ADVERTISEMENT

ಏಕೈಕ ಸಂಸ್ಕೃತ ಪತ್ರಿಕೆ ‘ಸುಧರ್ಮ’ ಸಂಪಾದಕ ಕೆ.ವಿ.ಸಂಪತ್ ಕುಮಾರ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 11:56 IST
Last Updated 30 ಜೂನ್ 2021, 11:56 IST
ಸಂಪತ್‌ಕುಮಾರ್
ಸಂಪತ್‌ಕುಮಾರ್   

ಮೈಸೂರು: ರಾಷ್ಟ್ರದ ಏಕೈಕ ಸಂಸ್ಕೃತ ಪತ್ರಿಕೆ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ‘ಸುಧರ್ಮ’ ಪತ್ರಿಕೆಯ ಸಂಪಾದಕರಾದ ಕೆ.ವಿ.ಸಂಪತ್ ಕುಮಾರ್ (64) ಅವರು ಬುಧವಾರ ತಮ್ಮ ಕಚೇರಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಇವರಿಗೆ ಪತ್ನಿ ಕೆ.ಎಸ್.ಜಯಲಕ್ಷ್ಮಿ ಇದ್ದಾರೆ.

ಮೃತರ ಅಂತ್ಯಕ್ರಿಯೆಯು ಸಂಜೆ ಇಲ್ಲಿನ ಚಾಮುಂಡಿಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ನೆರವೇರಲಿದೆ.

ಕಡಿಮೆ ಓದುಗರ ಬಳಗ ಹಾಗೂ ಆರ್ಥಿಕವಾಗಿ ಸಾಕಷ್ಟು ತೊಂದರೆಗಳಿದ್ದರೂ ಲೆಕ್ಕಿಸದೆ ‘ಸುಧರ್ಮ’ ಸಂಸ್ಕೃತ ಪತ್ರಿಕೆಯನ್ನು ಇವರು ತಮ್ಮ ಪತ್ನಿ ಜತೆಗೂಡಿ ಹೊರತರುತ್ತಿದ್ದರು. ಈ ಕಾರ್ಯಕ್ಕೆ ಕೇಂದ್ರ ಸರ್ಕಾರ ಸಂಪತ್‌ಕುಮಾರ್ ದಂಪತಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿತ್ತು. ಪ್ರಶಸ್ತಿ ಸ್ವೀಕಾರಕ್ಕೂ ಮುನ್ನವೇ ಇವರು ನಿಧನರಾಗಿದ್ದಾರೆ.

ADVERTISEMENT

ಸಂಪತ್‌ಕುಮಾರ್ ಅವರ ತಂದೆ ಪಂಡಿತ್ ವರದರಾಜ ಅಯ್ಯಂಗಾರ್ ಅವರು 1945ರಲ್ಲಿ ಸುಧರ್ಮ ಮುದ್ರಣಾಲಯ ಪ್ರಾರಂಭಿಸಿ, 1970ರಲ್ಲಿ ಸುಧರ್ಮ ಪತ್ರಿಕೆಯನ್ನು ಹೊರತರಲಾರಂಭಿಸಿದರು. ಇವರ ನಿಧನದ ನಂತರ ಪತ್ರಿಕೆಯ ಜವಾಬ್ದಾರಿಯನ್ನು ವಹಿಸಿಕೊಂಡ ಸಂಪತ್‌ಕುಮಾರ್ ಪತ್ರಿಕೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರು. ಪತ್ರಿಕೆಯ ಆನ್‌ಲೈನ್‌ ಆವೃತ್ತಿಯನ್ನೂ ಇವರು ಹೊರತಂದರು. ಜತೆಗೆ, ಸಂಸ್ಕೃತ ದಿನದರ್ಶಿಯನ್ನೂ ಪ್ರಕಟಿಸಿದರು.

ಸಂಸ್ಕೃತ ಭಾಷೆಯಲ್ಲಿ 50 ವರ್ಷಗಳಿಂದ ಮೈಸೂರಿನಿಂದ ಪ್ರಕಟವಾಗುತ್ತಿರುವ ‘ಸುಧರ್ಮ’ ದಿನಪತ್ರಿಕೆಯನ್ನು ಪರಿಗಣಿಸಿ 2 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಕೆ.ವಿ.ಸಂಪತ್ ಕುಮಾರ್- ಕೆ.ಎಸ್.ಜಯಲಕ್ಷ್ಮೀ ದಂಪತಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಿತ್ತು. ಇದರ ಜತೆಗೆ, ಸಿದ್ಧಾರೂಢ ಪ್ರಶಸ್ತಿ, ಶಿವರಾತ್ರಿ ದೇಶಿಕೇಂದ್ರ ಮಾಧ್ಯಮ ಪ್ರಶಸ್ತಿ, ಅಬ್ದುಲ್ ಕಲಾಂ ಪ್ರಶಸ್ತಿಗಳೂ ಇವರಿಗೆ ಲಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.