ADVERTISEMENT

ರಾಜಬೀದಿಯಲ್ಲಿ ‘ಅರ್ಜುನ’ನ ದರ್ಬಾರ್‌

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 19:30 IST
Last Updated 8 ಸೆಪ್ಟೆಂಬರ್ 2019, 19:30 IST
ಆನೆಗಳಿಗೆ ತಾಲೀಮು
ಆನೆಗಳಿಗೆ ತಾಲೀಮು   

ಅರವತ್ತನೇ ವಸಂತದಲ್ಲಿರುವ ಅರ್ಜುನನಿಗೆ ಅದೇ ಉತ್ಸಾಹ, ತೇಜಸ್ಸು. ರಾಜಬೀದಿಯಲ್ಲಿ ಅದೇ ಗಾಂಭೀರ್ಯದ ನಡಿಗೆ. ಆತನ ಸಂಗಡಿಗರಾದ ಅಭಿಮನ್ಯು, ಧನಂಜಯ, ಈಶ್ವರ, ವರಲಕ್ಷ್ಮಿ, ವಿಜಯಾ ಆನೆಗಳು ಸಹ ವಿನಯ, ವಿಧೇಯತೆಯಿಂದಲೇ ಹೆಜ್ಜೆ ಹಾಕಿದವು. ರಾಜಬೀದಿಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಕುತೂಹಲದಿಂದ ನಿಂತು ಗಜಪಡೆಯ ಸವಾರಿಯನ್ನು
ಕಣ್ತುಂಬಿಕೊಂಡರು.

ವಿಶ್ವವಿಖ್ಯಾತ ದಸರಾದ ಜಂಬೂ ಸವಾರಿಯಲ್ಲಿ ಅಂಬಾರಿ ಹೊರುವ ಅರ್ಜುನ ಹಾಗೂ ಇತರ ನಾಲ್ಕು ಆನೆಗಳಿಗೆ ಭಾರ ಹೊರುವ ತಾಲೀಮು ಶುಕ್ರವಾರದಿಂದ ಆರಂಭವಾಯಿತು. ಅರ್ಜುನ ಆನೆಯು 750 ಕೆ.ಜಿ. ತೂಕವಿರುವ ಚಿನ್ನದ ಅಂಬಾರಿಯನ್ನು ಹೊತ್ತು ಅರಮನೆ ಆವರಣದಿಂದ ಪಂಜಿನ ಕವಾಯತು ನಡೆಯುವ ಬನ್ನಿಮಂಟಪದ ಮೈದಾನದವರೆಗೆ ಸಾಗಬೇಕು. ಹೀಗಾಗಿ, ಆರಂಭಿಕವಾಗಿ 350 ಕೆ.ಜಿ. ತೂಕದ ಮರಳಿನ ಚೀಲ ಹಾಗೂ 50 ಕೆ.ಜಿ. ತೂಕದ ತೊಟ್ಟಿಲನ್ನು ಅರ್ಜುನನಿಗೆ ಕಟ್ಟುವ ಪ್ರಕ್ರಿಯೆ ಬೆಳಿಗ್ಗೆ 7 ಗಂಟೆಯಿಂದಲೇ ಆರಂಭವಾಯಿತು.

ಮಾವುತರು, ಕಾವಾಡಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿದ್ದರು. ಆನೆಗಳಿಗೆ ಪೂಜೆ ಮಾಡಿದ ಬಳಿಕ, ಮರಳಿನ ಚೀಲ ಹಾಗೂ ತೊಟ್ಟಿಲು ಬೀಳದಂತೆ ಬಿಗಿಯಾಗಿ ಕಟ್ಟಲಾಯಿತು. ಹೂವಿನ ಸಿಂಗಾರವನ್ನೂ ಮಾಡಲಾಗಿತ್ತು. ಬೆಳಿಗ್ಗೆ 8 ಗಂಟೆ ಸುಮಾರಿಗೆ ಅರ್ಜುನ, ಅಭಿಮನ್ಯು, ಧನಂಜಯ, ಈಶ್ವರ, ವರಲಕ್ಷ್ಮಿ, ವಿಜಯಾ ಆನೆಗಳು ತಮ್ಮ ಪಯಣವನ್ನು
ಆರಂಭಿಸಿದವು.

