ADVERTISEMENT

ಕೃಷಿ ಚಟುವಟಿಕೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ: ಸಚಿವ ಎಸ್‌.ಟಿ.ಸೋಮಶೇಖರ್

ಮೇ 3ರವರೆಗೂ ಲಾಕ್‌ಡೌನ್‌ ಪಾಲನೆ ಕಡ್ಡಾಯ; ಎರಡು ದಿನದೊಳಗೆ ಮಾರ್ಗಸೂಚಿ ಪ್ರಕಟ–ಸಚಿವ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 13:57 IST
Last Updated 14 ಏಪ್ರಿಲ್ 2020, 13:57 IST
ಹುಣಸೂರು ಮಿನಿವಿಧಾನಸೌಧದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಸಭೆ ನಡೆಸಿದರು. ಉಪ ವಿಭಾಗಾಧಿಕಾರಿ ವೀಣಾ, ಶಾಸಕ ಎಚ್‌.ಪಿ.ಮಂಜುನಾಥ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಎಸ್‌ಪಿ ಸಿ.ಬಿ.ರಿಷ್ಯಂತ್ ಇದ್ದಾರೆ
ಹುಣಸೂರು ಮಿನಿವಿಧಾನಸೌಧದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಸಭೆ ನಡೆಸಿದರು. ಉಪ ವಿಭಾಗಾಧಿಕಾರಿ ವೀಣಾ, ಶಾಸಕ ಎಚ್‌.ಪಿ.ಮಂಜುನಾಥ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಎಸ್‌ಪಿ ಸಿ.ಬಿ.ರಿಷ್ಯಂತ್ ಇದ್ದಾರೆ   

ಮೈಸೂರು/ಹುಣಸೂರು: ‘ಕೋವಿಡ್‌–19 ತಡೆಗಟ್ಟಲು ಪ್ರಧಾನಿ ಘೋಷಿಸಿದಂತೆ ಮೇ 3ರವರೆಗೂ ಲಾಕ್‌ಡೌನ್‌ ಪಾಲನೆ ಕಡ್ಡಾಯ. ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಎರಡು ದಿನದೊಳಗೆ ಪ್ರಕಟಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ತಿಳಿಸಿದರು.

‘ಕೃಷಿ ಚಟುವಟಿಕೆಗೆ ವಿನಾಯಿತಿ ನೀಡಲಾಗುವುದು. ಕೃಷಿ ಉತ್ಪನ್ನಗಳ ಸಾಗಣೆಗೆ ಯಾವುದೇ ಅಡ್ಡಿಯಿಲ್ಲ. ದಾಖಲೆಯೊಂದಿಗೆ ಸಂಚರಿಸುವ ಕೃಷಿ ಉತ್ಪನ್ನಗಳ ಯಾವೊಂದು ವಾಹನ ತಡೆಯಬೇಡಿ’ ಎಂದು ಮಂಗಳವಾರ ಹುಣಸೂರಿನಲ್ಲಿ ಪೊಲೀಸರಿಗೆ ಸೂಚಿಸಿದರು.

‘ಖಾಸಗಿ ವೈದ್ಯರು ಕ್ಲಿನಿಕ್ ಆರಂಭಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದಾಗುತ್ತಿಲ್ಲ ಎಂಬ ದೂರುಗಳಿವೆ. ಇನ್ನೊಮ್ಮೆ ಎಚ್ಚರಿಕೆ ನೀಡಿ. ಸಂಕಷ್ಟದ ಪರಿಸ್ಥಿತಿ ಅರಿತು ಸೇವೆಗೆ ಮುಂದಾಗದಿದ್ದರೆ, ಕಾನೂನು ಕ್ರಮ ಜರುಗಿಸಲು ಮುಂದಾಗಿ’ ಎಂದು ಸಚಿವರು ಸಭೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ಗೆ ತಿಳಿಸಿದರು.

