ADVERTISEMENT

ಅವಗಣನೆಗೆ ದೇವರಾಜ ಅರಸು ಪೀಠ

ಆಗದ ಸಂದರ್ಶಕ ಪ್ರಾಧ್ಯಾಪಕ ನೇಮಕ l ಸುಸಜ್ಜಿತ ಕಟ್ಟಡಕ್ಕೆ ಬೀಗ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 4:22 IST
Last Updated 1 ನವೆಂಬರ್ 2025, 4:22 IST
ಮಾನಸಗಂಗೋತ್ರಿಯಲ್ಲಿರುವ ಡಿ.ದೇವರಾಜ ಅರಸು ಅಧ್ಯಯನ ಪೀಠದ ‘ಅರಸು ಭವನ’ಕ್ಕೆ ಬೀಗ ಹಾಕಲಾಗಿದೆ –ಪ್ರಜಾವಾಣಿ ಚಿತ್ರ/ ಹಂಪಾ ನಾಗರಾಜ 
ಮಾನಸಗಂಗೋತ್ರಿಯಲ್ಲಿರುವ ಡಿ.ದೇವರಾಜ ಅರಸು ಅಧ್ಯಯನ ಪೀಠದ ‘ಅರಸು ಭವನ’ಕ್ಕೆ ಬೀಗ ಹಾಕಲಾಗಿದೆ –ಪ್ರಜಾವಾಣಿ ಚಿತ್ರ/ ಹಂಪಾ ನಾಗರಾಜ    

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ‘ಅಭಿವೃದ್ಧಿ ಅಧ್ಯಯನ ಸಂಸ್ಥೆ’ಯ (ಐಡಿಎಸ್‌) ಡಿ.ದೇವರಾಜ ಅರಸು ಪೀಠ ಅವಗಣನೆಗೆ ಒಳಗಾಗಿದ್ದು, ವರ್ಷದಿಂದ ಸಂದರ್ಶಕ ಪ್ರಾಧ್ಯಾಪಕರ ನೇಮಕವೂ ಆಗಿಲ್ಲ. 

ಶೋಷಿತರು, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಶ್ರಮಿಸಿದ ಅರಸು ನೆನಪಿನಲ್ಲಿ ಸ್ಥಾಪನೆಯಾದ, ಪ್ರತ್ಯೇಕ ಕಟ್ಟಡ ಹೊಂದಿರುವ ಪೀಠದ ಬಾಗಿಲು ವರ್ಷದಿಂದ ಮುಚ್ಚಿದೆ. ಆವರಣವು ತ್ಯಾಜ್ಯದಿಂದ ತುಂಬಿದೆ.  

₹ 5 ಲಕ್ಷ ಠೇವಣಿ: ‘2001ರಲ್ಲಿ ಆಗಿನ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಕೆ.ಪರಮೇಶ್ವರ ಅವರ ಅವಧಿಯಲ್ಲಿ ಪೀಠ ಸ್ಥಾಪನೆಯಾಗಿತ್ತು. ನಿರ್ವಹಣೆಗೆ ₹ 5 ಲಕ್ಷ ಅನುದಾನ ಬಿಡುಗಡೆ ಆಗಿತ್ತು. ಆ ಠೇವಣಿ ಹಣದ ಬಡ್ಡಿಯಲ್ಲಿ ಸಂಶೋಧನೆ, ವಿಚಾರ ಸಂಕಿರಣ, ಕಾರ್ಯಾಗಾರ ನಡೆಯುತ್ತಿತ್ತು’ ಎನ್ನುತ್ತಾರೆ ಪೀಠದ ನಿರ್ದೇಶಕರಾಗಿ ನಿವೃತ್ತರಾಗಿರುವ ಪ್ರೊ.ಕೆ.ವಿ.ಐಯ್ಯಣ್ಣ.

