ADVERTISEMENT

ಚಾಮುಂಡಿ ಬೆಟ್ಟ: ಡಿಜಿಟಲ್ ಪೇಮೆಂಟ್‌ಗೆ ಅನುಕೂಲವಾಗುವಂತೆ ‘ಇ–ಹುಂಡಿ’ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 12:58 IST
Last Updated 25 ಆಗಸ್ಟ್ 2022, 12:58 IST
   

ಮೈಸೂರು: ಇಲ್ಲಿನ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಭಕ್ತರು ಕಾಣಿಕೆ ಹಾಕುವುದಕ್ಕೆ ಡಿಜಿಟಲ್ ಸ್ಪರ್ಶ ನೀಡಲಾಗಿದ್ದು, ‘ಇ–ಹುಂಡಿ’ ವ್ಯವಸ್ಥೆ ಮಾಡಲಾಗಿದೆ.

ಧಾರ್ಮಿಕ ದತ್ತಿ ಇಲಾಖೆ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಚಾಮುಂಡಿಬೆಟ್ಟ ಶಾಖೆಯ ಸಹಯೋಗದಲ್ಲಿ ಚಾಮುಂಡೇಶ್ವರಿ ದೇವಿಯ ಭಕ್ತರು, ಕಾಣಿಕೆ ಸಲ್ಲಿಕೆಯನ್ನು ಡಿಜಿಟಲ್ ಪೇಮೆಂಟ್ ಮೂಲಕವೂ ಮಾಡಲು ಅನುಕೂಲವಾಗುವಂತೆ ‘ಕ್ಯೂಆರ್ ಕೋಡ್ ಸಹಿತ ವಿದ್ಯುನ್ಮಾನ ಹುಂಡಿ’ಯನ್ನು ದೇವಸ್ಥಾನದ ಆವರಣದಲ್ಲಿ ಗುರುವಾರ ನೆರವೇರಿಸಲಾಯಿತು.

ಈ ವೇಳೆ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ, ‘ಡಿಜಿಟಲ್ ಪೇಮೆಂಟ್ ಜನಪ್ರಿಯ ಮತ್ತು ಅನಿವಾರ್ಯವಾಗುತ್ತಿರುವ ಇಂದಿನ ದಿನಗಳಲ್ಲಿ ಭಕ್ತರ ಅನುಕೂಲಕ್ಕಾಗಿ ಇ–ಹುಂಡಿ ಉಪಕ್ರಮ ಅಳವಡಿಸಿಕೊಳ್ಳಲಾಗಿದೆ. ಚಾಮುಂಡೇಶ್ವರಿ ದೇವಸ್ಥಾನದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಕಾಣಿಕೆ ಹಾಕಬಹುದು. ಅದು ದೇವಸ್ಥಾನದ ಖಾತೆಗೆ ಜಮೆಯಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ಷ್ಮ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ಭಕ್ತರು ಕಾಣಿಕೆ ಸಲ್ಲಿಸುವಾಗ ಪೂರ್ಣ ಹೆಸರನ್ನು (ಕರ್ನಾಟಕ ಸರ್ಕಾರ, ಧಾರ್ಮಿಕ ದತ್ತಿ ಇಲಾಖೆ, ಚಾಮುಂಡೇಶ್ವರಿ ದೇವಸ್ಥಾನ ಚಾಮುಂಡಿಬೆಟ್ಟ, ಮೈಸೂರು) ಗಮನಿಸಬೇಕು. ದುರುಪಯೋಗದ ಬಗ್ಗೆ ತಿಳಿದು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಎಂದಿನಂತೆ ಸಾಂಪ್ರದಾಯಿಕ ಹುಂಡಿಯೂ ಇರುತ್ತದೆ’ ಎಂದು ತಿಳಿಸಿದರು.

‘ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ರಾಜ್ಯದ ಬಹುತೇಕ ‘ಎ’ ಗ್ರೇಡ್ ದೇವಸ್ಥಾನಗಳಲ್ಲಿ ಕ್ಯೂಆರ್ ಕೋಡ್ ಸಹಿತ ಇ-ಹುಂಡಿ ಸೌಲಭ್ಯವಿದೆ. ಅದನ್ನು ಚಾಮುಂಡೇಶ್ವರಿ ದೇವಸ್ಥಾನದಲ್ಲೂ ಆಳವಡಿಸಿಕೊಳ್ಳುವಂತೆ ಇಲಾಖೆಯಿಂದ ಸೂಚನೆ ಇತ್ತು. ಅದರಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ.ಕೃಷ್ಣ ಹೇಳಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ದಸರಾ ಸಂದರ್ಭದಲ್ಲಿ ಆಚರಿಸುತ್ತಿರುವ ‘ರೀಟೇಲ್ ಉತ್ಸವ’ದ ಕುರಿತ ತಾತ್ಕಾಲಿಕ ಮಾಹಿತಿ ಕೇಂದ್ರದ ಉದ್ಘಾಟನೆಯನ್ನು ಮಂಜುನಾಥಸ್ವಾಮಿ ನೆರವೇರಿಸಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮೈಸೂರು ಪ್ರಾದೇಶಿಕ ವ್ಯವಸ್ಥಾಪಕ ಕೆ.ಎಸ್.ವಿಶ್ವನಾಥ್ ಮಾತನಾಡಿದರು.

ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್, ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಜೀವನ್‌, ಚಾಮುಂಡಿಬೆಟ್ಟ ಶಾಖೆಯ ವ್ಯವಸ್ಥಾಪಕಿ ಸಿಂಧು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.