ADVERTISEMENT

ಮೈಸೂರು: ಪರಿಸರ ಸ್ನೇಹಿ ‘ದೀಪ’ ತಯಾರಿಕೆ

ಪಾರಂಪರಿಕ ದೀಪಾವಳಿ ಆಚರಣೆಗೆ ‘ಪ್ರಗತಿ’ಯೊಂದಿಗೆ ಕೈಜೋಡಿಸಿ

ಪ್ರದೀಪ ಕುಂದಣಗಾರ
Published 2 ನವೆಂಬರ್ 2020, 2:41 IST
Last Updated 2 ನವೆಂಬರ್ 2020, 2:41 IST
ಮಣ್ಣಿನಿಂದ ತಯಾರಿಸಿದ ದೀಪಗಳು
ಮಣ್ಣಿನಿಂದ ತಯಾರಿಸಿದ ದೀಪಗಳು   

ಮೈಸೂರು: ದೀಪಾವಳಿ ಎಂದರೆ ಮನೆ, ಅಂಗಡಿಗಳನ್ನು ಬಣ್ಣ, ಬಣ್ಣದ ಕಾಗದ, ಪ್ಲಾಸ್ಟಿಕ್‌ ಹೂವು– ಎಲೆ ಬಳ್ಳಿಗಳಿಂದ ಸಿಂಗರಿಸಿ, ವಿದ್ಯುತ್ ದೀಪಗಳನ್ನು ಹಚ್ಚುವುದು ಎಂಬುದು ಸಾಮಾನ್ಯವಾಗಿ ಬಿಟ್ಟಿದೆ.

ಆದರೆ, ಪಾರಂಪರಿಕ ಹಾಗೂ ಪರಿಸರ ಸ್ನೇಹಿ ದೀಪಾವಳಿ ಆಚರಿಸಲುಮೈಸೂರಿನ ‘ಪ್ರಗತಿ ಪ್ರತಿಷ್ಠಾನ’ ಎಂಬಸ್ವಯಂ ಸೇವಾ ಸಂಸ್ಥೆಯುನಾಗರಿಕರನ್ನು ಪ್ರೋತ್ಸಾಹಿಸುತ್ತಿದೆ. ಅದಕ್ಕಾಗಿ ಈ ಸಂಸ್ಥೆಯು ತನ್ನ ಕಚೇರಿಯಲ್ಲಿ ಹದಿನೈದು ದಿನಗಳ ಮೊದಲೇ ಮಣ್ಣಿನ ದೀಪಗಳನ್ನು ತಯಾರಿಸಲು ಆರಂಭಿಸಿದೆ. ಕನಿಷ್ಠ ಐದು ಸಾವಿರ ದೀಪಗಳನ್ನು ತಯಾರಿಸಿ ಅವುಗಳನ್ನು ನಗರದ ಮನೆಗಳಿಗೆ (ಒಂದು ಮನೆಗೆ ಐದು ದೀಪದಂತೆ) ನೀಡಲು ಯೋಜನೆ ಹಾಕಿಕೊಂಡಿದೆ.

‘ಮಣ್ಣು, ಗೋಮೂತ್ರ, ಗೋಮಯ (ಸಗಣಿ), ನೀರು ಇವುಗಳನ್ನು ಮಿಶ್ರಣ ಮಾಡಿ ದೀಪಗಳನ್ನು ತಯಾರಿಸುತ್ತಿದೆ. ಅವುಗಳಲ್ಲಿ ಕೆಲವೊಂದು ಬಣ್ಣಗಳನ್ನಾಗಿಸಲು ಅರಿಸಿನ, ಕುಂಕುಮ ಬೆರೆಸಿ ಕೆಂಪು, ಕೇಸರಿ, ಹಳದಿ ಬಣ್ಣಗಳನ್ನಾಗಿಸಲಾಗುತ್ತಿದೆ. ಕಡಿಮೆ ಬಿಸಿಲಿನಲ್ಲಿ ಒಣಗಿಸಲಾಗುತ್ತಿದೆ. ದೀಪಾವಳಿ ಸಮೀಪಿಸಿದಾಗ ನಾಗರಿಕರಿಗೆ ದೀಪಗಳನ್ನು ಕೊಡುವ ಮೊದಲು ಅವರಿಗೆ ಪರಿಸರಸ್ನೇಹಿಹಾಗೂ ಪಾರಂಪರಿಕ ದೀಪಾವಳಿ ಆಚರಣೆಯ ಮಹತ್ವವನ್ನು ತಿಳಿಸಲಾಗುವುದು’ ಎಂದು ‘ಪ್ರಗತಿ ಪ್ರತಿಷ್ಠಾನ’ದ
ಅಧ್ಯಕ್ಷ ಅಜಯ್‌ಕುಮಾರ್‌ ಜೈನ್‌ ಹೇಳಿದರು.

ADVERTISEMENT

‘ಹಿಂದಿನ ಕಾಲದಲ್ಲಿ ಮಣ್ಣು ಹಾಗೂ ಸಗಣಿಯನ್ನು ಬಳಸಿ ಗೋಡೆ ಹಾಗೂ ನೆಲವನ್ನು ಸ್ವಚ್ಛಗೊಳಿಸುತ್ತಿದ್ದರು. ಆಗ ಕೀಟಗಳ ಬಾಧೆ ಕಡಿಮೆ ಇರುತ್ತಿತ್ತು. ಅದರ ಒಂದು ಭಾಗವಾಗಿ ಮಣ್ಣು, ಗೋಮೂತ್ರ, ಗೋಮಯ ಬಳಸಿ ದೀಪಗಳನ್ನು ತಯಾರಿಸಿ ಅವುಗಳನ್ನು ಮನೆಯಲ್ಲಿ, ಮನೆಯ ಬಾಗಿಲಲ್ಲಿ ಹಚ್ಚುವುದರಿಂದ ಕೀಟಬಾಧೆ ಕಡಿಮೆ ಆಗುವುದು.ಇದರಿಂದ ಪರಿಸರಕ್ಕೂ ಯಾವುದೇ ರೀತಿ ಹಾನಿಯಾಗುವುದಿಲ್ಲ’ ಎಂದು ತಿಳಿಸಿದರು.

