ಹುಣಸೂರು: ಹೈನುಗಾರಿಕೆ ಪ್ರತಿಯೊಂದು ಕೃಷಿ ಕುಟುಂಬಕ್ಕೆ ನಿತ್ಯ ಆರ್ಥಿಕ ಸಹಾಯ ನೀಡುವ ವ್ಯವಸ್ಥೆಯಾಗಿದೆ. ಈ ಉದ್ಯೋಗವನ್ನು ಜಾಗೃತಿಯಿಂದ ಅಳವಡಿಸಿಕೊಂಡಲ್ಲಿ ಆರ್ಥಿಕ ಸಮಸ್ಯೆಯಿಂದ ಮುಕ್ತರಾಗಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಮುರಳೀಧರ್ ಹೇಳಿದರು.
ತಾಲ್ಲೂಕಿನ ಕುಟ್ಟುವಾಡಿಯಲ್ಲಿ ಶುಕ್ರವಾರ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ₹2 ಲಕ್ಷ ಆರ್ಥಿಕ ಸಹಾಯಧನ ಮಂಜೂರಾತಿ ಆದೇಶ ಪತ್ರ ಹಸ್ತಾಂತರಿಸಿ ಅವರು ಮಾತನಾಡಿದರು.
ದಶಕಗಳ ಹಿಂದೆ ಕೃಷಿ ಕುಟುಂಬಕ್ಕೆ ಹೈನುಗಾರಿಕೆ ಪ್ರಧಾನ ಉದ್ಯೋಗವಾಗಿರಲಿಲ್ಲ. ಆದರೆ ಕಾಲ ಬದಲಾದಂತೆ ಹೈನುಗಾರಿಕೆ ಕ್ಷೇತ್ರ ಬೃಹತ್ತಾಗಿ ಬೆಳೆದು ಕೃಷಿಯೊಂದಿಗೆ ಹೈನುಗಾರಿಕೆ ಉದ್ಯಮವಾಗಿ ಬೆಳೆದಿದೆ. ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಕೃಷಿಕ ಕುಟುಂಬದವರು ಹಸು ಸಾಕಾಣಿಕೆ ಪದ್ಧತಿ ಅನಾದಿ ಕಾಲದಿಂದಲು ಅಳವಡಿಸಿಕೊಂಡಿದ್ದು, ಆ ಸಂಸ್ಕೃತಿ ಈಗ ಉದ್ಯಮವಾಗಿ ಬದಲಾಗಿದೆ ಎಂದರು.
ಆರ್ಥಿಕ ಸಾಮರ್ಥ್ಯ ಹೊಂದಿರುವ ಕೃಷಿಕರು 10 ರಿಂದ 20ಹಸುಗಳನ್ನು ಸಾಕಾಣಿಕೆ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸುವ ಶಕ್ತಿ ಪಡೆದುಕೊಂಡಿದ್ದಾರೆ. ಈ ಉದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುವ ದೃಷ್ಟಿಯಲ್ಲಿ ಹಾಲು ಉತ್ಪಾದಕರ ಸಂಘಕ್ಕೆ ಆರ್ಥಿಕ ಶಕ್ತಿ ನೀಡಿ ಮತ್ತಷ್ಟು ಸದೃಢಪಡಿಸುವ ಕೆಲಸದಲ್ಲಿ ತೊಡಗಿದ್ದೇವೆ ಎಂದರು.
ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ದೇವರಾಜು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವು ಜನಪರ ಯೋಜನೆ ಜಾರಿಗೊಳಿಸಿ ಗ್ರಾಮೀಣ ಜನರ ಆರ್ಥಿಕ ಶಕ್ತಿ ವೃದ್ಧಿಸಿ ಸಮಾಜಮುಖಿಯಾಗಿದೆ ಎಂದರು.
ಸಹಕಾರಿ ಸಂಘದ ಅಧ್ಯಕ್ಷ ರವಿ ಜಿ, ಕಾರ್ಯದರ್ಶಿ ಮಂಜುಗೌಡ, ಗ್ರಾ.ಪಂ ಸದಸ್ಯ ರವಿಕುಮಾರ್, ಮುಖಂಡರಾದ ನಾಗೇಗೌಡ, ಸೋಮಶೇಖರ್, ನಾಗರಾಜು, ರವಿಕುಮಾರ್, ಮೋಹನ್, ನಜ್ಮಾ, ಆಶಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.