ಮೈಸೂರು: ‘ಮಾದಕ ವ್ಯಸನ ಕ್ಷಣಿಕ ಆನಂದವಷ್ಟೆ ಅಲ್ಲ. ಅದು ಜೀವನ ನಾಶಮಾಡುವ ವಿಷ’ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಇಲ್ಲಿನ ತೊಣಚಿಕೊಪ್ಪಲಿನ ತರಳಬಾಳು ಪಿಯು ಕಾಲೇಜಿನಲ್ಲಿ ನಡೆದ ಮಾದಕ ವ್ಯಸನ ವಿರೋಧಿ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.
‘ವ್ಯಸನವೆಂದರೆ ಚಟವಷ್ಟೆ ಅಲ್ಲ. ಅದು ವ್ಯಕ್ತಿಯ ಆರೋಗ್ಯ, ಭವಿಷ್ಯ, ಕುಟುಂಬ ಹಾಗೂ ಸಮಾಜವನ್ನೇ ನಾಶಮಾಡುವ ಭಯಾನಕ ದಾರಿ’ ಎಂದು ಎಚ್ಚರಿಸಿದರು.
‘ಮಾದಕ ವ್ಯಸನಗಳಿಗೆ ದಾಸರಾದರೆ ಆಗುವ ಮಾನಸಿಕ ಕುಸಿತ, ದೇಹಾರೋಗ್ಯದ ಹಾನಿ, ವಿದ್ಯಾಭ್ಯಾಸದ ವಿಫಲತೆ, ಕುಟುಂಬದ ನೋವು ಹಾಗೂ ಸಮಾಜದಿಂದ ದೂರಾಗುವ ಸ್ಥಿತಿಯನ್ನು ಅರಿತುಕೊಳ್ಳಬೇಕು. ವ್ಯಸನವು ಮೊದಲು ಸ್ನೇಹದಂತೆ ಬರುತ್ತದೆ. ನಂತರ ಬಂಧನವಾಗಿ ಬಿಗಿದು, ಶವಪೆಟ್ಟಿಗೆಯತ್ತ ಕರೆದೊಯ್ಯುತ್ತದೆ’ ಎಂದು ತಿಳಿಸಿದರು.
‘ವಿದ್ಯಾರ್ಥಿಗಳು ಮಾನಸಿಕ ಸದೃಢತೆ ಬೆಳೆಸಿಕೊಳ್ಳಬೇಕು. ಉತ್ತಮ ಸ್ನೇಹವಲಯ ಆಯ್ಕೆ ಮಾಡಬೇಕು. ಮೌಲ್ಯಾಧಾರಿತ ಜೀವನಶೈಲಿ ಅಳವಡಿಸಿಕೊಳ್ಳಬೇಕು. ವಚನಗಳನ್ನು ಓದಿ, ಅದರಲ್ಲಿನ ಸಂದೇಶದ ದಾರಿ ಹಿಡಿದರೆ ವ್ಯಸನದ ಬಲೆಗೆ ಬೀಳುವುದಿಲ್ಲ’ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ ಪಾಲ್ಗೊಂಡಿದ್ದವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಶಶಿಕುಮಾರ್, ಸೇವಾ ಪ್ರತಿನಿಧಿ ಸ್ವಾತಿ, ಉಪನ್ಯಾಸಕರಾದ ಸಂತೋಷ್ ಮತ್ತು ಆಕಾಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.