ADVERTISEMENT

ಮೈಸೂರಿಗೆ ಮೋದಿ ಕೊಡುಗೆ ಏನು? ಪಟ್ಟಿ ಬಿಡುಗಡೆಗೆ ಎಂ. ಲಕ್ಷ್ಮಣ ಸವಾಲು

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 14:26 IST
Last Updated 1 ಜೂನ್ 2022, 14:26 IST
ಎಂ. ಲಕ್ಷ್ಮಣ
ಎಂ. ಲಕ್ಷ್ಮಣ   

ಮೈಸೂರು: ‘ಮೈಸೂರನ್ನು ಪ್ಯಾರಿಸ್ ಮಾಡುವುದಾಗಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಸಭೆಯಲ್ಲಿ ಇಲ್ಲೇ ಹೇಳಿಕೆ ನೀಡಿದ್ದರು. ಅವರು ಪ್ರಧಾನಿಯಾದ ನಂತರ ನಗರಕ್ಕೆ ನೀಡಿದ ಕೊಡುಗೆಗಳೇನು ಎನ್ನುವ ಪಟ್ಟಿಯನ್ನು ಬಿಡುಗಡೆ ಮಾಡಬೇಕು’ ಎಂದು ‌ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಸವಾಲು ಹಾಕಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಯೋಗ ದಿನದ ಕಾರ್ಯಕ್ರಮಕ್ಕೆ ಬರಲಿರುವ ಪ್ರಧಾನಿ ಅವರು ಅದಕ್ಕೆ ಮುನ್ನ ಜನತೆಗೆ ಮಾಹಿತಿ ಕೊಡಲಿ. ಸುಳ್ಳು ಹೇಳುವುದರಲ್ಲಿ ಹಲವು ಪಿಎಚ್‌ಡಿಗಳನ್ನು ಪಡೆದಿರುವ ಪ್ರತಾಹ ಸಿಂಹ ಅವರಾದರೂ ಉತ್ತರ ಕೊಡಲಿ. ಕರ್ನಾಟಕದ ಮೋದಿ ಎನಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯಾದರೂ ನೀಡಲಿ’ ಎಂದು ಒತ್ತಾಯಿಸಿದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೈಸೂರು ಬಹಳ ಹಿಂದಕ್ಕೆ ಹೋಗಿದೆ. ಮೋದಿ ಅವರು ಈ ಭಾಗದ ಜನರಿಗೆ ಮೋಸ ಮಾಡಿದ್ದಾರೆ’ ಎಂದು ಆರೋಪಿಸಿದರು.‌

ADVERTISEMENT

‘ಹಣದುಬ್ಬರ ಹೆಚ್ಚಾಗುವಂತೆ ಮಾಡಿದ್ದು, 6 ಕೋಟಿ ಜನರು ಉದ್ಯೋಗ ಕಳೆದುಕೊಳ್ಳುವಂತೆ ಪರಿಸ್ಥಿತಿ ನಿರ್ಮಿಸಿದ್ದು, ದೇಶದ ಆರ್ಥಿಕತೆ ಹಾಳು ಮಾಡಿದ್ದೇ ಈ ಸರ್ಕಾರದ ಸಾಧನೆಯಾಗಿದೆ’ ಎಂದು ದೂರಿದರು.

‘ಸರ್ಕಾರ ರಚನೆಗೆ ಬೆಂಬಲ ಕೊಟ್ಟಿದ್ದ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ನಾಚಿಕೆಯಾಗಬೇಕು. ನೀಡಿದ್ದ ಬೆಂಬಲ ಉಳಿಸಿಕೊಳ್ಳಲಾಗದ ಯೋಗ್ಯತೆ ಇಲ್ಲದೆ ಈಗ ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲೆಂದು ಕುಮಾರಸ್ವಾಮಿ ಅವರು ಪರೋಕ್ಷವಾಗಿ ಬೆಂಬಲ ಕೊಡುತ್ತಿದ್ದಾರೆ. ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲಿ’ ಎಂದರು.

‘ರೈತ ನಾಯಕ ರಾಕೇಶ್ ಟಿಕಾಯತ್‌ ಅವರ ಮೇಲೆ ‌ಬಿಜೆಪಿ ಪ್ರಾಯೋಜಿತ ಗೂಂಡಾಗಳು ಮೇಲೆ ದಾಳಿ ನಡೆಸಿದ್ದಾರೆ. ಆ ಪ್ರಕರಣದ ಪ್ರಮುಖ‌ ಆರೋಪಿ ಭರತ್ ಶೆಟ್ಟಿ ಬಿಜೆಪಿ ನಾಯಕರೊಂದಿಗೆ ಇರುವ ಫೋಟೊಗಳು ಹರಿದಾಡುತ್ತಿವೆ. ಇವೆಲ್ಲವನ್ನೂ ನೋಡಿದರೆ ಅದೊಂದು ಪೂರ್ವ ಯೋಜಿತ ದಾಳಿ ಎನ್ನುವುದು ಸಾಬೀತಾಗುತ್ತದೆ. ಟಿಕಾಯತ್ ಅವರನ್ನು ಕೊಲ್ಲುವುದಕ್ಕೆ ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಇದೆ’ ಎಂದು ಆರೋಪಿಸಿದರು.

‘ಬಿಜೆಪಿ ವಿರುದ್ಧ ಮಾತನಾಡುವವರ ಮೇಲೆ ದಾಳಿ ನಡೆಸಲಾಗುತ್ತದೆ ಎನ್ನುವ ಸಂದೇಶವನ್ನು ಈ ಮೂಲಕ ನೀಡಲಾಗಿದೆ. ಘಟನೆ ಕುರಿತು ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು’ ಎಂದು ಒತ್ತಾಯಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.