ADVERTISEMENT

ಸಂವಿಧಾನ ರಕ್ಷಣೆಗೆ ಬಿಜೆಪಿ ಸೋಲಿಸಿ: ಯು.ಬಸವರಾಜ್ ಕರೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 13:07 IST
Last Updated 7 ಏಪ್ರಿಲ್ 2024, 13:07 IST
<div class="paragraphs"><p>ಯು.ಬಸವರಾಜ್ </p></div>

ಯು.ಬಸವರಾಜ್

   

ಮೈಸೂರು: ‘ತ್ಯಾಗ– ಬಲಿದಾನದ ಮೂಲಕ ಪಡೆದ ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವವನ್ನು ನಾಶ ಮಾಡಲು ನರೇದ್ರ ಮೋದಿ ಹೊರಟಿದ್ದು, ಅದಕ್ಕೆ ಅವಕಾಶ ಕೊಡದಿರಲು ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು’ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ್ ಕರೆ ನೀಡಿದರು.

ಇಲ್ಲಿನ ಕೆ.ಆರ್. ಮೊಹಲ್ಲಾದ ನಾಲಾ ಬೀದಿಯ ಮೈಸೂರು ಕೋ–ಆಪರೇಟಿವ್ ಸೊಸೈಟಿ ಸಮುದಾಯ ಭವನದಲ್ಲಿ ಭಾರತ ಕಮ್ಯುನಿಸ್ಟ್ (ಮಾರ್ಕ್ಸ್‌ವಾದಿ) ಪಕ್ಷ ಜಿಲ್ಲಾ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ರಾಜಕೀಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಒಳ್ಳೆಯ ದಿನಗಳನ್ನು ತರುತ್ತೇವೆ ಎಂದು ಹೇಳಿ ಅಧಿಕಾರ ಅನುಭವಿಸಿದ ಮೋದಿ ಜನರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡುತ್ತೇವೆಂದ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಲು ಸಾಧ್ಯವಿಲ್ಲವೆಂದು ರೈತರಿಗೆ ಮೋಸ ಮಾಡಿದೆ. ರಸಗೊಬ್ಬರ, ಕೃಷಿ ಪರಿಕರಗಳ ಬೆಲೆ ಹೆಚ್ಚಳ ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ವಿರುದ್ಧ ವಾಗ್ದಾಳಿ:

‘ಸಂವಿಧಾನದ ಅಡಿಯಲ್ಲೇ ಸರ್ಕಾರ ರಚಿಸಿ ಈಗ ಸಂವಿಧಾನ, ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದ್ದಾರೆ. ಪ್ರಭುತ್ವವನ್ನು ಪ್ರಶ್ನೆ ಮಾಡುವವರನ್ನು ಜೈಲಿಗಟ್ಟುವ, ಬೆಳೆಗಳಿಗೆ ನ್ಯಾಯಯುತ ಬೆಲೆ ಕೇಳುವ–ಕೆಲಸಕ್ಕೆ ಕೂಲಿ ಕೇಳುವ ರೈತ– ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿದ್ದೇ ಮೋದಿಯ ಅವಧಿಯ ಒಳ್ಳೆಯ ದಿನಗಳಾಗಿವೆ’ ಎಂದು ಟೀಕಿಸಿದರು.

‘ಉದ್ಯೋಗ ಖಾತ್ರಿ ಯೋಜನೆ ಅಡಿ ಗ್ರಾಮೀಣ ರೈತರು– ಕೂಲಿಕಾರರಿಗೆ ನೂರು ದಿನಗಳ ಕೆಲಸ ನೀಡಬೇಕು, ಇಲ್ಲದಿದ್ದರೆ ನಿರುದ್ಯೋಗ ಭತ್ಯೆ ಕೊಡಬೇಕು ಎಂಬ ಅಂಶವನ್ನು ತಿದ್ದುಪಡಿ ಮಾಡಿದ್ದು ಕೇಂದ್ರ ಸರ್ಕಾರದ ಕೂಲಿಕಾರ ವಿರೋಧಿ ನೀತಿಯನ್ನು ತೋರಿಸುತ್ತದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ಮಾತನಾಡಿ, ‘ಮೈಸುರು ಜಿಲ್ಲೆಗೆ ಬಿಜೆಪಿಯ ಕೊಡುಗೆ ಶೂನ್ಯ’ ಎಂದು ಆರೋಪಿಸಿದರು.