ಪ್ರಗತಿ ಪ್ರತಿಷ್ಠಾನದ ಈ ಕಾಯಕಕ್ಕೆ ಜೆಡಿಜೆಸಿ (ಜೀವ ದಯಾ ಜೈನ್ ಚಾರಿಟಿ) ಮಹಿಳಾ ಸಂಘವೂ ಕೈಜೋಡಿಸಿದೆ. ಸಂಘದ ಅಧ್ಯಕ್ಷೆ ಕೋಕಿಲಾ ಸುರೇಶ್ ಅವರು ದೀಪ ತಯಾರಿಕೆ ಬೇಕಾದ ಕಚ್ಚಾ ವಸ್ತುಗಳನ್ನು ತರಿಸಿ ಕೊಟ್ಟಿದ್ದು ಎನ್‌ಜಿಒ ಮ್ಯಾನೇಜರ್ ಕಾವ್ಯಶ್ರೀ, ರೋಹಿಣಿ ಹಾಗೂ ಸದಸ್ಯರು, ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈಸೂರಿನ ಸ್ವಯಂ ಸೇವಕರು ಕೈಜೋಡಿಸಿದ್ದಾರೆ.

ಸುರಕ್ಷಾ ದೀಪಾವಳಿ ಆಚರಿಸಿ

ಪ್ರಗತಿ ಪ್ರತಿಷ್ಠಾನ ಹಾಗೂ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ವತಿಯಿಂದ ‘ಸುರಕ್ಷಾ ದೀಪಾವಳಿ’ (ಸೇಫ್‌ ದೀಪಾವಳಿ) ಆಚರಿಸೋಣ ಬನ್ನಿ ಎಂಬ ಘೋಷಣೆಯಡಿ ಮುಂದಿನ ವಾರದಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಇದಕ್ಕಾಗಿ ಭಿತ್ತಿಪತ್ರ, ಫಲಕಗಳನ್ನು ಸಿದ್ಧಮಾಡಿಕೊಂಡು ಪಟಾಕಿ ಹೊಡೆಯಬೇಡಿ, ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸಬೇಡಿ, ಪರಿಸರಕ್ಕೆ ಹಾನಿ ಮಾಡಬೇಡಿ ಎಂಬ ಘೋಷಣೆಯೊಂದಿಗೆ ಪರಿಸರಸ್ನೇಹಿ ಹಾಗೂ ಪಾರಂಪರಿಕ ದೀಪಗಳನ್ನು ಹಚ್ಚುವುದರೊಂದಿಗೆ ಜ್ಞಾನಜ್ಯೋತಿಯನ್ನು ಬೆಳಗಿಸೋಣ.ನಮ್ಮಲ್ಲಿರುವ, ನಮ್ಮ ಸುತ್ತಮುತ್ತಲಿರುವ ಅಜ್ಞಾನವೆಂಬ ಕತ್ತಲೆಯನ್ನು ಹೊಡೆದೊಡಿಸಲು ಕೈಜೋಡಿಸಿ ಎಂಬುದಾಗಿಮನವಿ ಮಾಡಿಕೊಳ್ಳಲಿದ್ದೇವೆಎಂದು ಜೈನ್‌ ಹೇಳಿದರು.

ಪರಿಸರ ಪ್ರೇಮಿ ಪ್ರತಿಷ್ಠಾನ

ಪ್ರಗತಿ ಪ್ರತಿಷ್ಠಾನದವರು ಪ್ರತಿವರ್ಷ ಲಕ್ಷಾಂತರ ಬೀಜದುಂಡೆಗಳನ್ನು ತಯಾರಿಸಿ, ಬೆಟ್ಟ ಗುಡ್ಡ, ಗಿಡಗಳನ್ನು ಬೆಳೆಸಬಹುದಾದ ಖಾಲಿ ಇರುವ ಸ್ಥಳಗಳಲ್ಲಿ ಗಿಡಗಳು ಬೆಳೆಯುವಂತೆ ನೋಡಿಕೊಂಡಿದ್ದಾರೆ. ಕಾಡು ಬೆಟ್ಟಗಳ ಸಮೀಪ ಹಾಗೂ ಒಳಗೆ ಪಕ್ಷಿಗಳಿಗೆ ಆಹಾರ ಸಿಗಲಿ ಎಂಬ ಉದ್ದೇಶದಿಂದ ಹಣ್ಣಿನ ಗಿಡಗಳಾಗುವಂತೆ ಬೀಜದುಂಡೆ ಚೆಲ್ಲುತ್ತಿದ್ದಾರೆ.ನಾಡಿನಲ್ಲಿ ಪಕ್ಷಿಗಳುಗಾಯಗೊಂಡಿದ್ದರೆ ಅವುಗಳನ್ನು ತಂದು ಚಿಕಿತ್ಸೆ ನೀಡಿ ಆರೈಕೆ ಮಾಡಿಬಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.