ADVERTISEMENT

ಮೈಸೂರು: ಚುನಾವಣೆ ಹೊಸ್ತಿಲಲ್ಲಿ ರಸ್ತೆಗೆ ಸಿಂಗಾರ!

ಜನರ ಮನವೊಲಿಸಿಕೊಳ್ಳುವ ಗಿಮಿಕ್: ಕಾಂಗ್ರೆಸ್ ಆರೋಪ

ಎಂ.ಮಹೇಶ
Published 25 ಫೆಬ್ರುವರಿ 2023, 19:30 IST
Last Updated 25 ಫೆಬ್ರುವರಿ 2023, 19:30 IST
ಮೈಸೂರಿನ ಇಟ್ಟಿಗೆಗೂಡಿನಲ್ಲಿ ಗುಂಡಿಗಳಿಂದ ತುಂಬಿ ಹೋಗಿದ್ದ ರಸ್ತೆಯನ್ನು ಈಚೆಗೆ ದುರಸ್ತಿ ಮಾಡಲಾಗಿದೆ/ ಪ್ರಜಾವಾಣಿ ಚಿತ್ರ
ಮೈಸೂರಿನ ಇಟ್ಟಿಗೆಗೂಡಿನಲ್ಲಿ ಗುಂಡಿಗಳಿಂದ ತುಂಬಿ ಹೋಗಿದ್ದ ರಸ್ತೆಯನ್ನು ಈಚೆಗೆ ದುರಸ್ತಿ ಮಾಡಲಾಗಿದೆ/ ಪ್ರಜಾವಾಣಿ ಚಿತ್ರ   

ಮೈಸೂರು: ವಿಧಾನಸಭೆ ಚುನಾವಣೆ ‌ಹೊಸ್ತಿಲಲ್ಲಿ ನಗರದ ಮುಖ್ಯ ರಸ್ತೆಗಳು ಅಭಿವೃದ್ಧಿಯ ಸ್ಪರ್ಶವನ್ನು ಕಂಡಿವೆ. ಜಿಲ್ಲೆಯ ಅಲ್ಲಲ್ಲಿ ಕೂಡ ಕಾಮಗಾರಿಗಳು ಪ್ರಗತಿಯಲ್ಲಿವೆ. ‘ಇದು ಜನರ ಮನವೊಲಿಕೆಗೆ ಸರ್ಕಾರ ಮಾಡುತ್ತಿರುವ ಗಿಮಿಕ್‌’ ಎಂದು ಕಾಂಗ್ರೆಸ್ ಆರೋಪಿಸಿದೆ.

ಗುಂಡಿಗಳಿಂದ ತುಂಬಿ ಹೋಗಿದ್ದ ರಸ್ತೆಗಳು ಸದ್ಯಕ್ಕೆ ಡಾಂಬರಿನಿಂದ ಕಂಗೊಳಿಸುತ್ತಿವೆ. ಕೆಲವು ರಸ್ತೆಗಳು ಕೆಲವೇ ಗಂಟೆಗಳಲ್ಲಿ ದುರಸ್ತಿ ಕಂಡಿವೆ! ಚಾಮರಾಜ ಮೊಹಲ್ಲಾ ಸೇರಿದಂತೆ ಹಲವೆಡೆ ರಾತ್ರಿಯಲ್ಲೂ ಕೆಲಸ ಮಾಡಿ ಮುಗಿಸಲಾಗಿದೆ!

ಅನುದಾನದ ಕೊರತೆ, ಇಚ್ಛಾಶಕ್ತಿಯ ಅಭಾವ, ಕೋವಿಡ್–19ನಿಂದ ಉಂಟಾದ ಲಾಕ್‌ಡೌನ್‌ ತಂದೊಡ್ಡಿದ್ದ ಸಂಕಷ್ಟ, ಮಳೆ, ಅಕಾಲಿಕ ಮಳೆ ಮೊದಲಾದ ಕಾರಣಗಳನ್ನು ಹೇಳುತ್ತಾ ಬಂದಿದ್ದ ಸರ್ಕಾರವು, ಚುನಾವಣೆ ಹೊಸ್ತಿಲಲ್ಲಿ ರಸ್ತೆಗಳ ಸುಧಾರಣೆಗೆ ಕ್ರಮ ಕೈಗೊಂಡು ಜನರ ಮನ ಗೆಲ್ಲಲು ಕಸರತ್ತು ನಡೆಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದನ್ನು ಚುನಾವಣೆಗೆ ಪೂರಕವಾಗಿ ಬಳಸಿಕೊಳ್ಳಲು ಶಾಸಕರು, ಪಕ್ಷದವರು ಹಾಗೂ ಟಿಕೆಟ್ ಆಕಾಂಕ್ಷಿಗಳು ಯೋಜಿಸಿದ್ದಾರೆ.