‘ಕೆಲವು ಮುಖಬೆಲೆಯ ನೋಟುಗಳ ಚಲಾವಣೆ ರದ್ದು, ಅವೈಜ್ಞಾನಿಕ ಜಿಎಸ್‌ಟಿಯನ್ನು ಜಾರಿಗೆ ತರುವ ಮೂಲಕ ಜನಸಾಮಾನ್ಯರಿಗೆ ಬಿಜೆಪಿ ಸರ್ಕಾರ ತೀವ್ರ ತೊಂದರೆ ನೀಡಿದೆ. ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸುಮಾರು ಮೂರು ಲಕ್ಷ ಉದ್ಯೋಗ ನಷ್ಟವಾಗಿದೆ. 26ಸಾವಿರ ಸಣ್ಣ ಹಾಗೂ ಗುಡಿ ಕೈಗಾರಿಕೆಗಳು ಮುಚ್ಚಿವೆ. ಇದರಿಂದಾಗಿ ನೂರಾರು ಕುಟುಂಬಗಳು ಅತಂತ್ರವಾಗಿವೆ. ಆದರೂ ಮೋದಿ ಸರ್ಕಾರ ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ಹಾಗೂ ಉದ್ಯೋಗದ ಸೃಷ್ಟಿಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ರೈತ ವಿರೋಧಿ ನೀತಿಗಳಿಂದಾಗಿ ಹಾಗೂ ಬೆಳೆಗೆ ಸೂಕ್ತ ಬೆಲೆ ಸಿಗದೆ ಜಿಲ್ಲೆಯಲ್ಲಿ 2020ರಿಂದ ಇಲ್ಲಿಯವರೆಗೆ 310 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಿದ್ದರೂ ನೆರವಿಗೆ ಬಾರದ ಮೋದಿ ಸರ್ಕಾರವನ್ನು ಏಕೆ ಬೆಂಬಲಿಸಬೇಕು’ ಎಂದು ಪ್ರಶ್ನಿಸಿದರು.

‘ಮೈಸೂರನ್ನು ಪ್ಯಾರಿಸ್ ಮಾಡುವುದಾಗಿ ಹತ್ತು ವರ್ಷದ ಹಿಂದೆ ಹೇಳಿದ್ದ ಮೋದಿ ಇಲ್ಲಿಗೆ ಹತ್ತಾರು ಬಾರಿ ಬಂದರೂ ಪ್ರವಾಸೋದ್ಯಮದ ಬಗ್ಗೆ ಒಂದೂ ಮಾತನಾಡದಿರುವುದು ಅವರ ಜನ ವಿರೋಧಿ ನೀತಿಯನ್ನು ತೋರಿಸುತ್ತದೆ. ಆದ್ದರಿಂದ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು’ ಎಂದು ಕೋರಿದರು.

ಬಿಜೆಪಿಯನ್ನು ಸೋಲಿಸಿ ಇಂಡಿಯಾ ಒಕ್ಕೂಟವನ್ನು ಗೆಲ್ಲಿಸುವ ನಿರ್ಣಯವನ್ನು ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.

ಜಿಲ್ಲಾ ಸಮಿತಿ ಸದಸ್ಯರಾದ ಕೆ.ಬಸವರಾಜ್, ಎನ್. ವಿಜಯಕುಮಾರ್, ಜಿ.ಜಯರಾಂ, ಲ.ಜಗನ್ನಾಥ್, ವಿ.ಬಸವರಾಜ್, ಬಿ.ಎಂ. ಶಿವಣ್ಣ, ಜಿ. ರಾಜೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.