮಮ್ಮ ನಮ್ಮಮ್ಮ’, ‘ಅಕ್ಕಯ್ಯ ನೋಡುಬಾರೆ ಈ ಚೆಲುವನ’, ‘ಏಳು ಮಳೆ ಮ್ಯಾಲೆರಿ ನಿಂತಾನಮ್ಮ ಮಾದೇಶ’ ಹಾಡುಗಳಿಗೆ ಪ್ರೇಕ್ಷಕರೂ ಹುಚ್ಚೆದ್ದು ಕುಣಿದರು. ತೀರ್ಪುಗಾರರು ಕುಳಿತಲ್ಲೇ ತಾಳ ಹಾಕಿದರು. ಶ್ರೀರಾಂಪುರದ ನಿರ್ಮಲಾ ಕಾಂಪೊಸಿಟ್‌ ಕಾಲೇಜು ವಿದ್ಯಾರ್ಥಿಗಳು ವಿವಿಧ ರಾಜ್ಯಗಳ ನೃತ್ಯಗಳ ಮೂಲಕ ಏಕತೆಯ ಮಂತ್ರ ಜಪಿಸಿದರು.

ವೀರ ಕನ್ನಡಿಗ ಚಿತ್ರದ ‘ಜೀವ ಕನ್ನಡ ದೇಹ ಕನ್ನಡ’, ಮಲ್ಲ ಚಿತ್ರದ ‘ಕರುನಾಡೇ... ಕೈ ಚಾಚಿದೆ ನೋಡೆ’ ಹಾಗೂ ಸಮರ ಚಿತ್ರದ ‘ಕನ್ನಡದ ಮಾತು ಚೆನ್ನ, ಕನ್ನಡದ ನುಡಿ ಚೆನ್ನ, ನವಗ್ರಹ ಚಿತ್ರದ ‘ಬಂಗಾರಿ ಊರಿನಲ್ಲಿ ಹದ್ದಿನ ಕಣ್ಣುಗಳು’ ಹಾಡಿಗೆ ಶಿಳ್ಳೆ, ಚಪ್ಪಾಳೆಗಳ ಸ್ವಾಗತ ಕೋರಿದರು. ‘ಕುಂಟೆ ಬಿಲ್ಲೆ’ ಚಿತ್ರತಂಡ ಆಗಮಿಸಿತು. ನಡೆದಾಡುವ ರೊಬೊ (ಸ್ಯಾಪಿ) ‘ಜಾಲಿ, ಜಾಲಿ’ ಎಂಬ ಹಾಡಿಗೆ ಪ್ರದರ್ಶನ ನೀಡಿ ಜನರನ್ನು ಮೂಕ ವಿಸ್ಮಿತರನ್ನಾಗಿಸಿತು.

ಯುವಸಂಭ್ರದಲ್ಲಿ ಸಾವಿರಾರು ಪ್ರೇಕ್ಷಕರು ಯುವ ಕಲಾವಿದರ ಪ್ರತಿಭೆ ಕಣ್ತುಂಬಿಕೊಂಡರು– ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.

ಇಂದು ಕೊನೆಯ ದಿನ

ದಸರೆಗೆ ಮುನ್ನುಡಿ ಬರೆಯುವ ಯುವ ಸಂಭ್ರಮಕ್ಕೆ ಗುರುವಾರ (ಸೆ.18) ತರೆ ಬೀಳಲಿದೆ. ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಭಾಗವಹಿಸಲಿದ್ದಾರೆ. ಒಟ್ಟು ಒಂಭತ್ತು ದಿನ ನಡೆದ ಕಾರ್ಯಕ್ರಮದಲ್ಲಿ ಸುಮಾರು 485 ತಂಡಗಳು ಪ್ರದರ್ಶನ ನೀಡುತ್ತಿದ್ದು ತಂಡಗಳು ಹೆಚ್ಚಿದ್ದರಿಂದ ಕಾರ್ಯಕ್ರಮವನ್ನು ಒಂದು ದಿನ ವಿಸ್ತರಿಸಲಾಗಿತ್ತು. ಬುಧವಾರವೂ ಸಾವಿರಾರು ಪ್ರೇಕ್ಷಕರು ಕಾರ್ಯಕ್ರಮಕ್ಕೆ ಆಗಮಿಸಿದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ವೇದಿಕೆಯ ಮುಂಭಾಗಕ್ಕೂ ಜನರನ್ನು ಬಿಟ್ಟು ಗುಂಪು ಚದುರಿಸಿದರು. ಮಾಧ್ಯಮ ಗ್ಯಾಲರಿಯಲ್ಲಿ ಪತ್ರಕರ್ತರಲ್ಲದವರು ಕುಳಿತಿದಿದ್ದರಿಂದ ಕಾರ್ಯಕ್ರಮದ ವರದಿಗೆ ತೆರಳಿದವರು ಆಸನ ವ್ಯವಸ್ಥೆಯಿದ್ದರೂ ನಿಂತುಕೊಂಡು ವರದಿ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.