
ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ದಿ.ದೇವರಾಜ ಅರಸು ಅವರ ಮನೆ ಜೀರ್ಣೋದ್ಧಾರಗೊಳಿಸಿ ವಸ್ತು ಸಂಗ್ರಹಾಲಯವನ್ನಾಗಿ ಮಾಡಬೇಕು ಎಂದು ನಿಂಗರಾಜ್ ಮಲ್ಲಾಡಿ, ನಾಗರಾಜ್, ಬೋಗಪ್ಪ, ಗಣೇಶ್ ಒತ್ತಾಯಿಸಿದರು.
ಹುಣಸೂರು: ‘ರಾಜ್ಯದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಆಡಳಿತದ ದಾಖಲೆ ಮುರಿದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ , ದೇವರಾಜ ಅರಸು ಜನ್ಮ ಸ್ಥಳ ಮತ್ತು ಮನೆ ಜೀರ್ಣೋದ್ಧಾರಗೊಳಿಸಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶ ನೀಡಬೇಕು’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ನಿಂಗರಾಜ್ ಮಲ್ಲಾಡಿ ಮನವಿ ಮಾಡಿದ್ದಾರೆ.
ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ದೇವರಾಜ ಅರಸು ಹುಟ್ಟಿ ಬೆಳೆದ ಮನೆ ಶಿಥಿಲವಾಗಿದ್ದು, ಇದನ್ನು ರಾಜ್ಯದ ಆಸ್ತಿಯನ್ನಾಗಿ ಸಂರಕ್ಷಿಸಬೇಕು. ಜೀರ್ಣೋದ್ಧಾರಗೊಳಿಸಿ ಭವಿಷ್ಯದ ಪೀಳಿಗೆ ದೇವರಾಜ ಅರಸು ತಮ್ಮ ಆಡಳಿತಾವಧಿಯಲ್ಲಿ ತುಳಿತಕ್ಕೆ ಒಳಗಾದ ಸಮುದಾಯಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಬೇಕು. ಕಲ್ಲಹಳ್ಳಿ ಗ್ರಾಮದ ದೇವರಾಜ ಅರಸು ನಿವಾಸವನ್ನು ಶೀಘ್ರ ಜೀರ್ಣೋದ್ಧಾರಗೊಳಿಸಬೇಕು
ಎಂದರು.
ಅರಸು ಅವರ ಜನ್ಮಶತಮಾನೋತ್ಸವಕ್ಕೆ ಸಿದ್ದರಾಮಯ್ಯ ಸರ್ಕಾರ ₹10 ಕೋಟಿ ಅನುದಾನ ನೀಡಿ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಿತ್ತು. ಈಗ ಅರಸು ಮನೆ ಜೀರ್ಣೋದ್ಧಾರಕ್ಕೆ ಕನಿಷ್ಠ ₹ 50 ಕೋಟಿ ಅನುದಾನ ನೀಡಿ ಅರಸು ವಸ್ತು ಪ್ರದರ್ಶನ ಮತ್ತು ಗ್ರಂಥಾಲಯ ನಿರ್ಮಿಸಬೇಕು ಎಂದರು. ಬೋವಿ ಸಮುದಾಯದ ಮುಖಂಡ ಗಣೇಶ್ ಮತ್ತು ಚಿಲ್ಕುಂದ ಗ್ರಾಮದ ಮುಖಂಡ ನಾಗರಾಜ್, ಕಲ್ಲಹಳ್ಳಿ ಗ್ರಾಮದ ಮುಖಂಡ ಬೋಗಪ್ಪ ಮತ್ತು ಉಳುವವನೇ ಭೂ ಒಡೆಯ ಕಾಯ್ದೆಯ ರಾಜ್ಯದ ಪ್ರಥಮ ಫಲಾನುಭವಿ ಚೆಲುವಯ್ಯನ ಮಗ ಕರಿಯಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.