
ಮೈಸೂರು: ‘ಮಾದಕ ದ್ರವ್ಯ ಮುಕ್ತ ಹಾಗೂ ಉತ್ತಮ ಔದ್ಯೋಗಿಕ ಸಮಾಜ ನಿರ್ಮಿಸಲು ಸ್ವಾಮಿ ವಿವೇಕಾನಂದರು ನಮಗೆ ಪ್ರೇರಣೆಯಾಗಲಿ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್) ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೇಳಿದರು.
ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಪಕ್ಷದಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಮಾದಕ ದ್ರವ್ಯ ಮುಕ್ತ ಕರ್ನಾಟಕ– ಜಾಥಾ’ಗೆ ಪುರಭವನ ಆವರಣದಲ್ಲಿ ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮೂಲಕ ಚಾಲನೆ ನೀಡಿ ಮಾತನಾಡಿದರು.
‘ವಿವೇಕಾನಂದರ ಜಯಂತಿಯಂದು ಜಾಥಾ ಹಮ್ಮಿಕೊಳ್ಳಲಾಗಿದೆ. ನಮ್ಮ ಪಕ್ಷ ಬಿಟ್ಟು ಬೇರೆ ಯಾವುದೇ ಪಕ್ಷಗಳು ಇದನ್ನು ಮಾಡುತ್ತಿಲ್ಲ. ಬೋಲೋ ಭಾರತ್ ಮಾತಾಕಿ ಘೋಷಣೆ ಕೂಗಿಕೊಂಡು ಸ್ವಾರ್ಥ ರಾಜಕಾರಣದಲ್ಲಿ ನಿರತರಾಗಿದ್ದಾರೆ. ಕೆಲವರು ವಿವೇಕಾನಂದರನ್ನು ಹಿಡಿದಿಟ್ಟುಕೊಂಡು ದ್ವೇಷ, ಅಸಮಾನತೆ ಹುಟ್ಟುಹಾಕುತ್ತಿದ್ದಾರೆ’ ಎಂದು ಆರೋಪಿಸಿದರು.
‘ಇಂದು ಹಳ್ಳಿ ಸೇರಿದಂತೆ ಎಲ್ಲೆಡೆ ಮಾದಕವಸ್ತು ಸಿಗುತ್ತಿದೆ. ದೊಡ್ಡವರ ಮಕ್ಕಳೇ ಸಮಾಜಕ್ಕೆ ಕಂಟಕರಾಗುತ್ತಿದ್ದಾರೆ’ ಎಂದು ಬೇಸರಿಸಿದರು.
ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾದ ಜಾಥಾ ನಗರದ ವಿವಿಧ ರಸ್ತೆಗಳ ಮೂಲಕ ಬಸವೇಶ್ವರ ಪ್ರತಿಮೆ ಬಳಿ ಸಮಾರೋಪಗೊಂಡಿತು.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎನ್.ದೀಪಕ್, ಕಾರ್ಯಾಧ್ಯಕ್ಷ ರಘು ಜಾಣಗೆರೆ, ಉಪಾಧ್ಯಕ್ಷರಾದ ಸೋಮಸುಂದರ್, ಮಂಜುನಾಥ್, ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್, ಖಜಾಂಚಿ ವಿ.ಆರ್.ಮರಾಠೆ, ಯುವ ಘಟಕದ ಉಪಾಧ್ಯಕ್ಷೆ ಜನನಿ ವತ್ಸಲ, ಜಿಲ್ಲಾ ಉಸ್ತುವಾರಿ ರವಿಕುಮಾರ್, ನಗರ ಘಟಕದ ಅಧ್ಯಕ್ಷ ಎಸ್.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಆರ್.ರವಿಗೌಡ, ಮಹಿಳಾ ಘಟಕದ ಅಧ್ಯಕ್ಷೆ ನಾಗಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ಯುವ ಘಟಕದ ಅಧ್ಯಕ್ಷ ಆನಂದ್, ಗ್ರಾಮೀಣ ಘಟಕದ ಅಧ್ಯಕ್ಷ ರವೀಂದ್ರ, ಪ್ರಧಾನ ಕಾರ್ಯದರ್ಶಿ ಹರೀಶ್, ಸಾಮಾಜಿಕ ಜಾಲತಾಣ ಉಸ್ತುವಾರಿ ವೇಣುಗೋಪಾಲ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.