ADVERTISEMENT

ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ದ್ವಾರದಿಂದ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ ಮಾರ್ಗವಾಗಿ ಬನ್ನಿಮಂಟಪದವರೆಗೆ ಸಾಗಿದವು. ಸಯ್ಯಾಜಿರಾವ್ ರಸ್ತೆಯ ದೇವರಾಜ ಮಾರುಕಟ್ಟೆ ಬಳಿ ಬೀದಿಬದಿ ವ್ಯಾಪಾರಿಗಳು ಆನೆಗಳಿಗೆ ಹೂವಿನ ಹಾರಗಳನ್ನು ನೀಡಿದರು. ಮಾವುತರು ಆನೆಗಳಿಗೆ ಮುಡಿಸಿದರು. ಆನೆಗಳಿಗೆ ಮುಡಿಸಿದ್ದ ಹೂವುಗಳನ್ನು ಕೆಲ ಮಹಿಳೆಯರು ಮಾವುತರಿಂದ ಕೇಳಿ ಪಡೆಯುತ್ತಿದ್ದ ದೃಶ್ಯ ಕಂಡುಬಂದಿತು. ಲದ್ದಿ ಹಾಕಲು ಅರ್ಜುನ ಅಲ್ಲಲ್ಲಿ ನಿಲ್ಲುತ್ತಿದ್ದ.

ಮಾರ್ಗ ಮಧ್ಯೆ ಹಳೆಯ ಎಪಿಎಂಸಿ ಬಳಿ ಆನೆಗಳನ್ನು ನಿಲ್ಲಿಸಲಾಯಿತು. ಮಾವುತರು, ಕಾವಾಡಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಟೀ, ಕಾಫಿ ಪೂರೈಸಲಾಯಿತು. ಈ ಸಂದರ್ಭದಲ್ಲಿ ಆನೆಗಳ ಚಿತ್ರ ತೆಗೆಯಲು ಹಾಗೂ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬಿದ್ದರು. ಆನೆಗಳ ಹತ್ತಿರ ಸುಳಿಯದಂತೆ ಮಾವುತರು, ಕಾವಾಡಿಗಳು ಎಚ್ಚರಿಕೆ ವಹಿಸಿದ್ದರು. ನಂತರ ಪಯಣವನ್ನು ಮುಂದುವರೆಸಲಾಯಿತು. ಬನ್ನಿಮಂಟಪಕ್ಕೆ ಬೆಳಿಗ್ಗೆ 9.15ರ ಸುಮಾರಿಗೆ ಆನೆಗಳು ತಲುಪಿದವು. ಬಳಿಕ, ಅರಮನೆ ಆವರಣಕ್ಕೆ ಕರೆತರಲಾಯಿತು.

ಆನೆಗಳು ಸಾಗುವ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಆನೆಗಳ ಕಾಲಿಗೆ ಮೊಳೆ, ಕಬ್ಬಿಣದ ಚೂರುಗಳು ಸಿಗದಂತೆ ಮುನ್ನೆಚ್ಚರಿಕೆಯಾಗಿ ಆಯಸ್ಕಾಂತವಿರುವ ಸಾಧನದಿಂದ ರಸ್ತೆಯನ್ನು ಸ್ವಚ್ಛಗೊಳಿಸಲಾಯಿತು.

60 ವರ್ಷ ಮೀರಿದ ಯಾವುದೇ ಆನೆಗೆ ಹೆಚ್ಚಿನ ಭಾರ ಹೊರಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಅರ್ಜುನ ಆನೆ 60ನೇ ವರ್ಷದಲ್ಲಿರುವುದರಿಂದ ಅಂಬಾರಿ ಹೊರಲು ಇದು ಕೊನೇ ಅವಕಾಶ. ವೃದ್ಧಾಪ್ಯ ಜೀವನಕ್ಕೆ ಕಾಲಿಡುತ್ತಿದ್ದೇನೆ ಎಂಬ ಅರಿವು ಅರ್ಜುನನಿಗಿಲ್ಲ. ಆದರೆ, ವೃದ್ಧಾಪ್ಯವನ್ನೂ ಮೆಟ್ಟಿನಿಂತವನಂತೆ ಉತ್ಸಾಹದಿಂದಲೇ ತಾಲೀಮಿನಲ್ಲಿ ಪಾಲ್ಗೊಳ್ಳುತ್ತಿದ್ದಾನೆ.

