ADVERTISEMENT

ಬಿ.ಶ್ರೀರಾಮುಲು ಖಾತೆ ಬದಲಾವಣೆ: ಬಿಜೆಪಿ ವಿರುದ್ಧ ಕಿಡಿ

ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ನಾಯಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 16:05 IST
Last Updated 13 ಅಕ್ಟೋಬರ್ 2020, 16:05 IST
ಬಿ.ಶ್ರೀರಾಮಲು
ಬಿ.ಶ್ರೀರಾಮಲು   

ಮೈಸೂರು: ‘ನಾಯಕ ಸಮುದಾಯದ ನಾಯಕ ಬಿ.ಶ್ರೀರಾಮಲು ಅವರ ಖಾತೆ ಬದಲಾವಣೆ ಮಾಡುವ ಮೂಲಕ, ಸಮುದಾಯವನ್ನು ರಾಜಕೀಯವಾಗಿ ತುಳಿಯಲು ಬಿಜೆಪಿ ಪ್ರಯತ್ನಿಸುತ್ತಿದೆ’ ಎಂದು ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ದ್ಯಾವಪ್ಪನಾಯಕ ಕಿಡಿಕಾರಿದರು.

‘ವಿಧಾನಸಭೆ–ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸಲು ಶ್ರೀರಾಮುಲು ಮುಖ್ಯ ಕಾರಣವಾಗಿದ್ದನ್ನೇ ರಾಷ್ಟ್ರೀಯ ಪಕ್ಷದ ಮುಖಂಡರು ಇದೀಗ ಮರೆಯುತ್ತಿದ್ದಾರೆ’ ಎಂದು ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.

‘ಚುನಾವಣೆ ಸಂದರ್ಭದಲ್ಲಿ ನಾಯಕ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಶೇ 7.5 ಮೀಸಲಾತಿ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಚನ ನೀಡಿದ್ದನ್ನೇ ಮರೆತಿದ್ದಾರೆ. ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡದೆ, ಆರೋಗ್ಯ ಖಾತೆಯನ್ನು ಕಿತ್ತುಕೊಳ್ಳುವ ಮೂಲಕ ಸಮುದಾಯವನ್ನು ತುಳಿಯುಲು ಮುಂದಾಗಿರುವುದು ಖಂಡನೀಯ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕೋವಿಡ್‌ ನಿಯಂತ್ರಣಕ್ಕಾಗಿ ರಾಜ್ಯದಾದ್ಯಂತ ಪ್ರವಾಸ ನಡೆಸಿ, ಜಿಲ್ಲಾಸ್ಪತ್ರೆಗಳಿಗೆ ಭೇಟಿ ನೀಡಿದ್ದ ಬಿ.ಶ್ರೀರಾಮುಲು ಆರೋಗ್ಯ ಖಾತೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದರು. ಆಗಿದ್ದರೂ ಖಾತೆಯನ್ನು ಕಿತ್ತುಕೊಂಡ ಹುನ್ನಾರವೇನು ? ಬಿಜೆಪಿ ಸರ್ಕಾರ ಏನೇ ಕುತಂತ್ರ ಮಾಡಿದರೂ, ಸಮುದಾಯ ಶ್ರೀರಾಮುಲು ಜೊತೆಯಲ್ಲಿದೆ. ಸಮಾಜ ಕಲ್ಯಾಣ ಇಲಾಖೆ ಖಾತೆಯೊಂದಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ದ್ಯಾವಪ್ಪ ಎಚ್ಚರಿಕೆ ನೀಡಿದರು.

ವೇದಿಕೆಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಹುಣಸೂರು, ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ್ ಚಾಮುಂಡಿಬೆಟ್ಟ, ಉಪಾಧ್ಯಕ್ಷ ರಾಘವೇಂದ್ರ, ಚನ್ನನಾಯಕ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.