ADVERTISEMENT

ಅಭಿರಾಂಗೆ ಅಭಿನಂದನೆಯ ಮಹಾಪೂರ

ನಿಕಟಪೂರ್ವ ಜಿಲ್ಲಾಧಿಕಾರಿಯ ಸೇವೆ ಸ್ಮರಿಸಿದ ಮೈಸೂರಿಗರು; ಒಡನಾಟ ನೆನೆದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 1:53 IST
Last Updated 12 ಸೆಪ್ಟೆಂಬರ್ 2020, 1:53 IST
ಮೈಸೂರಿನಿಂದ ವರ್ಗಾವಣೆಗೊಂಡ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೈಸೂರು ವಿ.ವಿ.ಯ ವಿಜ್ಞಾನ ಭವನದಲ್ಲಿ ಶುಕ್ರವಾರ ಸನ್ಮಾನಿಸಿದರು. ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಬಿ.ಶರತ್, ಶಾಸಕ ಬಿ.ಹರ್ಷವರ್ಧನ್, ಮೈಸೂರು ವಿ.ವಿ ಕುಲಪತಿ ಹೇಮಂತಕುಮಾರ್ ಇದ್ದಾರೆ
ಮೈಸೂರಿನಿಂದ ವರ್ಗಾವಣೆಗೊಂಡ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೈಸೂರು ವಿ.ವಿ.ಯ ವಿಜ್ಞಾನ ಭವನದಲ್ಲಿ ಶುಕ್ರವಾರ ಸನ್ಮಾನಿಸಿದರು. ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಬಿ.ಶರತ್, ಶಾಸಕ ಬಿ.ಹರ್ಷವರ್ಧನ್, ಮೈಸೂರು ವಿ.ವಿ ಕುಲಪತಿ ಹೇಮಂತಕುಮಾರ್ ಇದ್ದಾರೆ   

ಮೈಸೂರು: ನಿಕಟಪೂರ್ವ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರ ಸೇವೆಯನ್ನು ಸ್ಮರಿಸಿದ ಮೈಸೂರಿಗರು, ಅಧಿಕಾರಿಗಳು, ಸಹೋದ್ಯೋಗಿಗಳು, ಸಚಿವ–ಶಾಸಕರು ಬೀಳ್ಕೊಡುಗೆಯ ಜೊತೆಗೆ ನುಡಿ ಗೌರವವನ್ನು ಸಲ್ಲಿಸಿದರು.

ಮೈಸೂರು ಸಿಟಿಜನ್ ಫೋರಂ ಶುಕ್ರವಾರ ರಾತ್ರಿ ನಗರದ ವಿಜ್ಞಾನ ಭವನದಲ್ಲಿ ‘ಮೈಸೂರು ನಿಮ್ಮ ಸೇವೆಯನ್ನು ಸ್ಮರಿಸುತ್ತದೆ’ ಘೋಷ ವಾಕ್ಯದಡಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನಿಕಟಪೂರ್ವ ಜಿಲ್ಲಾಧಿಕಾರಿ ಅಭಿರಾಂ ಅವರಿಗೆ ಅಭಿನಂದನೆಯ ಮಹಾಪೂರವನ್ನೇ ಹರಿಸಿದರು.

ಸಚಿವ ಎಸ್‌.ಟಿ.ಸೋಮಶೇಖರ್ ಸೇರಿದಂತೆ ಶಾಸಕರೇ ಖುದ್ದಾಗಿ ಅಭಿರಾಂ ಅವರನ್ನು ಸಭಾಂಗಣದ ಹೊರಭಾಗದಿಂದ ವೇದಿಕೆಗೆ ಕರೆ ತಂದರು.

ADVERTISEMENT

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಭಿರಾಂ, ‘ಬಲವಂತದಿಂದ ಕೆಲಸ ಮಾಡಿಸುವುದು ನನಗಿಷ್ಟವಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ತಂಡವಾಗಿ ಕೆಲಸ ಮಾಡುವುದರಲ್ಲಿ ನಂಬಿಕೆಯಿದೆ’ ಎಂದು ಹೇಳಿದರು.

‘ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಸವಾಲನ್ನೇ ಎದುರಿಸಿದೆ. ಎಲ್ಲರೂ ಸಹಕರಿಸಿದರು. ಅಭಿವೃದ್ಧಿಯ ಕಡೆ ಹೆಚ್ಚಿನ ಗಮನ ಕೊಡಲಾಗಲಿಲ್ಲ. ಹಲವು ಇಲಾಖೆಗಳಲ್ಲಿ ಸುಧಾರಣೆ ತರುವ ಆಲೋಚನೆಯಿತ್ತು. ಅದೂ ಸಾಧ್ಯವಾಗಲಿಲ್ಲ. ಮೈಸೂರಿನ ಸೇವಾ ಅವಧಿಯನ್ನು ವೃತ್ತಿ ಹಾಗೂ ವೈಯಕ್ತಿಕವಾಗಿಯೂ ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಮಾತನಾಡಿ, ‘ದಸರಾ, ಪಂಚಲಿಂಗ ದರ್ಶನ ಮಹೋತ್ಸವ ಮುಗಿಯುವ ತನಕವೂ ಅಭಿರಾಂ ವರ್ಗಾವಣೆಯ ಪ್ರಸ್ತಾಪವಿರಲಿಲ್ಲ. ಅವರ ಕೋರಿಕೆ ಮೇರೆಗೆ ವರ್ಗಾವಣೆ ಮಾಡಲಾಗಿದೆ. ನೂತನ ಜಿಲ್ಲಾಧಿಕಾರಿ ನಿಯೋಜಿಸುವಾಗ ಅವರ ಸಲಹೆಯನ್ನು ಪಡೆದೆ’ ಎಂದು ಹೇಳಿದರು.

