ಮೈಸೂರು: ನಗರದ ಮಧ್ಯಭಾಗದಲ್ಲಿಯೇ ಇರುವ ಜಲದ ಕಣ್ಣುಗಳನ್ನು ಇಲ್ಲವಾಗಿಸುವ ಯತ್ನ ಸತತವಾಗಿ ನಡೆಯುತ್ತಿದೆ ಎಂಬುದಕ್ಕೆ ಕುಕ್ಕರಹಳ್ಳಿ ಕೆರೆ ಮುಂದಿನ ‘ದುರ್ಗಯ್ಯನ ಕೊಳ’ವೇ ಸಾಕ್ಷಿ.
1954ರಲ್ಲಿ ನಿರ್ಮಾಣವಾದ ‘ದುರ್ಗಯ್ಯನ ಕೊಳ’ದ ನೀರು ಪಕ್ಕದಲ್ಲೇ ಇರುವ ‘ದೋಬಿಘಾಟ್’ಗೆ ಬಳಕೆಯಾಗುತ್ತಿತ್ತು. ಅದನ್ನು ಕಟ್ಟಡ ತ್ಯಾಜ್ಯ ತುಂಬಿ, ಕೊಳದ ಸೌಂದರ್ಯದ ಕತ್ತು ಹಿಸುಕಲಾಗಿದೆ.
ಬೋಗಾದಿ ರಸ್ತೆ ಪಕ್ಕದಲ್ಲಿ 30 ಅಡಿಯಷ್ಟು ಹಳ್ಳದ ಜಾಗಕ್ಕೆ ಕಟ್ಟಡ ತ್ಯಾಜ್ಯವನ್ನು ನಿರಂತರವಾಗಿ ಸುರಿದು ಈ ಮಟ್ಟಸ ಮಾಡಲಾಗಿದೆ. 15 ವರ್ಷದ ಹಿಂದೆ ಸುಂದರವಾಗಿದ್ದ ಕೊಳದಲ್ಲಿ ‘ಕತ್ತೆ ಕಿವಿ’ ತೇಲುಕಳೆ ಬೆಳೆದಿದ್ದು, ನೈದಿಲೆಯಿಂದ ತುಂಬಿದ್ದ ಕೊಳ ಪಾಚಿಗಟ್ಟಿದೆ. ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಮಾಲಿನ್ಯ ಹೇಗೆ ಆಗುತ್ತದೆ ಎಂಬುದನ್ನು ಈ ಕೊಳ ತೋರಿಯೇ ವಿವರಿಸಬಹುದು.
ಕೊಳದ ಮೂರೂ ಭಾಗದಲ್ಲಿದ್ದ ಸೋಪಾನಕಟ್ಟೆ ಈಗ ಕಾಣುವುದು ಒಂದು ಭಾಗದಲ್ಲಿ ಮಾತ್ರ. ಸರಸ್ವತಿಪುರಂ ಈಜು ಕೊಳದ ಕಡೆ ರಾಶಿ ಚಪ್ಪಡಿ ಕಲ್ಲುಗಳನ್ನು ದಶಕದಿಂದಲೂ ಹಾಗೆ ಇಡಲಾಗಿದೆ. ಮಣ್ಣಿನ ರಸ್ತೆಯಿದ್ದು, ಅದರ ಮಣ್ಣು, ಡಾಂಬಾರು, ಕಲ್ಲುಗಳು ಕೊಳದ ತಳ ಸೇರಿವೆ. ಕಟ್ಟಡ ತ್ಯಾಜ್ಯ ಒಡಲಿಗೆ ಸೇರಿ, ಆಳವೂ ಕಡಿಮೆಯಾಗಿರುವುದು ಕಾಣುತ್ತದೆ.
