ಮೈಸೂರು: ಡಿಜಿಪಿ ಎಂ.ಎ.ಸಲೀಂ ಬುಧವಾರ ನಗರಕ್ಕೆ ಭೇಟಿ ನೀಡಿದರು. ಚಾಮುಂಡಿ ಬೆಟ್ಟಕ್ಕೆ ತೆರಳಿ ಆಷಾಢ ಶುಕ್ರವಾರದ ಭದ್ರತೆ ಕುರಿತು ಪರಿಶೀಲಿಸಿದರು.
ಮೊದಲನೇ ಶುಕ್ರವಾರದಂದು ಬೆಟ್ಟದಲ್ಲಿ ಭದ್ರತೆಯಲ್ಲಿ ವೈಫಲ್ಯಗಳಾಗಿವೆ ಎಂಬ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಎರಡನೇ ಶುಕ್ರವಾರ ಪೊಲೀಸರು ಕೆಲವು ಹೊಸ ಕ್ರಮಗಳನ್ನು ಕೈಗೊಂಡಿದ್ದರು. ಈ ಬಗ್ಗೆ ಡಿಜಿಪಿ ಮಾಹಿತಿ ಪಡೆದು, ಕಾನೂನು ಮತ್ತು ಸುವ್ಯವಸ್ಥೆ ಕುರಿತು ಕೆಲವು ಸಲಹೆ ನೀಡಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಪರಾಧ ವಿಮರ್ಶನ ಸಭೆ ನಡೆಸಿದರು. ಅಧಿಕಾರಿಗಳು ಚಾಮುಂಡಿ ಬೆಟ್ಟದಲ್ಲಿನ ಭದ್ರತಾ ವ್ಯವಸ್ಥೆಯ ಕುರಿತ ಪಿಪಿಟಿ ಪ್ರದರ್ಶಿಸಿದರು. ಬಾಕಿ ಉಳಿದಿರುವ ಪ್ರಕರಣಗಳ ಮಾಹಿತಿ ಪಡೆದರು.
‘ಪೊಲೀಸಿಂಗ್ ವ್ಯವಸ್ಥೆಯ ಬದಲಾವಣೆ ಕಾಲಘಟ್ಟದಲ್ಲಿ ನಾವಿದ್ದೇವೆ. ಈಚೆಗೆ ಆನ್‌ಲೈನ್ ಪ್ರಕರಣ ಹೆಚ್ಚತ್ತಿದ್ದು, ತಂತ್ರಜ್ಞಾನದ ಕುರಿತು ಅರಿವು ಇರಲಿ. ಯಾವುದೇ ಕಾರ್ಯಕ್ರಮಗಳಿದ್ದರೂ ಅಲ್ಲಿ ಸೇರುವ ಜನರ ಬಗ್ಗೆ ಅರಿತು, ಯಾವುದೇ ದುರ್ಘಟನೆ ನಡೆಯದಂತೆ ಎಚ್ಚರವಹಿಸಲು ತಿಳಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದೇವರಾಜ ಠಾಣೆಗೆ ಸಂಜೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು. ಠಾಣೆಗೆ ಈ ದಿನ ಭೇಟಿ ನೀಡಿದ್ದ ದೂರುದಾರರಿಗೆ ಕರೆ ಮಾಡಿ, ಪೊಲೀಸರು ಯಾವ ರೀತಿ ಸ್ಪಂದಿಸಿದರು ಎಂದು ಮಾಹಿತಿ ಪಡೆದರು.
ಐಜಿಪಿ ಡಾ.ಬೋರೆಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಡಿಸಿಪಿಗಳಾದ ಕೆ.ಎಸ್.ಸುಂದರ್ ರಾಜ್, ಆರ್.ಎನ್.ಬಿಂದು ಮಣಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.