ADVERTISEMENT

ಹಣ ವರ್ಗಾವಣೆ: ನಿಗಾಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 13:06 IST
Last Updated 20 ಮಾರ್ಚ್ 2023, 13:06 IST
ಡಾ.ಕೆ.ವಿ.ರಾಜೇಂದ್ರ
ಡಾ.ಕೆ.ವಿ.ರಾಜೇಂದ್ರ   

ಮೈಸೂರು: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬ್ಯಾಂಕ್ ಮುಖ್ಯಸ್ಥರ ಸಹಕಾರ ಮುಖ್ಯವಾಗಿದ್ದು, ಹಣಕಾಸು ವರ್ಗಾವಣೆ ವಿಚಾರದಲ್ಲಿ ಅಗತ್ಯ ಮಾಹಿತಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಬ್ಯಾಂಕ್ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದ ಅವರು, ‘ಮಾದರಿ ನೀತಿಸಂಹಿತೆ ಜಾರಿಗೆ ಬಂದ ದಿನದಿಂದ ಚುನಾವಣಾ ಆಯೋಗದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹಣ ಸಾಗಣೆ ಮಾಡುವವರ ಬಳಿ ಅಗತ್ಯ ದಾಖಲೆಗಳಿರಬೇಕು’ ಎಂದರು.

‘ಒಂದು ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಡ್ರಾ ಮಾಡಿದ್ದರೆ, ಒಂದೇ ಖಾತೆಯಿಂದ ಹೆಚ್ಚು ಜನರಿಗೆ ಹಣ ಹೋಗಿದ್ದರೆ ಅಥವಾ ಅಭ್ಯರ್ಥಿ, ಅಭ್ಯರ್ಥಿಯ ಹೆಂಡತಿಯ ಖಾತೆಯಿಂದ ₹ 1 ಲಕ್ಷಕ್ಕಿಂತ ಹೆಚ್ಚು ಹಣ ವರ್ಗಾವಣೆ ಆಗಿದ್ದರೆ ಆ ವಿಷಯವನ್ನು ನೋಡಲ್ ಅಧಿಕಾರಿಗಳ ಗಮನಕ್ಕೆ ಬಂದಿರಬೇಕು. ₹ 10 ಲಕ್ಷಕ್ಕಿಂತ ಹೆಚ್ಚು ಹಣ ವರ್ಗಾವಣೆಯಾದ ವಿಷಯ ಆದಾಯ ತೆರಿಗೆ ಇಲಾಖೆಯ ನೋಡಲ್ ಅಧಿಕಾರಿಯ ಗಮನಕ್ಕೆ ತರಬೇಕಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಎ.ಟಿ‌.ಎಂ.ಗಳಿಗೆ ಹಣ ತುಂಬುವವರು ಬೆಳಿಗ್ಗೆ 10ರಿಂದ ಸಂಜೆ 5ರೊಳಗೆ ಆ ಕೆಲಸ ಮಾಡಬೇಕು. ಪ್ರತಿ ಎಂ.ಟಿ.ಎಂ.ಗೆ ಹಣ ತುಂಬಿರುವುದಕ್ಕೆ ಸೂಕ್ತ ದಾಖಲೆ ಹೊಂದಿರಬೇಕು. ಸಂಜೆ 5ರ ನಂತರ ದಾಖಲೆಗಳಿದ್ದರೂ ಹಣ ಸಾಗಣೆಗೆ ಅನುಮತಿ ಇರುವುದಿಲ್ಲ. ವಶಪಡಿಸಿಕೊಂಡ ಹಣ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ವಾಪಸ್ ಪಡೆಯಲು ಆಗದ ಕಾರಣ ಅಗತ್ಯ ದಾಖಲೆಗಳು ಮುಖ್ಯ’ ಎಂದು ಹೇಳಿದರು.

‘ಲೀಡ್ ಬ್ಯಾಂಕ್ ಅಧಿಕಾರಿಗಳು ವಾಟ್ಸ್‌ಆ್ಯಪ್‌ ಗ್ರೂಪ್ ರಚಿಸಿ ಅಗತ್ಯ ಮಾಹಿತಿಗಳನ್ನು ಎಲ್ಲಾ ಬ್ಯಾಂಕ್‌ಗಳಿಗೆ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.