ADVERTISEMENT

‘ಅರಸು ಅವರ ಕಲ್ಯಾಣ ಕಾರ್ಯಕ್ರಮ ನೆನೆಯುವುದಕ್ಕಾಗಿ ಜನ್ಮದಿನ ಹಾಗೂ ಪುಣ್ಯಸ್ಮರಣೆ ಮಾಡಲು ಕಾಯಂ ನಿರ್ದೇಶಕರೂ ಇಲ್ಲ. ಸಂದರ್ಶಕ ಪ್ರಾಧ್ಯಾಪಕರೂ ಇಲ್ಲ. ಹೀಗಾಗಿ ವರ್ಷದಿಂದ ಯಾವುದೇ ಕಾರ್ಯಕ್ರಮವೂ ನಡೆದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

ಅರಸು ಭವನ: ಅಡಗೂರು ಎಚ್‌.ವಿಶ್ವನಾಥ್ ಅವರ ಸಂಸದ ನಿಧಿಯಿಂದ ‘ಅರಸು ಭವನ’ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಆಗಿತ್ತು. ನಂತರ 2016ರಲ್ಲಿ ಆಗಿನ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಅವಧಿಯಲ್ಲಿ ವಿಶ್ವವಿದ್ಯಾಲಯದಿಂದಲೂ ಅನುದಾನ ಸಿಕ್ಕಿತ್ತು. 2017ರ ನ.19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ, ಅರಸು ಭಾವಚಿತ್ರವನ್ನು ಅನಾವರಣಗೊಳಿಸಿದ್ದರು. 

ಎರಡು ಕೊಠಡಿಗಳು ಹಾಗೂ ವಿಶಾಲ ಸಭಾಂಗಣ ಹೊಂದಿರುವ ಕಟ್ಟಡದಲ್ಲಿ ವಿಚಾರಸಂಕಿರಣಗಳು, ಕಾರ್ಯಾಗಾರಗಳು ನಡೆಯುತ್ತಿದ್ದವು. ಪ್ರೊ.ವಿ.ಕೆ.ನಟರಾಜ್‌, ಪ್ರೊ.ಮಿಶ್ರಾ, ಪ್ರೊ.ಅಲೆಕ್ಸಾಂಡರ್ ಸೇರಿದಂತೆ 8ಕ್ಕೂ ಹೆಚ್ಚು ಸಂದರ್ಶಕ ಪ್ರಾಧ್ಯಾಪಕರು ಇಲ್ಲಿ ಸೇವೆ ಸಲ್ಲಿಸಿದ್ದರು. 

ಕೇಂದ್ರವಾಗಲಿ: ‘ಅರಸು ಪೀಠವನ್ನು ಅಂಬೇಡ್ಕರ್ ಸಂಶೋಧನಾ ವಿಸ್ತರಣಾ ಕೇಂದ್ರದ ಮಾದರಿಯಲ್ಲಿ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಧ್ಯಯನ ಕೇಂದ್ರವಾಗಿ ರೂಪಿಸಿದರೆ, ಕಾಯಕಲ್ಪ ನೀಡಬಹುದು. ಅದಕ್ಕೆ ಬೇಕಾದ ₹ 5 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ‍ಪ್ರಸ್ತಾವನೆ ಸಲ್ಲಿಸಲಾಗಿತ್ತು’ ಎಂದು ಐಯ್ಯಣ್ಣ ಹೇಳಿದರು. 

ಡಿಸಿ ಕಚೇರಿಯ ಆವರಣದಲ್ಲಿ‌ರುವ ಅರಸು ಪ್ರತಿಮೆ 

‘ಹಲವು ಬಾರಿ ಅರ್ಜಿ ಆಹ್ವಾನಿಸಲಾಗಿದೆ’ ‘

ಮಾಸಿಕ ಗೌರವಧನ ₹ 8 ಸಾವಿರ ನೀಡುವಷ್ಟು ಮೂಲ ದತ್ತಿ ಇಲ್ಲ. ₹ 3 ಸಾವಿರವೂ ಬರುತ್ತಿಲ್ಲ. ಸಂದರ್ಶಕ ಪ್ರಾಧ್ಯಾಪಕರ ನೇಮಕಕ್ಕೆ ಮೂರ್ನಾಲ್ಕು ಬಾರಿ ಅರ್ಜಿ ಆಹ್ವಾನಿಸಲಾಗಿತ್ತು. ಯಾರೂ ಬಂದಿಲ್ಲ. ಈಚೆಗೆ ಎರಡು ಅರ್ಜಿಗಳು ಬಂದಿವೆ. ಶೀಘ್ರ ನೇಮಕ ಮಾಡಲಾಗುವುದು’ ಎಂದು ಪ್ರೊ.ಎನ್‌.ಕೆ.ಲೋಕನಾಥ್ ಪ್ರತಿಕ್ರಿಯಿಸಿದರು.  ‘ಅರ್ಥಶಾಸ್ತ್ರ ವಿಷಯ ತಜ್ಞರೇ ಸಂದರ್ಶಕ ಪ್ರಾಧ್ಯಾಪಕರಾಗಬೇಕೆಂಬ ನಿಯಮವೂ ಇದೆ. ವಿಶ್ವವಿದ್ಯಾಲಯವು ಪೀಠದ ಅಭಿವೃದ್ಧಿಗೆ ಕ್ರಮವಹಿಸಲಿದೆ’ ಎಂದರು.  

