ADVERTISEMENT

ಯಾವುದಕ್ಕೂ ಹೆದರುವುದಿಲ್ಲ, ಯಾವ ತನಿಖೆಯನ್ನಾದರೂ ಮಾಡಿಕೊಳ್ಳಲಿ: ಡಿಕೆ ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 12:27 IST
Last Updated 15 ಸೆಪ್ಟೆಂಬರ್ 2022, 12:27 IST
ಭಾರತ್‌ ಜೋಡೋ ಯಾತ್ರೆ ಅಂಗವಾಗಿ ಅ.2ರಂದು ಸಂಸದ ರಾಹುಲ್‌ ಗಾಂಧಿ ಭೇಟಿ ನೀಡಲಿರುವ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು
ಭಾರತ್‌ ಜೋಡೋ ಯಾತ್ರೆ ಅಂಗವಾಗಿ ಅ.2ರಂದು ಸಂಸದ ರಾಹುಲ್‌ ಗಾಂಧಿ ಭೇಟಿ ನೀಡಲಿರುವ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು   

ಮೈಸೂರು: ‘ಕಾಂಗ್ರೆಸ್ ಮತ್ತು ನನ್ನನ್ನು ಹೆದರಿಸಲು ಬಿಜೆಪಿಯವರು ಮುಂದಾಗಿದ್ದಾರೆ. ಆದರೆ, ನಾನು ಯಾವುದಕ್ಕೂ ಹೆದರುವವನಲ್ಲ. ಯಾವ ತನಿಖೆಯನ್ನಾದರೂ ಮಾಡಿಕೊಳ್ಳಲಿ’ ಎಂದು ಕೆ‍‍‍ಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಜಾರಿ ನಿರ್ದೇಶನಾಲಯದ (ಇಡಿ) ಮೂಲಕ ಸಮನ್ಸ್‌ ಕೊಡಿಸಿ ಕಿರುಕುಳ ಕೊಡುತ್ತಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ಮಾಡಿದ ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತರುವಂತೆ ಇಂಧನ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ’ ಎಂದು ದೂರಿದರು.

‘ನಿಮ್ಮ ಅವಧಿಯ ದಾಖಲೆ‌ ತರುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ಕೆಲ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲ ದಾಖಲೆಗಳ‌ನ್ನೂ ಕೊಡಿ ಎಂದು ಅವರಿಗೆ ತಿಳಿಸಿದ್ದೇನೆ. ತಪ್ಪು ಮಾಡಿದ್ದು ಸಾಬೀತಾದಲ್ಲಿ ನೇಣು ಹಾಕಲಿ. ನಾವೇ ಹಗ್ಗವನ್ನೂ ಕಳುಹಿಸಿಕೊಡುತ್ತೇವೆ’ ಎಂದರು.

ADVERTISEMENT

‘ಮುಖ್ಯಮಂತ್ರಿಯು ಯಾವ ತನಿಖೆಯನ್ನಾದರೂ ಮಾಡಿಸಲಿ. ನಾನು ಎಲ್ಲದಕ್ಕೂ ಸಿದ್ಧವಾಗಿದ್ದೇನೆ. ತನಿಖೆ ಆರಂಭಿಸಲು ಅವರಿಗೆ (ಬಿಜೆಪಿಯವರಿಗೆ) ಮೂರು ವರ್ಷ ಬೇಕಿತ್ತಾ?. ನಾವು ದಾಖಲೆ ಮುಚ್ಚಿಟ್ಟಿದ್ದೇವೆ ಎಂದು ಆರೋಪಿಸಿದ್ದಾರೆ. ಹಾರೆಯಿಂದಲೋ, ಜೆಸಿಬಿಯಿಂದಲೋ ಅಗೆದು ದಾಖಲೆಗಳನ್ನು ಹೊರ ತೆಗೆಯಲಿ ಬಿಡಿ’ ಎಂದು ಪ್ರತಿಕ್ರಿಯಿಸಿದರು.

‘ಅಲ್ಪಸಂಖ್ಯಾತರಿಗೆ ಭಯ ಹುಟ್ಟಿಸುವುದಕ್ಕಾಗಿ ಮತಾಂತರ ನಿಷೇಧ ಕಾಯ್ದೆಯನ್ನು ಸರ್ಕಾರವು ತಂದಿದೆ. ಜಾತಿ– ಧರ್ಮ ಒಡೆಯಲು ಹುನ್ನಾರ ನಡೆಸಿದೆ. ಹಿಂದೂ ಧರ್ಮದ ಓಲೈಕೆಗೆ ಹಾಗೂ ಹೈಕಮಾಂಡ್ ಮೆಚ್ಚಿಸಲು ಹೀಗೆ ನಡೆದುಕೊಳ್ಳುತ್ತಿದೆ’ ಎಂದು ದೂರಿದರು.

‘ಭಾರತ್ ಜೋಡೋ ಯಾತ್ರೆಯ ಬಗ್ಗೆ ಬಿಜೆಪಿ ವ್ಯಂಗ್ಯವಾಡಿದೆ. ನಮಗೆ ಆ ಪಕ್ಷದ ಮಾರ್ಗದರ್ಶನ ಬೇಕಾಗಿಲ್ಲ. ನಾವು ಸೋತಿರಬಹುದು, ಆದರೆ, ನಮ್ಮಲ್ಲಿ ಬಿರುಕಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಶಿವಕುಮಾರ್‌ ಅವರು, ಭಾರತ್‌ ಜೋಡೋ ಯಾತ್ರೆ ಅಂಗವಾಗಿ ಅ.2ರಂದು ಸಂಸದ ರಾಹುಲ್‌ ಗಾಂಧಿ ಭೇಟಿ ನೀಡಲಿರುವ ನಂಜನಗೂಡು ತಾಲ್ಲೂಕಿನ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ಮುಖಂಡ ಕಳಲೆ ಕೇಶವಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.