ADVERTISEMENT

ತಾಪಮಾನ ಕುಸಿತ: ಕಾಡಲ್ಲಿ ಹೆಚ್ಚಿದ ಚಳಿ

ನಸುಕಿನಲ್ಲಿ ಮೈ ನಡುಗಿಸುವ ಚಳಿ: ಮಧ್ಯಾಹ್ನದಲ್ಲೂ ತಂಪಿನ ಅನುಭವ

ಡಿ.ಬಿ, ನಾಗರಾಜ
Published 12 ನವೆಂಬರ್ 2020, 6:03 IST
Last Updated 12 ನವೆಂಬರ್ 2020, 6:03 IST

ಮೈಸೂರು: ವಾತಾವರಣದ ಗರಿಷ್ಠ–ಕನಿಷ್ಠ ತಾಪಮಾನದಲ್ಲಿ ಕೊಂಚ ಕುಸಿತ ಕಂಡು ಬಂದಿದೆ. ಇದರಿಂದ ಚಳಿಯ ಅನುಭವ ದಿನದಿಂದ ದಿನಕ್ಕೆ ಹೆಚ್ಚಿದೆ.

ನವೆಂಬರ್‌ ಮೊದಲವಾರವಿಡೀ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಎರಡನೇ ವಾರದ ಆರಂಭದಿಂದ ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ ಇಳಿಕೆಯಾಗಿದ್ದು, ಚಳಿಯ ಅನುಭವ ಹೆಚ್ಚಲಾರಂಭಿಸಿದೆ. ಇದರ ಪರಿಣಾಮ ಬಹುತೇಕರು ಬೆಚ್ಚನೆಯ ಉಡುಪು, ಹೊದಿಕೆಗಳಿಗೆ ಮೊರೆ ಹೋಗಿರುವ ಚಿತ್ರಣ ವಿವಿಧೆಡೆ ಗೋಚರಿಸುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ಚಳಿಯ ತೀವ್ರತೆಯನ್ನು ಕೊಂಚವಾದರೂ ಕಡಿಮೆ ಮಾಡಿಕೊಳ್ಳಲು ಹಲವರು ಮುಸ್ಸಂಜೆ, ರಾತ್ರಿ, ನಸುಕಿನ ವೇಳೆ ಬೆಂಕಿ ಕಾಯಿಸಿಕೊಳ್ಳುವ ಚಿತ್ರಣವೂ ಕಂಡು ಬರುತ್ತಿದೆ.

ADVERTISEMENT

‘ಕಾಡಂಚಿನಲ್ಲಿ ಹಾಗೂ ಕಾಡಿನ ನಡುವೆ ಚಳಿಯ ತೀವ್ರತೆ ಹೆಚ್ಚಿದೆ. ಎರಡ್ಮೂರು ದಿನದಿಂದ ಮುಸ್ಸಂಜೆ 5.30ರ ವೇಳೆಗೆ ಸಹಿಸಲಾಗದ ಚಳಿಯ ಅನುಭವವಾಗುತ್ತಿದೆ. ನಾಗರಹೊಳೆ ಅಭಯಾರಣ್ಯದ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ವಲಯದಲ್ಲಿ ಚಳಿಯ ತೀವ್ರತೆ ತುಸು ಕಡಿಮೆಯಿದ್ದರೆ, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿಗೆ ಒಳಪಡುವ ನಾಗರಹೊಳೆ ವಲಯದಲ್ಲಿ ಚಳಿಯ ಅನುಭವ ಹೆಚ್ಚಿರುತ್ತದೆ’ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಮೂರು ಡಿಗ್ರಿ ಕುಸಿತ...
ಮೈಸೂರು
: ಮೈಸೂರಿನ ಹೊರ ವಲಯದಲ್ಲಿರುವ ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಕೃಷಿ ಹವಾಮಾನ ಕ್ಷೇತ್ರ ವಿಭಾಗದಲ್ಲಿ ನ.8ರ ಭಾನುವಾರ ಗರಿಷ್ಠ ಉಷ್ಣಾಂಶ 30 ಡಿಗ್ರಿ, ಕನಿಷ್ಠ ಉಷ್ಣಾಂಶದ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ನ.9ರ ಸೋಮವಾರ ಗರಿಷ್ಠ ಉಷ್ಣಾಂಶ 30 ಡಿಗ್ರಿಯಿದ್ದರೆ, ಕನಿಷ್ಠ ತಾಪಮಾನ 19 ಡಿಗ್ರಿಯಿತ್ತು. ಕನಿಷ್ಠ ತಾಪಮಾನದಲ್ಲಿ ಒಂದು ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಿತ್ತು. ನ.10ರ ಮಂಗಳವಾರ ಗರಿಷ್ಠ–ಕನಿಷ್ಠ ತಾಪಮಾನ ಎರಡೂ, ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗಿದ್ದರಿಂದ, ಏಕಾಏಕಿ ಚಳಿಯ ತೀವ್ರತೆ ಹೆಚ್ಚಿದೆ ಎಂದು ವಿಭಾಗದ ಮೂಲಗಳು ತಿಳಿಸಿವೆ.

‘ಬೆಳಗಿನ ವೇಳೆ ಗಾಳಿಯಲ್ಲಿನ ತೇವಾಂಶ ಶೇ 85ರಿಂದ ಶೇ 87ರಷ್ಟಿರುವುದು ಸಹ ಚಳಿಯ ತೀವ್ರತೆ ಹೆಚ್ಚಲು ಕಾರಣವಾಗಿದೆ. ಇನ್ನೂ ಕೆಲವು ದಿನ ವಾತಾವರಣದಲ್ಲಿನ ತೇವಾಂಶ ಹೆಚ್ಚಿರಲಿದೆ. ಆದ್ದರಿಂದ ಚಳಿಯ ಅನುಭವವೂ ಹೆಚ್ಚಾಗಲಿದೆ’ ಎಂದು ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಸಹ ಸಂಶೋಧಕ ಎನ್.ನರೇಂದ್ರಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.