ADVERTISEMENT

ಚರ್ಚೆಗೆ ಗ್ರಾಸ:

ಅಲ್ಲದೇ ಕುರುಬಾರಹಳ್ಳಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಸಿದ್ದಾರ್ಥನಗರದ ಭಗವಾನ್ ಬುದ್ಧ ಹಾಗೂ ನವಾಬ್ ಹೈದರಲಿ (ಫೈವ್‌ ಲೈಟ್ ವೃತ್ತ) ಮೊದಲಾದ ವೃತ್ತಗಳಿಗೂ ಅಭಿವೃದ್ಧಿಯ ಸ್ಪರ್ಶ ನೀಡುವುದಕ್ಕೆ ಚಾಲನೆ ಕೊಡಲಾಗಿದೆ. ಇಷ್ಟು ತಿಂಗಳುಗಳು ಸುಮ್ಮನಿದ್ದು ಚುನಾವಣೆ ಸಮೀಪಿಸಿದಾಗ ಅಭಿವೃದ್ಧಿ ಮಂತ್ರ ಜಪಿಸುತ್ತಿರುವುದು ಜನರ ನಡುವೆ ಚರ್ಚೆಗೂ ಗ್ರಾಸವಾಗಿದೆ. ಅಲ್ಲದೇ, ತರಾತುರಿಯಲ್ಲಿ ನಡೆದಿರುವ ಕಾಮಗಾರಿಗಳ ಗುಣಮಟ್ಟದ ಬಗ್ಗೆಯೂ ಪ್ರಶ್ನೆಗಳು ಕೇಳಿಬರುತ್ತಿವೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮೇಯರ್ ಶಿವಕುಮಾರ್‌, ‘ನಮ್ಮ ಸರ್ಕಾರವು ಅಭಿವೃದ್ಧಿಗೆ ಆದ್ಯತೆ ನೀಡಿದೆ. ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದರು. ಅದರಂತೆ, ಕೆಲಸ ನಡೆಯುತ್ತಿದೆ. ನಗರದಲ್ಲಿ ಬಹುತೇಕ ಪ್ರಮುಖ ರಸ್ತೆಗಳ ಕಾಮಗಾರಿ ಪೂರ್ಣಗೊಂಡಿದೆ. ಎಲ್ಲಿಯೂ ಗುಂಡಿಗಳು ಇಲ್ಲ. ಹೊರವಲಯದಲ್ಲಿ ಹಾಗೂ ಒಳರಸ್ತೆಗಳಲ್ಲಿ ಅಲ್ಲಲ್ಲಿ ಕೆಲಸ ಬಾಕಿ ಇದ್ದು, ಮಾರ್ಚ್‌ 15ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಿದ್ದೇನೆ’ ಎಂದು ತಿಳಿಸಿದರು.

‘ಎರಡು ತಿಂಗಳ ಅವಧಿಯಲ್ಲಿ ರಸ್ತೆಗಳ ದುರಸ್ತಿಗಾಗಿ ₹ 300 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಫೆ.27ರಂದು ಅಧಿಕಾರಿಗಳ ಸಭೆ ಕರೆದಿದ್ದು, ಪ್ರಗತಿ ಪರಿಶೀಲನೆ ನಡೆಸಲಿದ್ದೇನೆ. ಕೋವಿಡ್, ಮಳೆ ಮೊದಲಾದ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿಗಳನ್ನೆಲ್ಲಾ ಕೈಗೆತ್ತಿಕೊಳ್ಳಲಾಗಿದೆ’ ಎಂದು ಹೇಳಿದರು.

