ADVERTISEMENT

ಇಳಿಮುಖ ಹಾದಿಗೆ ಮರಳಿದ ಮೈಸೂರು

ಫಲ ನೀಡದ ‘ಮಾಸ್ಟರ್‌ ಪ್ಲಾನ್‌’; 11ರಿಂದ 17ನೇ ಸ್ಥಾನಕ್ಕೆ ಕುಸಿದ ಜಿಲ್ಲೆ

ನೇಸರ ಕಾಡನಕುಪ್ಪೆ
Published 3 ಮೇ 2019, 5:02 IST
Last Updated 3 ಮೇ 2019, 5:02 IST

ಮೈಸೂರು: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 10 ರ‍್ಯಾಂಕ್‌ಗಳ ಒಳಗೆ ಜಿಲ್ಲೆ ಬರಲೇಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ‘ಮಾಸ್ಟರ್‌ ಪ್ಲಾನ್‌’ ಹಾಕಿದ್ದು ವ್ಯರ್ಥವಾಗಿದೆ. ಫಲಿತಾಂಶದಲ್ಲಿ ಏರಿಕೆಯಾಗುವ ಬದಲು ತೀವ್ರ ಗತಿಯಲ್ಲಿ ಇಳಿಕೆಯಾಗಿ ಮುಖಭಂಗವಾಗಿದೆ.

ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸಾಮಾನ್ಯವಾಗಿ ಏರು– ಪೇರು ಇದ್ದೇ ಇರುತ್ತದೆ. 2015–16ನೇ ಸಾಲಿನಲ್ಲಿ ಜಿಲ್ಲೆಯು 8ನೇ ಸ್ಥಾನ ಪಡೆಯುವ ಮೂಲಕ ಅಲ್ಪಸಾಧನೆಯನ್ನು ಮಾಡಿತ್ತು. 2016–17ರಲ್ಲಿ 21ನೇ ಸ್ಥಾನಕ್ಕೆ ಕುಸಿದು ಬೇಸರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಾದ ಬಳಿಕ ಎಚ್ಚೆತ್ತುಕೊಂಡಿದ್ದ ಇಲಾಖೆಯು ವಿವಿಧ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವ ಮೂಲಕ 2017–18ರಲ್ಲಿ 11ನೇ ಸ್ಥಾನಕ್ಕೆ ಏರುವ ಮೂಲಕ ನಿಟ್ಟುಸಿರು ಬಿಡುವಂತೆ ಆಗಿತ್ತು. ಆದರೆ, ಈಗ ಮತ್ತೆ 17ನೇ ಸ್ಥಾನಕ್ಕೆ ಕುಸಿಯುವ ಮೂಲಕ ಬೇಸರ ಮನೆಮಾಡಿದೆ.

ಏನಿತ್ತು ಮಾಸ್ಟರ್ ಪ್ಲಾನ್‌?: ಜಿಲ್ಲೆಯ ಫಲಿತಾಂಶವನ್ನು ಶತಾಯಗತಾಯ 10 ಸ್ಥಾನದೊಳಗೆ ತರಬೇಕೆಂಬ ನಿಟ್ಟಿನಲ್ಲಿ ಇಲಾಖೆಯು ಸರಣಿ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಹಮ್ಮಿಕೊಂಡಿತ್ತು. ಇವುಗಳ ‍ಪೈಕಿ ಪ್ರಮುಖವಾಗಿ ‘ವಾಟ್ಸ್‌ಆ್ಯಪ್‌’ ಮೂಲಕ ಪೋಷಕರ ಸಂಪರ್ಕ ಕಾರ್ಯಕ್ರಮ ವಿಶೇಷ ಅನ್ನಿಸಿಕೊಂಡಿತ್ತು.

ADVERTISEMENT

2018–19ನೇ ಸಾಲಿನಲ್ಲಿ ಶೇ 50ಕ್ಕಿಂತಲೂ ಕಡಿಮೆ ಸಾಧನೆ ಮಾಡಿದ್ದ ಅನುದಾನಿತ ಶಾಲೆಗಳನ್ನು ಗುರುತಿಸಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಆದ್ಯತೆಯನ್ನು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಜಾರಿಗೊಂಡಿತ್ತು. ಮಕ್ಕಳ ಕಲಿಕೆಯ ಸ್ಥಿತಿಗತಿಗಳನ್ನು ಪೋಷಕರೊಂದಿಗೆ ‘ವಾಟ್ಸ್‌ಆ್ಯಪ್’ ಮೂಲಕ ಹಂಚಿಕೊಂಡು ಮನೆಯಲ್ಲಿ ಪೂರಕ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸುವಂತೆ ಕೋರಿಕೊಳ್ಳಲಾಗುತ್ತಿತ್ತು. ಆದರೆ, ಈ ಯೋಜನೆಯು ಫಲ ನೀಡಿಲ್ಲ.

ಅಂತೆಯೇ, ಶಾಲಾಮಟ್ಟ, ತಾಲ್ಲೂಕುಮಟ್ಟ ಹಾಗೂ ಜಿಲ್ಲಾಮಟ್ಟದಲ್ಲಿ ಒಟ್ಟು 5 ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ‘ವಿಶ್ವಾಸ ಕಿರಣ’ ಎಂಬ ಕಾರ್ಯಕ್ರಮವನ್ನು ನಡೆಸಿ ವಿಶೇಷ ತರಗತಿಗಳನ್ನು ನಡೆಸಲಾಗಿತ್ತು. ಆಯ್ದ ಶಾಲೆಗಳಲ್ಲಿ ಸಂಜೆ 6ರಿಂದ ರಾತ್ರಿ 8.30ರವರೆಗೂ ವಿಶೇಷ ತರಗತಿಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಿಗೆ ಮಾತ್ರ ಪ್ರೋತ್ಸಾಹ ನೀಡಿದರೆ ಸಾಲದೆಂದು ಶಿಕ್ಷಕರಿಗೂ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರಗಳನ್ನೂ ಹಮ್ಮಿಕೊಳ್ಳಲಾಗಿತ್ತು.

‘ಹಾಗೆಂದು, ಈ ಫಲಿತಾಂಶವನ್ನು ಕಳಪೆಯಿಂದ ಬಿಂಬಿಸಬೇಕಿಲ್ಲ. ನಮ್ಮಲ್ಲಿ ಪಾರದರ್ಶಕವಾಗಿ ಪರೀಕ್ಷೆಗಳು ನಡೆದಿವೆ. ‍ಪರೀಕ್ಷಾ ಅಕ್ರಮ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬರನ್ನು ಡಿಬಾರ್‌ ಮಾಡಲಾಗಿದೆ. ರಾಜ್ಯದ ಒಟ್ಟಾರೆ ಫಲಿತಾಂಶ (ಶೇ 73.70) ಕ್ಕೆ ಹೋಲಿಸಿದಲ್ಲಿ ನಮ್ಮ ಫಲಿತಾಂಶ (ಶೇ 80.65) ಶೇ 6.95ರಷ್ಟು ಏರಿಕೆಯಾಗಿದೆ’ ಎಂದು ಡಿಡಿಪಿಐ ಪಾಂಡುರಂಗ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.