‘ಅಭಿರಾಂ ಬಗ್ಗೆ ಯಾರೊಬ್ಬರಿಗೂ ವಿರೋಧವಿರಲಿಲ್ಲ. ಒಮ್ಮೆಯೂ ಸರ್ಕಾರಕ್ಕೆ ಮುಜುಗರ ಸೃಷ್ಟಿಸಲಿಲ್ಲ. ಸಾರ್ವಜನಿಕರಿಗೆ ತೊಂದರೆ ನೀಡಲಿಲ್ಲ. ಇಂತಹವರ ಜೊತೆ ಕೆಲಸ ಮಾಡಿದ್ದು ನನ್ನ ಅದೃಷ್ಟ’ ಎಂದು ಸಚಿವರು ಶ್ಲಾಘಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ‘ಅಭಿರಾಂ ಅವರಿಂದ ಸಾಕಷ್ಟು ಕಲಿತಿದ್ದೇವೆ. ಕಲಿಯುವುದು ಇನ್ನೂ ಬಹಳಷ್ಟಿದೆ’ ಎಂದರೆ, ಮಹಾನಗರ ಪಾಲಿಕೆಯ ಆಯುಕ್ತ ಗುರುದತ್ತ ಹೆಗಡೆ, ‘ನಿಜವಾದ ನಾಯಕ. ಎಂತಹ ಕ್ಲಿಷ್ಟ ಸಮಸ್ಯೆ, ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸುವುದನ್ನು ಇವರಿಂದಲೇ ನಾನು ಕಲಿತೆ’ ಎಂದು ತಮ್ಮ ಅನುಭವ–ಒಡನಾಟವನ್ನು ಹೇಳಿಕೊಂಡರು.

ಜಿಲ್ಲಾಧಿಕಾರಿ ಬಿ.ಶರತ್ ತಮ್ಮ ಗೆಳೆಯನ ಸಾಧನೆಯನ್ನು ಬಣ್ಣಿಸಿ, ಆ ಹಾದಿಯಲ್ಲೇ ಸಾಗುವುದು ಕಠಿಣ ಸವಾಲು ಎಂದರು.

ಪತ್ರಕರ್ತ ಸಿ.ಕೆ.ಮಹೇಂದ್ರ ಮಾತನಾಡಿದರು.

ದಸರಾ ಉದ್ಘಾಟನೆಗೆ ಆಹ್ವಾನಿಸಿ

‘ಈ ಬಾರಿಯ ದಸರಾವನ್ನು ಐವರು ಕೊರೊನಾ ವಾರಿಯರ್ಸ್‌ಗಳಿಂದ ಉದ್ಘಾಟಿಸಬೇಕು ಎಂದು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅಭಿರಾಂ ಅವರನ್ನೇ ಆಹ್ವಾನಿಸಿ’ ಎಂದು ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ಗೆ ಮನವಿ ಮಾಡಿದರು.

‘ಅಭಿರಾಂ ಜೊತೆ ಚರ್ಚಿಸಿ, ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಸಚಿವರು ತಿಳಿಸಿದರು.

ವೈದ್ಯರು–ಮಾಧ್ಯಮದವರ ವಿರುದ್ಧ ಜಿಟಿಡಿ ಸಿಡಿಮಿಡಿ

‘ಡಾ.ಎಸ್.ಆರ್.ನಾಗೇಂದ್ರ ಆತ್ಮಹತ್ಯೆ ಪ್ರಕರಣ ಪ್ರಸ್ತಾಪಿಸಿದ ಶಾಸಕ ಜಿ.ಟಿ.ದೇವೇಗೌಡ, ಪ್ರಾಮಾಣಿಕ ಅಧಿಕಾರಿಗೆ ನೋವುಂಟು ಮಾಡುವ ಕೆಲಸವನ್ನು ವೈದ್ಯರು, ಮಾಧ್ಯಮದವರು ಮಾಡಿದರು. ಹತ್ತಿರದಿಂದ ಎಲ್ಲವನ್ನೂ ಬಲ್ಲ ಮಾಧ್ಯಮದವರಾದರೂ ಯೋಚಿಸಬೇಕಿತ್ತು’ ಎಂದು ಸಿಡಿಮಿಡಿಗೊಂಡರು.

ಶಾಸಕ ಬಿ.ಹರ್ಷವರ್ಧನ್ ಅಭಿರಾಂ ಜೊತೆಗಿನ ತಿಕ್ಕಾಟವನ್ನು ಪ್ರಸ್ತಾಪಿಸಿದರೆ, ಮರಿತಿಬ್ಬೇಗೌಡ ಕಾನೂನಿನ ಚೌಕಟ್ಟಿಗೆ ಬಾರದ ಕೆಲಸ ಮಾಡದಿದ್ದನ್ನು ನೆನಪಿಸಿಕೊಂಡರು. ಜೊತೆಗೆ ನಿರಾಕರಿಸಿದ ಸಕಾರಣವನ್ನು ವಿವರವಾಗಿ ತಿಳಿಸಿದ್ದನ್ನು ಸ್ಮರಿಸಿಕೊಂಡರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌, ಅಧಿಕಾರಿಗಳು, ನಾಗರಿಕರು, ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.