- ಪೀಠದ ಉದ್ದೇಶಗಳು.. 

l ರಾಜ್ಯದ ಜನರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸಲು ಡಿ.ದೇವರಾಜ ಅರಸು ಪರಿಚಯಿಸಿದ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನೆ

l ಭೂ ಸುಧಾರಣೆ ಸಾಲ ಹಾಗೂ ಜೀತ ಪದ್ಧತಿ ನಿರ್ಮೂಲನೆ ಮಾಡುವಾಗ ಕೈಗೊಂಡ ಶಾಸಕಾಂಗದ ಕ್ರಮಗಳ ಪ್ರಭಾವದ ವಿಶ್ಲೇಷಣೆ

l ಪರಿಶಿಷ್ಟರು ಮತ್ತು ಹಿಂದುಳಿದ ಸಮುದಾಯಗಳಿಗೆ ಸರ್ಕಾರವು ನೀಡಿರುವ ಮೀಸಲಾತಿಯ ನೈಜ ಸ್ಥಿತಿಯ ಬಗ್ಗೆ ತನಿಖೆ ಹಾಗೂ ಪರಿಹಾರ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಶಿಫಾರಸು 

l ಶೋಷಿತರು ಬಡವರ ಏಳಿಗೆಗೆ ಸರ್ಕಾರ ಅನುಷ್ಠಾನಗೊಳಿಸಿದ ಯೋಜನೆಗಳ ಪರಿಣಾಮ ಕುರಿತ ದತ್ತಾಂಶ ಸಂಗ್ರಹ. ಅದರ ಅನುಸಾರ ಸಂಶೋಧನೆ ನಡೆಸಿ ವಿಶ್ಲೇಷಣಾ ಲೇಖನಗಳಿರುವ ಪುಸ್ತಕ ತರುವುದು ಮತ್ತು ಸರ್ಕಾರಕ್ಕೆ ವರದಿ ಮಾಡುವುದು 

‘ನಿರ್ಲಕ್ಷ್ಯ: ಅಭಿಮಾನಿಗಳಿಂದಲೇ ಅನಾವರಣ’ ‘

ಸಿದ್ಧಾರ್ಥ ನಗರದ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಸ್ಥಾಪಿಸಲಾದ ಡಿ.ದೇವರಾಜ ಅರಸು ಪ್ರತಿಮೆಯನ್ನು ನ.1ರಂದು ಅನಾವರಣ ಮಾಡದಿದ್ದರೆ ಅಭಿಮಾನಿಗಳೇ ಅನಾವರಣ ಮಾಡುತ್ತಾರೆ’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹಾಗೂ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ ಹೇಳಿದ್ದಾರೆ.  ‘ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದ್ದ ರಾಜ್ಯೋತ್ಸವ ದಿನದಂದೇ ಪ್ರತಿಮೆ ಅನಾವರಣ ಮಾಡಬೇಕೆಂದು ಗಡುವು ನೀಡಲಾಗಿತ್ತು. ಯಾವುದೇ ಮನವಿಗೂ ಪುರಸ್ಕರಿಸಿದ ಕಾರಣ ಜಿಲ್ಲಾಡಳಿತದ ಧೋರಣೆ ಪ್ರತಿಭಟಿಸಿ 11 ಗಂಟೆಗೆ ಅಭಿಮಾನಿಗಳು ಕಾರ್ಯ ನೆರವೇರಿಸಲು ಸಮಾವೇಶಗೊಳ್ಳಬೇಕು’ ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.