ಸುತ್ತೂರು (ಮೈಸೂರು ಜಿಲ್ಲೆ): ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಭಾನುವಾರ ಅದ್ದೂರಿ ಚಾಲನೆ ದೊರೆಯಿತು. ತಳಿರು– ತೋರಣ ಹಾಗೂ ವಿದ್ಯುತ್ ದೀಪಗಳ ಅಲಂಕಾರದಿಂದಾಗಿ ಗ್ರಾಮದಲ್ಲಿ ಸಡಗರ ಮನೆಮಾಡಿತ್ತು.
ಎಲ್ಲರ ಮನೆ ಮುಂದೆಯೂ ರಂಗೋಲಿ ಸ್ವಾಗತ ನೀಡಲಾಗಿತ್ತು. ದಿನವಿಡೀ ಧಾರ್ಮಿಕ ಕಾರ್ಯಗಳು ನಡೆದವು. ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಹರಿದು ಬಂದಿದ್ದ ಭಕ್ತರು, ಕೃಷಿಮೇಳ, ವಸ್ತುಪ್ರದರ್ಶನದ ಅರಿವಿನ ಹೂರಣ ಸವಿದರು. ಚಿತ್ರಕಲಾ ಪ್ರದರ್ಶನ ಮೇಳವು ಈ ಬಾರಿಯ ವಿಶೇಷ.
ಗ್ರಾಮದ ಮಠದ ಆವರಣದಿಂದ ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಯನ್ನು ಜಾನಪದ ಕಲಾತಂಡಗಳೊಂದಿಗೆ ಕತೃಗದ್ದುಗೆಗೆ ಕರೆತರುವ ಮೂಲಕ ಸಂಜೆ ಜಾತ್ರಾ ಮಹೋತ್ಸವ ಆರಂಭವಾಯಿತು.
ವಸ್ತುಪ್ರದರ್ಶನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರೆ, ಕೃಷಿಮೇಳ, ಆರೋಗ್ಯ ತಪಾಸಣಾ ಶಿಬಿರಕ್ಕೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಸಾಂಸ್ಕೃತಿಕ ಮೇಳಕ್ಕೆ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಉದ್ಘಾಟಿಸಿದರು. ದೋಣಿವಿಹಾರಕ್ಕೆ ‘ಸೆಸ್ಕ್’ ಅಧ್ಯಕ್ಷ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಚಾಲನೆ ನೀಡಿದರು.
ಕಡಿಮೆ ನೀರು, ಗೊಬ್ಬರ ಬಳಸಿ ವೈವಿಧ್ಯಮಯ ಬೆಳೆ ಬೆಳೆಯುವ ‘ಸುಸ್ಥಿರ ಕೃಷಿ’ ಮಾರ್ಗವನ್ನು ಕೃಷಿಮೇಳ ತೆರೆದಿಟ್ಟರೆ, ಮೀನು ಹಾಗೂ ಜೇನು ಕೃಷಿಯ ಬಗ್ಗೆಯೂ ‘ಕೃಷಿ ಬ್ರಹ್ಮಾಂಡ’ ಬೆಳಕು ಚೆಲ್ಲಿತು. 250ಕ್ಕೂ ಹೆಚ್ಚು ತರಕಾರಿ, ಸೊಪ್ಪು, ಹೂವು, ಕಿರುಧಾನ್ಯ, ಸುಗಂಧದ್ರವ್ಯ, ಔಷಧೀಯ ಹಾಗೂ ಚಿಯಾ, ಕಿನ್ವಾ ಮೊದಲಾದ ಬೆಳೆಗಳ ಪ್ರಾತ್ಯಕ್ಷಿಕೆ ಗಮನಸೆಳೆಯಿತು.
ನಿತ್ಯ ಸುಮಾರು ಮೂರೂವರೆ ಲಕ್ಷ ಮಂದಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದ್ದು, ಸ್ವಯಂಸೇವಕರು, ಮಠ ಮತ್ತು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಹಾಗೂ ಭಕ್ತರು ವಿವಿಧ ಕೆಲಸಗಳಲ್ಲಿ ನಿರತರಾಗಿದ್ದರು.
ಕರ್ತೃ ಗದ್ದುಗೆ ಸಮೀಪ ನಡೆದ ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ‘ಅಸಂಘಟಿತ ವಲಯದವರೊಂದಿಗೆ ಕೃಷಿ ಕಾರ್ಮಿಕರಿಗೂ ಇಎಸ್‌ಐ, ಇಪಿಎಫ್ ವ್ಯವಸ್ಥೆ ನೀಡಲು ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್‌ಧನ್ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಇ–ಶ್ರಮ್ ಕಾರ್ಡ್ ನೀಡಲಾಗುತ್ತಿದೆ. ದೇಶದ 55 ಕೋಟಿ ಜನರು ಈ ಸೌಲಭ್ಯದ ವ್ಯಾಪ್ತಿಗೆ ಬರಲಿದ್ದಾರೆ’ ಎಂದರು.
ಸಾಮೂಹಿಕ ವಿವಾಹ ಇಂದು ಉಚಿತ ಸಾಮೂಹಿಕ ವಿವಾಹ ಸೋಮವಾರ ಬೆಳಿಗ್ಗೆ 10ಕ್ಕೆ ಸಾಮೂಹಿಕ ವಿವಾಹ ನಡೆಯಲಿದ್ದು 24 ಅಂತರ್ಜಾತಿ ಒಂದು ಅಂತರಧರ್ಮೀಯ ಸೇರಿದಂತೆ 155 ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ವಧುವಿಗೆ ಸೀರೆ ಕುಪ್ಪಸ ಮಾಂಗಲ್ಯ ಹಾಗೂ ಕಾಲುಂಗುರ ವರನಿಗೆ ಪಂಚೆ ವಲ್ಲಿ ಅಂಗಿ ನೀಡಲಾಗುತ್ತದೆ. ಉಡುಪಿ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಗದಗದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಸಮ್ಮುಖ ವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.