ADVERTISEMENT

ಶ್ರೀಕಂಠೇಶ್ವರನಿಗೆ ಹರಕೆ ತೀರಿಸಿದ ಡಿಕೆಶಿ

ಪಟಾಕಿ ಸಿಡಿಸಿ, ಹೂಮಾಲೆ ಹಾಕಿ ಸ್ವಾಗತ ಕೋರಿದ ಅಭಿಮಾನಿಗಳು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 10:37 IST
Last Updated 8 ನವೆಂಬರ್ 2019, 10:37 IST
ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಡಿ.ಕೆ.ಶಿವಕುಮಾರ್ ದೇವರ ದರ್ಶನ ಪಡೆದರು
ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಡಿ.ಕೆ.ಶಿವಕುಮಾರ್ ದೇವರ ದರ್ಶನ ಪಡೆದರು   

ನಂಜನಗೂಡು: ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ಗುರುವಾರ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಹರಕೆ ತೀರಿಸಿದರು.

ಅಂಬೇಡ್ಕರ್ ವೃತ್ತದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಹೂಮಾಲೆ ಹಾಕಿ ಸ್ವಾಗತ ಕೋರಿದರು. ದೇವಾಲಯದ ಮುಂಭಾಗ ಅಭಿಮಾನಿ ಗಳು, ಕಾಂಗ್ರೆಸ್ ಮುಖಂಡರು ನೆರೆದು ಜಯಕಾರ ಕೂಗಿ ಬರಮಾಡಿಕೊಂಡರು.

ದೇವಾಲಯದ ಹೃತ್ವಿಕರು ಮಂಗಳ ವಾದ್ಯದೊಂದಿಗೆ ದೇವಾಲಯದ ಒಳಗೆ ಕರೆದೊಯ್ದರು. 10 ನಿಮಿಷ ಪ್ರಾರ್ಥನೆ ಸಲ್ಲಿಸಿದ ಅವರಿಗೆ ದೇವಾಲಯದ ವತಿಯಿಂದ ಶೇಷ ವಸ್ತ್ರ, ಪ್ರಸಾದ ನೀಡಲಾಯಿತು. ದೇವಾಲಯದಲ್ಲಿ ಉಪಾಹಾರ ಸೇವಿಸಿದರು.

ADVERTISEMENT

‘ಜೈಲಿನಲ್ಲಿದ್ದಾಗ ನಾನು ಧರಿಸಿದ್ದ ರುದ್ರಾಕ್ಷಿ, ದೇವರ ದಾರ ತೆಗೆಸಿದ್ದರು. ಯಾರ ಜೊತೆಗೂ ಮಾತನಾಡಲು ಅವಕಾಶವಿರಲಿಲ್ಲ. ನನ್ನ ಹೆಂಡತಿ ಜೊತೆ ಮಾತನಾಡುತ್ತಿದ್ದೆ. ‘ಜೈಲಿನಲ್ಲಿರುವ ಮಣ್ಣನ್ನು ತಲೆಯ ಮೇಲೆ ಹಾಕಿಕೊಂಡು, ಸಂಕಷ್ಟ ಪರಿಹರಿಸುವಂತೆ
ಶ್ರೀಕಂಠೇಶ್ವರ ಸ್ವಾಮಿಯಲ್ಲಿ ಹರಕೆ ಮಾಡಿಕೊಳ್ಳುವಂತೆ ಹಿರಿಯರೊಬ್ಬರು ಹೇಳಿದ್ದಾರೆ’ ಎಂಬುದಾಗಿ ತಿಳಿಸಿದಳು. ಹಾಗೆ ಮಾಡಿ ನಿತ್ಯ ಶ್ರೀಕಂಠೇಶ್ವರನನ್ನು ಸ್ಮರಿಸುತ್ತಿದ್ದೆ. ಜೈಲಿನಲ್ಲಿರುವ ಈಶ್ವರನ ಗುಡಿಗೂ ಭೇಟಿ ನೀಡುತ್ತಿದ್ದೆ’ ಎಂದು ಶಿವಕುಮಾರ್‌ ಹೇಳಿದರು.

‘ನನ್ನ ಮುಂದಿನ ರಾಜಕೀಯ ನಡೆ ಹಾಗೂ ಉಪಚುನಾವಣೆಯಲ್ಲಿ ಪ್ರಚಾರ ಮಾಡಬೇಕೇ, ಬೇಡವೇ ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ, ಪಕ್ಷದ ಹೈಕಮಾಂಡ್ ಸೂಚನೆಗೆ ಬದ್ದನಾಗಿರುತ್ತೇನೆ’ ಎಂದರು.‌

ಕಾಂಗ್ರೆಸ್ ಮುಖಂಡ ಆರ್.ಧ್ರುವನಾರಾಯಣ, ಕಳಳೆ ಕೇಶವಮೂರ್ತಿ, ಧರ್ಮಸೇನ, ಶಾಸಕ ನರೇಂದ್ರ ಡಿ.ಕೆ. ಶಿವಕುಮಾರ್ ಇದ್ದರು.

ಶಿವಕುಮಾರ್ ಬಳಿಕ ಮೈಸೂರಿನಲ್ಲಿ ಅವಧೂತ ದತ್ತಪೀಠಕ್ಕೆ ತೆರಳಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು. ನಂಜನಗೂಡು ತಾಲ್ಲೂಕಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಅಲ್ಲಿನ ಗದ್ದುಗೆ ಬಳಿ ಕೆಲ ನಿಮಿಷ ಧ್ಯಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.