ADVERTISEMENT

‘ಪಡಿತರ ವಿತರಿಸುವ ಡಿಪೋದಲ್ಲೇ 4–5 ಕೆ.ಜಿ. ತೂಕ ಕಡಿಮೆ ಇರುತ್ತದೆ ಎಂದು ಅಂಗಡಿ ಮಾಲೀಕರು ಅಲವತ್ತುಕೊಂಡಿದ್ದಾರೆ. ಡಿಪೋದಲ್ಲೇ ಸರಿಪಡಿಸಿ. ಆ ನಂತರವೂ ಗ್ರಾಹಕರಿಗೆ ಮೋಸ ಮಾಡಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಿ. ಇದೀಗ ಅಂಗಡಿ ಪರವಾನಗಿ ರದ್ದು ಮಾಡಬೇಡಿ. ಎಚ್ಚರಿಕೆಯನ್ನಷ್ಟೇ ನೀಡಿ’ ಎಂದು ಹೇಳಿದರು.

ತಂಬಾಕು ಬೆಳೆಗಾರರಿಗೆ ಅನ್ಯಾಯ ಆಗಬಾರದು: ‘3 ದಶಲಕ್ಷ ಕೆ.ಜಿ. ತಂಬಾಕು ಮಾರಾಟವಾಗಿಲ್ಲ. ಈ ಬೆಳೆಗಾರರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು’ ಎಂದು ಸಚಿವರು ತಂಬಾಕು ಮಂಡಳಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಖರೀದಿದಾರರೊಟ್ಟಿಗೆ ಮಾತನಾಡಿ. ಆದಷ್ಟು ಬೇಗ ಬೆಳೆಗಾರರಿಂದ ತಂಬಾಕು ಖರೀದಿಸುವಂತೆ ನೋಡಿಕೊಳ್ಳಿ. ಈ ವರ್ಷದ ಬೆಳೆಯ ಬಗ್ಗೆ ರೈತರಿಗೆ ಭರವಸೆಯ ಮಾತನ್ನು ಸ್ಪಷ್ಟವಾಗಿ ತಿಳಿಸಿ’ ಎಂದು ಸೂಚಿಸಿದರು.

ಮಧ್ಯ ಪ್ರವೇಶಿಸಿದ ಮಾಜಿ ಸಚಿವ ಎಚ್.ವಿಶ್ವನಾಥ್ ತಂಬಾಕು ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ತಂಬಾಕು ಬೆಳೆದರೆ ಎಲ್ಲಿ ಮಾರಾಟ ಮಾಡುತ್ತೀರಿ ? ಪ್ರಮುಖ ಮಾರುಕಟ್ಟೆಯಾದ ಯೂರೋಪ್ ಕೋವಿಡ್‌–19ಗೆ ಸಿಲುಕಿ ಬೇಯುತ್ತಿದೆ. ಅಲ್ಲಿನ ಪರಿಸ್ಥಿತಿ ಸುಧಾರಿಸೋದು ಕಷ್ಟವಿದೆ. ಇಂತಹ ಹೊತ್ತಲ್ಲಿ ಬೆಳೆಗಾರರ ಹಾದಿ ತಪ್ಪಿಸಿ, ತಂಬಾಕು ಬೆಳೆಸಿದರೆ ಎಲ್ಲ ಕುಟುಂಬಗಳು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಲಿವೆ’ ಎಂದು ಎಚ್ಚರಿಸಿದರು.

