ADVERTISEMENT

ಕಬಿನಿ ಜಲಾಶಯದಿಂದ ಕೆರೆಗಳಿಗೆ ನೀರು ಬಿಡಲು ನಿರ್ಧಾರ: ಎಸ್.ಟಿ.ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 8:54 IST
Last Updated 5 ಜುಲೈ 2021, 8:54 IST
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್   

ಮೈಸೂರು: ಕಬಿನಿ ಜಲಾಶಯ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಜುಲೈ 5 ರಿಂದಲೇ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಸೋಮವಾರ ಮೈಸೂರಿನಲ್ಲಿ ನಡೆದ ಕಬಿನಿ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ‌ ವಹಿಸಿ ಅವರು ಮಾತನಾಡಿದರು.

‘ಕಬಿನಿ ಜಲಾಶಯ ವ್ಯಾಪ್ತಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಇಂದಿನ ನೀರಿನ ಲಭ್ಯತೆ ಮತ್ತು ಹಿಂದಿನ ವರ್ಷಗಳ ಅನುಭವದ ಮೇಲೆ ಈ ವ್ಯಾಪ್ತಿಯ ಎಲ್ಲಾ 52 ಕೆರೆಗಳನ್ನು ತುಂಬಿಸಲು ಇಂದಿನಿಂದಲೇ ನೀರು ಬಿಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಕಾಲುವೆ ದುರಸ್ತಿ, ಹೂಳೆತ್ತುವ ಕೆಲಸವನ್ನು ತ್ವರಿತವಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇವೆ. ನಾಲೆಯ ಕೊನೆಯ ಭಾಗದ ಕೆರೆಗೆ ಜುಲೈ ಅಂತ್ಯದ ವರೆಗೆ ನೀರು ತುಂಬಿಸದಿದ್ದರೆ ಪ್ರತಿಭಟನೆ ಕೂರುವುದಾಗಿ ಶಾಸಕರು ಹೇಳಿದ್ದಾರೆ‌. ಈ ಅವಧಿಯೊಳಗೆ ನೀರು ತುಂಬಿಸಬೇಕು ಎಂಬ ಬೇಡಿಕೆಗೆ ನನ್ನ ಸಹಮತ ಇದೆ’ ಎಂದರು.

‘52 ಕೆರೆಗಳನ್ನು ತುಂಬಿಸಲು ಸೋಮವಾರದಿಂದ 15 ದಿನಗಳವರೆಗೆ ಸುಮಾರು 1 ಟಿಎಂಸಿ ಅಡಿ ನೀರು ಬಿಡಲು ನಿರ್ಣಯ ಮಾಡಿದ್ದೇವೆ. ಜಲಾಶಯದಲ್ಲಿ ಈಗ 14.5 ಟಿಎಂಸಿ ಅಡಿ ನೀರು ಲಭ್ಯವಿದೆ. ಈ ಪೈಕಿ 5 ಟಿಎಂಸಿ ಅಡಿ ನೀರನ್ನು ನೀರಾವರಿ ಉದ್ದೇಶಕ್ಕೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್ ಕುಮಾರ್, ಸಂಸದ ಪ್ರತಾಪಸಿಂಹ, ಶಾಸಕರಾದ ಎನ್. ಮಹೇಶ್, ಸಿ.ಅನಿಲ್‌ ಕುಮಾರ್, ಅಶ್ವಿನ್ ಕುಮಾರ್, ಹರ್ಷವರ್ಧನ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಶಂಕರೇಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.