ADVERTISEMENT

ಉತ್ತರ ಪತ್ರಿಕೆ ಅದಲು ಬದಲು ಪ್ರಕರಣ: ಉನ್ನತ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 5:34 IST
Last Updated 24 ಜೂನ್ 2021, 5:34 IST

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ ಎನ್ನಲಾದ ಉತ್ತರ ಪತ್ರಿಕೆ ಅದಲು ಬದಲು ಪ್ರಕರಣವನ್ನು ಸಿಬಿಐ ಅಥವಾ ಸಿಐಡಿ ತನಿಖೆಗೆ ವಹಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿಯ ಸದಸ್ಯರು ಮನವಿ ಮಾಡಿದ್ದಾರೆ.

ಈ ಕುರಿತು ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ ನೇತೃತ್ವದ ನಿಯೋಗವು ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅವರನ್ನು ಬುಧವಾರ ಭೇಟಿ ಮಾಡಿ ಚರ್ಚೆ ನಡೆಸಿತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಸೆಮಿಸ್ಟರ್‌ನ ಎಲ್ಲ ಉತ್ತರ ಪತ್ರಿಕೆಗಳನ್ನು ಪರಿಶೀಲನೆಗೊಳಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ADVERTISEMENT

ವಿಶ್ವವಿದ್ಯಾನಿಲಯವು ಪರೀಕ್ಷಾ ಕೆಲಸ ನಿರ್ವಹಿಸಲು ಹೆಚ್ಚಿನ ಹಣವನ್ನು ಗುತ್ತಿಗೆ ನೀಡಿರುವ ಕಂಪನಿಗೆ ನೀಡುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆ. ಮೌಲ್ಯಮಾಪನದಂತಹ ಸೂಕ್ಷ್ಮ ಕೆಲಸವನ್ನೂ ವಿ.ವಿ ಹೊರಗುತ್ತಿಗೆ ನೀಡುವುದು, ಅಂಕಪಟ್ಟಿ ಮುದ್ರಣದಂತಹ ಕೆಲಸವನ್ನೂ ಖಾಸಗಿ ಕಂಪನಿಗಳಿಗೆ ವಹಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ನೈಜ ಅಂಕಗಳಿಗಿಂತ ಕಡಿಮೆ ಅಂಕ ನಮೂದಿಸಿ ಮರು ಮೌಲ್ಯಮಾಪನದ ರೂಪದಲ್ಲಿ ₹ 1 ಸಾವಿರ ಶುಲ್ಕವನ್ನು ಪಡೆಯಲಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರುತ್ತಾರೆ. ಈ ಕುರಿತು ಪರಿಶೀಲನೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.