ADVERTISEMENT

29ಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ತಂಬಾಕು ಬೆಳೆಗಾರರ ಮುತ್ತಿಗೆ

ಕಬ್ಬು ಬೆಳೆಗಾರರ ಸಂಘ ರಾಜ್ಯ ಘಟಕದ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 4:40 IST
Last Updated 20 ಸೆಪ್ಟೆಂಬರ್ 2025, 4:40 IST
ಕೆ.ಆರ್.ನಗರ ಪ್ರವಾಸಿ ಮಂದಿರದಲ್ಲಿ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಶುಕ್ರವಾರ ನಡೆದ ರೈತ ಮುಖಂಡರ ಸಭೆಯಲ್ಲಿ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ಸೇರಿದಂತೆ ಹಲವು ರೈತ ಮುಖಂಡರು ಭಾಗವಹಿಸಿದ್ದರು
ಕೆ.ಆರ್.ನಗರ ಪ್ರವಾಸಿ ಮಂದಿರದಲ್ಲಿ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಶುಕ್ರವಾರ ನಡೆದ ರೈತ ಮುಖಂಡರ ಸಭೆಯಲ್ಲಿ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ಸೇರಿದಂತೆ ಹಲವು ರೈತ ಮುಖಂಡರು ಭಾಗವಹಿಸಿದ್ದರು   

ಕೆ.ಆರ್.ನಗರ: ತಂಬಾಕು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿವಿಧ ರೈತ ಸಂಘಟನೆಗಳಿಂದ ಸೆ.29ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಕಬ್ಬು ಬೆಳೆಗಾರರ ಸಂಘ ರಾಜ್ಯ ಘಟಕದ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕೆ.ಆರ್.ನಗರ, ಸಾಲಿಗ್ರಾಮ, ಪಿರಿಯಾಪಟ್ಟಣ, ಹುಣಸೂರು ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ತಂಬಾಕು ಬೆಳೆಯುತ್ತಾರೆ. ಆದರೆ, ಈ ಭಾಗದ ವಿವಿಧ ತಂಬಾಕು ಮಂಡಳಿಯಿಂದ ರೈತರು ಅನ್ಯಾಯಕ್ಕೆ ಒಳಗಾಗಿದ್ದಾರೆ. ಕಳೆದ 2-3 ದಶಕಗಳಿಂದ ಜಿಲ್ಲಾಧಿಕಾರಿ ಒಮ್ಮೆಯೂ ತಂಬಾಕು ಬೆಳೆಗಾರರ ಸಭೆ ಕರೆದು ಚರ್ಚಿಸಿಲ್ಲ ಎಂದು ಆರೋಪಿಸಿದರು.

ಸರ್ವೆ ಇಲಾಖೆಯಲ್ಲಿ ಸಮಯಕ್ಕೆ ಸರಿಯಾಗಿ ಸರ್ವೆ ಕೆಲಸವಾಗುತ್ತಿಲ್ಲ. ಕಂದಾಯ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ ಎರಡು ವರ್ಷ ಕಳೆದರೂ ಮರಣ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ, ಅನಗತ್ಯ ದಾಖಲೆ ಕೇಳಿ ವಿಳಂಬ ಮಾಡುತ್ತಿರುತ್ತಾರೆ ಎಂದು ಆರೋಪಿಸಿದರು.

ADVERTISEMENT

ಸಾಲಿಗ್ರಾಮದಲ್ಲಿ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಅಂಗಡಿ ವಿರುದ್ಧ ಕೃಷಿ ಇಲಾಖೆಗೆ ದೂರು ಸಲ್ಲಿಸಿದರೂ ಪರಿಶೀಲಿಸಿ, ಅಂಗಡಿ ವಿರುದ್ಧ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಾಲಿಗ್ರಾಮ ತಾಲ್ಲೂಕಿನ ಮಿರ್ಲೆ ಮತ್ತು ಚುಂಚನಕಟ್ಟೆಯಲ್ಲಿ ತಲಾ ₹25 ಲಕ್ಷ ಮೊತ್ತದಲ್ಲಿ ನಿರ್ಮಿಸಲಾಗುತ್ತಿರುವ ಉಗ್ರಾಣ ಕಾಮಗಾರಿ ಕಳಪೆಯಾಗಿದೆ. ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ತೋಟಗಾರಿಕೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿನ ಸವಲತ್ತುಗಳು ಹೊಸ ರೈತರಿಗೆ ಸಿಗುತ್ತಿಲ್ಲ. ಈ ಹಿಂದೆ ಸವಲತ್ತು ಪಡೆದವರಿಗೆ ಮತ್ತೆ ಮತ್ತೆ ನೀಡಲಾಗುತ್ತಿದೆ. ವಿವಿಧ ಗ್ರಾಮಗಳಲ್ಲಿನ ಕೆರೆಗಳಲ್ಲಿ ಮೀನು ಸಾಕಾಣಿಕೆಗೆ ಬಹಿರಂಗ ಹರಾಜು ನಡೆಯಬೇಕು. ಆದರೆ, ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮರೆಮಾಚಿ ತಮಗೆ ಬೇಕಾದವರಿಗೆ ಹರಾಜು ಸಿಗುವಂತೆ ನೋಡಿಕೊಳ್ಳುತ್ತಾರೆ ಎಂದು ದೂರಿದರು.

ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕಿನ ಕಂದಾಯ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಸರ್ವೆ ಇಲಾಖೆಗಳಲ್ಲಿ ರೈತರ ಕೆಲಸವಾಗುತ್ತಿಲ್ಲ. ರೈತರನ್ನು ನಿತ್ಯ ಅಲೆದಾಡಿಸುತ್ತಿದ್ದಾರೆ. ರೈತರು ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದ ಅವರು ಪಿಡಿಒಗಳಿಂದಲೂ ಹೆಚ್ಚು ತೊಂದರೆಯಾಗುತ್ತಿದೆ ಎಂದು ದೂರಿದರು.

ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಕನುಗನಹಳ್ಳಿ ಜಿತೇಂದ್ರ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ತಿಪ್ಪೂರು ಲೋಕೇಶ್, ತಿಪ್ಪೂರು ಗ್ರಾಮ ಘಟಕದ ಗೌರವ ಅಧ್ಯಕ್ಷ ಬಸವರಾಜು, ಕಾರ್ಯದರ್ಶಿ ಬಾಲೂರು ದಿನೇಶ್, ರೈತ ಮುಖಂಡರಾದ ಚೀರ್ನಹಳ್ಳಿ ಕಾಳೇಗೌಡ, ಹಂಪಾಪುರ ದೇವರಾಜನಾಯಕ, ಬಾಲೂರು ಹೊಸಕೊಪ್ಪಲು ಶಿವಣ್ಣೇಗೌಡ, ತಿಪ್ಪೂರು ವಿಷ್ಣುವರ್ದನ್, ಮಂಚನಹಳ್ಳಿ ಮಾಯಿಗೌಡ, ಸೋಮಣ್ಣ, ನಾಗರಾಜ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.