ADVERTISEMENT

ತಂಬಾಕು ಬೆಲೆ ತಾರತಮ್ಯದ ಬಗ್ಗೆ ಚರ್ಚೆ: ಸಂಸದ ಸುನಿಲ್ ಬೋಸ್

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 15:31 IST
Last Updated 8 ಅಕ್ಟೋಬರ್ 2024, 15:31 IST
ಎಚ್.ಡಿ.ಕೋಟೆ ತಾಲ್ಲೂಕಿನ ಶಾಂತಿಪುರದಲ್ಲಿ ತಂಬಾಕು ಹರಾಜು ಪ್ರಕ್ರಿಯೆಗೆ ಸಂಸದ ಸುನೀಲ್ ಬೋಸ್, ಶಾಸಕ ಅನಿಲ್ ಚಿಕ್ಕಮಾದು ಜೊತೆಗೂಡಿ ಸೋಮವಾರ ಚಾಲನೆ ನೀಡಿದರು
ಎಚ್.ಡಿ.ಕೋಟೆ ತಾಲ್ಲೂಕಿನ ಶಾಂತಿಪುರದಲ್ಲಿ ತಂಬಾಕು ಹರಾಜು ಪ್ರಕ್ರಿಯೆಗೆ ಸಂಸದ ಸುನೀಲ್ ಬೋಸ್, ಶಾಸಕ ಅನಿಲ್ ಚಿಕ್ಕಮಾದು ಜೊತೆಗೂಡಿ ಸೋಮವಾರ ಚಾಲನೆ ನೀಡಿದರು   

ಎಚ್.ಡಿ.ಕೋಟೆ: ‘ತಂಬಾಕು ಮಾರುಕಟ್ಟೆಯಲ್ಲಿ ರೈತರಿಗೆ ಬೆಲೆ ತಾರತಮ್ಯದ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಸಂಸದ ಸುನಿಲ್ ಬೋಸ್ ಭರವಸೆ ನೀಡಿದರು.

ತಾಲ್ಲೂಕಿನ ಶಾಂತಿಪುರ ಗ್ರಾಮದಲ್ಲಿ ಸೋಮವಾರ ತಂಬಾಕು ಹರಾಜು ಪ್ರಕ್ರಿಯೆಗೆ ಶಾಸಕ ಅನಿಲ್ ಚಿಕ್ಕಮಾದು ಜೊತೆಗೂಡಿ ಚಾಲನೆ ನೀಡಿ ಮಾತನಾಡಿದರು.

‘ರಾಜ್ಯದಲ್ಲಿ ಅತೀ ಹೆಚ್ಚು ಮೈಸೂರು ಭಾಗದಲ್ಲಿ ತಂಬಾಕು ಬೆಳೆಯುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಭಾಗದ ಹೊಗೆಸೊಪ್ಪಿಗೆ ಹೆಚ್ಚು ಬೇಡಿಕೆ ಇದೆ’ ಎಂದರು.

ADVERTISEMENT

‘ಒಂದು ಕೆ.ಜಿ. ತಂಬಾಕಿಗೆ ₹290 ಸಾಲುವುದಿಲ್ಲ. ಒಂದು ಕೆಜಿ ಬೆಳೆಯಲು ₹250ರಿಂದ ₹260 ವೆಚ್ಚವಾಗುತ್ತಿದ್ದು, ₹350 ಬೆಲೆ ಸಿಕ್ಕರೆ ರೈತರಿಗೆ ಅನುಕೂಲವಾಗಲಿದೆ’ ಎಂದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ‘ತಾಲ್ಲೂಕಿನಲ್ಲಿ 4–5 ಸಾವಿರ ತಂಬಾಕು ಬೆಳೆಯುವ ರೈತರಿದ್ದು. 7,500  ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆದಿದ್ದಾರೆ. ಪ್ರತಿ ವರ್ಷ ಉತ್ತಮ ಬೆಲೆ ಸಿಗದೆ ತುಂಬಾ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತಾಲ್ಲೂಕಿನಲ್ಲಿ ಬೆಳೆಯುವ ತಂಬಾಕಿಗೆ ಉತ್ತಮ ಬೇಡಿಕೆ ಇದೆ’ ಎಂದರು.

ರೈತ ಪೃಥ್ವಿ ಮಾತನಾಡಿ, ‘ತಂಬಾಕಿಗೆ ಬೆಲೆ ನಿಗದಿ ಮಾಡುವಲ್ಲಿ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಒಬ್ಬ ಲೈಸೆನ್ಸ್‌ದಾರನಿಂದ ₹500 ವಿಮೆ ಕಟ್ಟಿಸಿಕೊಳ್ಳುತ್ತಾರೆ. ಆದರೆ ಪರಿಹಾರ ನೀಡುವುದು ಕಡಿಮೆ. ಒಂದು ಕೆ.ಜಿ. ಹೊಗೆಸೊಪ್ಪಿಗೆ ₹290 ನೀಡುತ್ತಿದ್ದು, ಆಂದ್ರದಲ್ಲಿ ಹೆಚ್ಚಿನ ಬೆಲೆ ನೀಡಲಾಗಿದೆ’ ಎಂದರು.

ಹರಾಜು ಅಧೀಕ್ಷಕ ನಿವೇಶ ಕುಮಾರ್ ಪಾಂಡೆ, ರೈತರಾದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕುಮಾರ್, ಕಾಳೇಗೌಡ, ಮೊತ್ತ ಬಸವರಾಜಪ್ಪ, ಪೃಥ್ವಿ ಕುಮಾರ್, ಸಂಪತ್ ಮನು ಕುಮಾರ್, ರಾಜೇಂದ್ರ, ಬೋರೇಗೌಡ, ಸತೀಶ್, ಕೆಂಪರಾಜು, ರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.