ADVERTISEMENT

ಮೈಸೂರು: ಭಾನುವಾರದಿಂದ ‘ಯುವ ಸಂಭ್ರಮ’

ಈ ಬಾರಿ 159 ಕಾಲೇಜು ತಂಡಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2018, 14:15 IST
Last Updated 28 ಸೆಪ್ಟೆಂಬರ್ 2018, 14:15 IST

ಮೈಸೂರು: ದಸರಾ ಮಹೋತ್ಸವಕ್ಕೆ ಮುನ್ನುಡಿಯಾಗಿರುವ ‘ಯುವ ಸಂಭ್ರಮ’ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೆಪ್ಟೆಂಬರ್‌ 30 ರಂದು ಚಾಲನೆ ಲಭಿಸಲಿದೆ. ಮಾನಸಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ಅಕ್ಟೋಬರ್‌ 7ರವರೆಗೆ ನಡೆಯಲಿರುವ ಈ ಸಾಂಸ್ಕೃತಿಕ ಹಬ್ಬದಲ್ಲಿ 159 ಕಾಲೇಜುಗಳ ತಂಡಗಳು ಪ್ರದರ್ಶನ ನೀಡಲಿವೆ.

ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಭಾನುವಾರ ಸಂಜೆ 6 ಗಂಟೆಗೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲ, ನಟಿ ಹರ್ಷಿಕಾ ಪೂಣಚ್ಚ ಪಾಲ್ಗೊಳ್ಳಲಿದ್ದಾರೆ ಎಂದು ಯುವದಸರಾ ಉಪಸಮಿತಿಯ ಕಾರ್ಯಾಧ್ಯಕ್ಷ ಎಂ.ಎನ್.ನಟರಾಜ್ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಬಾರಿ ನಿರೀಕ್ಷೆಗಿಂತಲೂ ಹೆಚ್ಚಿನ ತಂಡಗಳು ಹೆಸರು ನೋಂದಾಯಿಸಿರುವ ಕಾರಣ ಯುವ ಸಂಭ್ರಮ ಕಾರ್ಯಕ್ರಮವನ್ನು ಎಂಟು ದಿನ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ADVERTISEMENT

ಪ್ರತಿದಿನ ತಲಾ 20 ತಂಡಗಳು ಕಾರ್ಯಕ್ರಮ ನೀಡಲಿವೆ. ಯುವ ಸಂಭ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಗಳನ್ನು ಯುವ ದಸರೆಗೆ ಆಯ್ಕೆ ಮಾಡಲಾಗುವುದು. ಪ್ರತಿ ದಿನ ಐದು ತಂಡಗಳಂತೆ ಎಂಟು ದಿನಗಳಲ್ಲಿ ಒಟ್ಟು 40 ತಂಡಗಳನ್ನು ಆಯ್ಕೆ ಮಾಡಿ ‘ಯುವ ದಸರಾ’ದಲ್ಲಿ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲದೆ ದೂರದ ಧಾರವಾಡ, ದಕ್ಷಿಣ ಕನ್ನಡ ಮತ್ತು ಬೆಂಗಳೂರಿನಿಂದಲೂ ಕೆಲವು ತಂಡಗಳು ಹೆಸರು ನೋಂದಾಯಿಸಿವೆ ಎಂದರು.

ಒಂದು ತಂಡದಲ್ಲಿ ಕನಿಷ್ಠ 30 ರಿಂದ ಗರಿಷ್ಠ 60 ಮಂದಿ ವಿದ್ಯಾರ್ಥಿಗಳು ಇರುತ್ತಾರೆ. ಎಂಟು ದಿನಗಳಲ್ಲಿ ಸುಮಾರು 7,500 ಕ್ಕೂ ಅಧಿಕ ಯುವಕ, ಯುವತಿಯರಿಗೆ ತಮ್ಮ ಪ್ರತಿಭೆ ತೋರಿಸಲು ಅವಕಾಶ ಲಭಿಸಲಿದೆ ಎಂದು ಹೇಳಿದರು. ಯುವದಸರಾ ಉಪಸಮಿತಿ ಕಾರ್ಯದರ್ಶಿ ಡಿ.ಬಿ.ಲಿಂಗಣ್ಣಯ್ಯ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.