ಚುನಾವಣೆ ಗಿಮಿಕ್:

‘ಸರ್ಕಾರ ಹಾಗೂ ಪಾಲಿಕೆ ನಡೆಸುತ್ತಿರುವುದು ಚುನಾವಣೆ ಗಿಮಿಕ್ ಅಲ್ಲದೇ ಮತ್ತೇನೂ ಅಲ್ಲ. ಎರಡು ವರ್ಷಗಳಿಂದ ಯಾವ ರಸ್ತೆಯನ್ನೂ ದುರಸ್ತಿಪಡಿಸಿರಲಿಲ್ಲ. ಹಲವು ಅಪಘಾತಗಳು ನಡೆದಿವೆ. ಈಗ, ಚುನಾವಣೆಯಲ್ಲಿ ಜನರನ್ನು ಒಲಿಸಿಕೊಳ್ಳಲು ಪ್ರಮುಖ ರಸ್ತೆಗಳನ್ನು ಮಾತ್ರವೇ ಡಾಂಬರೀಕರಣ ಮಾಡುತ್ತಿದ್ದಾರೆ’ ಎಂದು ಎಂಜಿನಿಯರ್ ಕೂಡ ಆಗಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ದೂರಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ 1,400 ಕಿ.ಮೀ. ರಸ್ತೆ ಬರುತ್ತದೆ. ಆದರೆ, ಹೃದಯ ಭಾಗದ 200 ಕಿ.ಮೀ.ಗೆ ಮಾತ್ರ ಡಾಂಬಕರೀಕರಣ ಮಾಡಿದ್ದಾರೆ. ಹೊರವಲಯ ಹಾಗೂ ಒಳರಸ್ತೆಗಳು ಗುಂಡಿಗಳಿಂದ ತುಂಬಿವೆ. ಬಿಜೆಪಿ ಶಾಸಕರಿರುವ (ಎಸ್.ಎ.ರಾಮದಾಸ್, ಎಲ್.ನಾಗೇಂದ್ರ) ಕೃಷ್ಣರಾಜ ಹಾಗೂ ಚಾಮರಾಜ ಕ್ಷೇತ್ರದಲ್ಲಿ ಮಾತ್ರ ಕೆಲಸ ನಡೆಯುತ್ತಿದೆ. ಕಾಂಗ್ರೆಸ್ ಶಾಸಕ ತನ್ವೀರ್‌ ಸೇಠ್ ಪ್ರತಿನಿಧಿಸುತ್ತಿರುವ ನರಸಿಂಹರಾಜ ಕ್ಷೇತ್ರಕ್ಕೆ ಅನ್ಯಾಯ ಮಾಡಲಾಗಿದೆ’ ಎಂದು ಆರೋಪಿಸಿದರು.

‘ತಮ್ಮನ್ನು ಓಲೈಸಲು ಬಿಜೆಪಿ ಮಾಡುತ್ತಿರುವ ತಂತ್ರವನ್ನು ಜನರು ಗಮನಿಸುತ್ತಿದ್ದಾರೆ. ಇಂತಹ ಗಿಮಿಕ್‌ಗಳ ಮೂಲಕ ಜನರನ್ನು ಮೆಚ್ಚಿಸಲಾಗುವುದಿಲ್ಲ. ಜೆಎಲ್‌ಬಿ ರಸ್ತೆಯ ಡಾಂಬರೀಕರಣವನ್ನು ದಸರಾ ಸಮಯದಲ್ಲಿ ಮಾಡಿದ್ದರು. ಈಗ ಮತ್ತೆ ಮಾಡಿದ್ದಾರೆ. ಕಳಪೆ ಗುಣಮಟ್ಟದ ಕೆಲಸ ಕೈಗೊಂಡಿರುವುದು ಕಂಡುಬರುತ್ತಿದೆ’ ಎಂದು ದೂರಿದರು.

ಪರಿಶೀಲಿಸಿ ಕ್ರಮ

ರಸ್ತೆಗಳ ಕಾಮಗಾರಿಯಲ್ಲಿ ಗುಣಮಟ್ಟ ಇಲ್ಲದಿರುವುದು ಕಂಡುಬಂದರೆ, ನಿರ್ದಿಷ್ಟವಾಗಿ ದೂರು ಸಲ್ಲಿಕೆಯಾದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

–ಶಿವಕುಮಾರ್‌, ಮೇಯರ್

ಗಮನಕ್ಕೆ ತರಲಿದ್ದೇವೆ

ನಗರದಲ್ಲಿ ಚೆನ್ನಾಗಿರುವ ರಸ್ತೆಯ ಮೇಲೂ ಡಾಂಬರು ಹಾಕಿ ಕಮಿಷನ್ ಪಡೆಯಲಾಗುತ್ತಿದೆ. ಚುನಾವಣೆ ಪ್ರಚಾರದ ವೇಳೆ ಇದೆಲ್ಲವನ್ನೂ ಜನರ ಗಮನಕ್ಕೆ ತರಲಿದ್ದೇವೆ.

–ಎಂ.ಲಕ್ಷ್ಮಣ, ವಕ್ತಾರ, ಕೆಪಿಸಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.