ಪರಿಸರ ಕುರಿತ ಕುರುಡುತನ, ಮಬ್ಬು ಆಡಳಿತ ವ್ಯವಸ್ಥೆಗಷ್ಟೇ ಅಲ್ಲ, ನಾಗರಿಕರಿಗೂ ಮುಸುಕಿದೆ. ಸರಸ್ವತಿಪುರಂನಿಂದ ಕುಕ್ಕರಹಳ್ಳಿ ಕೆರೆಗೆ ವಾಯು ವಿಹಾರ ಮಾಡಲು ಬರುವವರು ತ್ಯಾಜ್ಯದ ಉಡುಗೊರೆಯನ್ನು ಕೊಳಕ್ಕೆ ಕೊಡುತ್ತಿದ್ದಾರೆ. ಪ್ಲಾಸ್ಟಿಕ್ ಪೊಟ್ಟಣಗಳನ್ನು ತೂರುತ್ತಿದ್ದಾರೆ.
ಕೊಳದ ಬಳಿ ಬಂದು ಕ್ಷೇಮ ಕುಶಲ ಮಾತನಾಡುತ್ತಿದ್ದ ಹಿರಿಯ ಜೀವಗಳು ಮರೆಯಾಗಿವೆ. ಹೀಗಾಗಿ ವ್ಯವಸ್ಥೆ ಪ್ರಶ್ನಿಸುವವರು ಯಾರೂ ಇಲ್ಲ. ಜಲವನ್ನು ಹಿಡಿದಿಡುವ ಈ ಪಾತ್ರೆಗಳತ್ತ ಕರುಣೆಯ ಕಣ್ಣುಗಳನ್ನು ತೆರೆಯಬೇಕಿದೆ. ಶುದ್ಧ ನೀರಿನ ಭಿಕ್ಷೆ ನೀಡಬೇಕಿದೆ.
‘ಕೊಳದ ಬದುಗಳಲ್ಲಿ ನಿರ್ಮಿಸಲಾದ ಕಲ್ಲಿನ ಮೆಟ್ಟಿಲುಗಳು ಜಾರಿವೆ. ಪ್ಲಾಸ್ಟಿಕ್, ಗಾಜು, ಇಟ್ಟಿಗೆ ಚೂರುಗಳನ್ನು ಒಳಗೊಂಡ ಹೂಳು ತುಂಬುತ್ತಿದೆ. ಕೊಳಕ್ಕೆ ಹೊಂದಿಕೊಂಡಂತೆ ಪಾರಂಪರಿಕ ಕಟ್ಟಡ ನೆಲಸಮಗೊಂಡಿದೆ. ಕೊಳದ ಅಂದ ಹೆಚ್ಚಿಸಿದ್ದ ಇದು, ಈಗ ನೆನಪಷ್ಟೇ’ ಎಂದು ಪರಿಸರ ತಜ್ಞ ಯು.ಎನ್.ರವಿಕುಮಾರ್ ‘ಪ್ರಜಾವಾಣಿ’ಗೆ ಹೇಳಿದರು.
‘ಕೊಳದ ಪಕ್ಕದಲ್ಲಿಯೇ ಇರುವ ‘ಚಂದ್ರವನ’ದ ಕೊಳದಲ್ಲಿ ಕಾಂಕ್ರೀಟ್ ಮೆಟ್ಟಿಲುಗಳನ್ನು ಮಾಡಿದ್ದು, ಅದರ ನಿರ್ವಹಣೆಯನ್ನು ಸರ್ಕಾರಿ ಆಯುರ್ವೇದ ವೈದ್ಯಕೀಯ ವಿದ್ಯಾಲಯ ಮಾಡುತ್ತಿದೆ. ಗಿಡಮೂಲಿಕೆಗಳ ಸಸ್ಯತೋಟ ಬೆಳೆಸಲಾಗಿದೆ. ಅದೇ ಮಾದರಿಯಲ್ಲಿ ದುರ್ಗಯ್ಯನ ಕೊಳವೂ ಸೇರಿದಂತೆ ವಿಶ್ವಮಾನವ ಜೋಡಿರಸ್ತೆವರೆಗೂ ಇರುವ ಉಳಿದ ಕೆರೆ, ನಾಲೆಯ ಜಾಗವನ್ನು ಸಂರಕ್ಷಿಸಬೇಕಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.