ವಿಶ್ವನಾಥ್ ಮಾತಿಗೆ ಶಾಸಕ ಎಚ್‌.ಪಿ.ಮಂಜುನಾಥ್ ಸಹ ದನಿಗೂಡಿಸಿದರು. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಕೂಡ ತಂಬಾಕು ಮಂಡಳಿಯ ಅಧಿಕಾರಿಗಳಿಗೆ ತಾಕೀತು ಮಾಡಿದರು. ಈ ಬೆಳವಣಿಗೆ ಬಳಿಕ ಸಚಿವರು ಬೆಳೆಗಾರರ ಸಭೆ ನಡೆಸುವುದಾಗಿ ಘೋಷಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್‌ಕುಮಾರ್ ಮಿಶ್ರಾ, ಉಪವಿಭಾಗಾಧಿಕಾರಿ ವೀಣಾ, ತಾಲ್ಲೂಕಿನ ವಿವಿಧ ಇಲಾಖೆಯ ಮುಖ್ಯಸ್ಥರು ಸಭೆಯಲ್ಲಿದ್ದರು.

ಸಾಹೇಬ್ರೇ ಸಲಹೆ ನೀಡ್ತೀರಾ..?

ಕೋವಿಡ್‌–19ಗೆ ಸಂಬಂಧಿಸಿದಂತೆ ಹುಣಸೂರು ತಾಲ್ಲೂಕು ಆಡಳಿತ ತೆಗೆದುಕೊಂಡಿರುವ ಕ್ರಮಗಳ ಪರಿಶೀಲನೆ ನಡೆಸಿದ ಬಳಿಕ ಸಚಿವ ಎಸ್‌.ಟಿ.ಸೋಮಶೇಖರ್, ಸಭೆಯಲ್ಲೇ ಹಾಜರಿದ್ದ ಮಾಜಿ ಸಚಿವ ಎಚ್.ವಿಶ್ವನಾಥ್ ಅವರಿಗೆ, ‘ಸಾಹೇಬ್ರೇ, ಏನಾದರೂ ಸಲಹೆ, ಸೂಚನೆ ಕೊಡ್ತೀರಾ’ ಎಂದು ಕೇಳಿದ್ದು ಗಮನ ಸೆಳೆಯಿತು.

₹ 20 ಲಕ್ಷ ಕೊಡಿ; ವಾಹನ ಬಿಡಿಸಿ

‘ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ₹ 20 ಲಕ್ಷ ಅನುದಾನವನ್ನು ತಾಲ್ಲೂಕಿಗೆ ಮಂಜೂರು ಮಾಡಿ. ಲಾಕ್‌ಡೌನ್‌ ಸಮಯದಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ವಾಹನಗಳನ್ನು ಬಿಡಿಸಿ’ ಎಂದು ಶಾಸಕ ಎಚ್‌.ಪಿ.ಮಂಜುನಾಥ್ ಸಚಿವರಿಗೆ ಮನವಿ ಮಾಡಿದರು.

‘ಲಾಕ್‌ಡೌನ್ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ನಮ್ಮದು ಸಹಕಾರವಿದೆ. ಆದರೂ ಪೊಲೀಸರು ಹುಡುಕಿ, ಹುಡುಕಿ ಕೆಲವರ ಮೇಲಷ್ಟೇ ಪ್ರಕರಣ ದಾಖಲಿಸುತ್ತಿದ್ದಾರೆ. ಇದು ನೋವುಂಟು ಮಾಡುತ್ತಿದೆ’ ಎಂದು ಶಾಸಕರು ಸಭೆಯಲ್ಲೇ ಹೇಳಿದರು.

ಜಿ.ಟಿ.ಸೋಮಣ್ಣ ಬದಲು ಸೋಮಶೇಖರ್ !

‘ಉಸ್ತುವಾರಿ ಸಚಿವರ ಬದಲಾವಣೆ ಮುಖ್ಯಮಂತ್ರಿಯ ಪರಮಾಧಿಕಾರ. ಜಿ.ಟಿ.ಸೋಮಣ್ಣ ಬದಲು ಸೋಮಶೇಖರ್ ಬಂದಿದ್ದಾರೆ’ ಎಂದು ಎಚ್.ವಿಶ್ವನಾಥ್ ಸಭೆಯ ಬಳಿಕ ತಮ್ಮನ್ನು ಭೇಟಿಯಾದ ಮಾಧ್ಯಮದವರ ಬಳಿ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.