
ಹುಣಸೂರು (ಮೈಸೂರು ಜಿಲ್ಲೆ): ಇಲ್ಲಿನ ಎಮ್ಮೆಕೊಪ್ಪಲು ಗ್ರಾಮದ ಜಮೀನಿನಲ್ಲಿ ಮಂಗಳವಾರ ಸಂಜೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ನೀಲಮ್ಮ (40) ಹಾಗೂ ಅವರ ಪುತ್ರ ಹರೀಶ್ (19) ವಿದ್ಯುತ್ ಸ್ಪರ್ಷದಿಂದ ಸ್ಥಳದಲ್ಲೇ ಮೃತಪಟ್ಟರು.
‘ಸಂಜೆ ಸುಮಾರು 6.30ರ ವೇಳೆಯಲ್ಲಿ ನೀಲಮ್ಮ ಬಹಿರ್ದೆಸೆಗೆ ಹೋಗುವ ಉದ್ದೇಶದಿಂದ ತಂತಿ ಬೇಲಿ ದಾಟುವ ವೇಳೆಯಲ್ಲಿ ದುರ್ಘಟನೆ ನಡೆದಿದೆ. ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ಆಧಾರ ತಂತಿಯು ತುಂಡಾಗಿ ವಿದ್ಯುತ್ ಲೈನ್ ತಂತಿಗೆ ತಾಕಿಕೊಂಡಿರುವುದನ್ನು ಗಮನಿಸದೆ ಅವರು ಅದನ್ನು ತುಳಿದು ಮೃತಪಟ್ಟರು. ತಾಯಿಯನ್ನು ರಕ್ಷಿಸಲು ಧಾವಿಸಿದ ಹರೀಶ್ ಅವರೂ ಮೃತಪಟ್ಟರು’ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್ ತಿಳಿಸಿದ್ದಾರೆ.
₹ 10 ಲಕ್ಷ ಪರಿಹಾರ: ಸೆಸ್ಕ್ ಎಇಇ ಜಗದೀಶ್ ಮಾತನಾಡಿ, ‘ಸ್ಮಶಾನ ಅಭಿವೃದ್ಧಿ ನಡೆಸುವ ಸಮಯದಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ಗೈ ವೈರ್ ಅನ್ನು ಕಿತ್ತು ಹಾಕಿದ್ದು ದುರ್ಘಟನೆಗೆ ಕಾರಣವಾಗಿದೆ. ಮೃತರ ಕುಟುಂಬಕ್ಕೆ ಸೆಸ್ಕ್ ₹ 10 ಲಕ್ಷ ಪರಿಹಾರ ನೀಡಲು ಸಿದ್ಧವಿದೆ. ಕುಟುಂಬದವರು ಪರಿಹಾರದ ಚೆಕ್ ಯಾರ ಹೆಸರಿಗೆ ಬರೆದು ನೀಡಬೇಕು ಎಂದು ತೀರ್ಮಾನಿಸಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.