ಅರ್ಜುನನ ಉತ್ತರಾಧಿಕಾರಿ ಯಾರು?:

‘ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳು ಜನರು ಹಾಗೂ ವಾಹನ ಗೌಜುಗದ್ದಲಗಳ ನಡುವೆ ಸರಾಗವಾಗಿ ಹೋಗಬೇಕು ಎಂಬ ಉದ್ದೇಶದಿಂದ ಈವರೆಗೂ ಅರಮನೆ ಆವರಣದಿಂದ ಬನ್ನಿಮಂಟಪ ಮೈದಾನದವರೆಗೂ ತಾಲೀಮು ನಡೆಸಿದ್ದೆವು. ಎರಡನೇ ಹಂತವಾಗಿ ಅರ್ಜುನ ಆನೆ ಮೇಲೆ ಭಾರ ಹೊರಿಸುವ ತಾಲೀಮು ಆರಂಭಿಸಿದ್ದೇವೆ. ಅರ್ಜುನ ಅಂಬಾರಿಯನ್ನು ಹೊತ್ತು ಹೋಗಬೇಕು. ಹೀಗಾಗಿ, ಮರಳಿನ ಚೀಲವನ್ನು ಅದರ ಮೇಲೆ ಹೊರಸಿ ತಾಲೀಮು ಆರಂಭಿಸಿದ್ದೇವೆ. ಪ್ರಾರಂಭಿಕವಾಗಿ ಅಂದಾಜು 350 ಕೆ.ಜಿ ತೂಕದ ಮರಳಿನ ಮೂಟೆಗಳನ್ನು ಹಾಕಿದ್ದೇವೆ. ಹಂತ ಹಂತವಾಗಿ ಮರಳಿನ ತೂಕವನ್ನು ಹೆಚ್ಚಿಸಲಾಗುತ್ತದೆ. ಅಂಬಾರಿ ತೂಕದಷ್ಟು ಅಥವಾ ಅದಕ್ಕಿಂತ 50 ಕೆ.ಜಿ. ಹೆಚ್ಚಿನ ತೂಕವನ್ನು ಹೊರಿಸಲಾಗುತ್ತದೆ. ಅಂಬಾರಿ ಹೊರಲು ಸಿದ್ಧವಾಗಿದೆ ಎಂಬುದನ್ನು ಖಾತರಿ ಪಡಿಸಿಕೊಂಡ ನಂತರವಷ್ಟೇ ಜಂಬೂಸವಾರಿ ದಿನ ಆನೆ ಮೇಲೆ ಅಂಬಾರಿ ಹೊರಿಸಲಾಗುತ್ತದೆ’ ಎಂದು ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಎಂ.ಜಿ.ಅಲೆಕ್ಸಾಂಡರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅರ್ಜುನನಿಗೆ ಮಾತ್ರ ಭಾರ ಹೊರಿಸಿ ತಾಲೀಮು ನಡೆಸುವುದಿಲ್ಲ. ಅಭಿಮನ್ಯು, ಧನಂಜಯ, ಈಶ್ವರ ಹಾಗೂ ಇನ್ನೂ ಬರಬೇಕಿರುವ ಜಯಪ್ರಕಾಶ ಆನೆಯ ಮೇಲೂ ಭಾರ ಹೊರಿಸಿ ತಾಲೀಮು ನಡೆಸಲಾಗುತ್ತದೆ. ಕೊನೆಯ ಗಳಿಗೆಯಲ್ಲಿ ಅರ್ಜುನ ಭಾರ ಹೊರಲು ಸಾಧ್ಯವಾಗದೇ ಇದ್ದರೆ, ಅಂತಹ ಸಂದರ್ಭದಲ್ಲಿ ಈ ಆನೆಗಳ ಪೈಕಿ ಯಾವುದಾದರೂ ಒಂದರ ಮೇಲೆ ಅಂಬಾರಿ ಹೊರಿಸಲಾಗುತ್ತದೆ
ಎಂದರು.

‘ಅರ್ಜುನ ಕೊನೆಯ ಬಾರಿ ಅಂಬಾರಿ ಹೊರಲಿದ್ದಾನೆ. ಅರ್ಜುನನ ನಂತರ ಉತ್ತರಾಧಿಕಾರಿ ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ. ಹೊಸ ಆನೆಯನ್ನು ಸಿದ್ಧಪಡಿಸುವ ಅನಿವಾರ್ಯ ನಮ್ಮ ಮುಂದಿದೆ. ಸೌಮ್ಯ ಸ್ವಭಾವ ಹೊಂದಿರುವ, ಹೆಚ್ಚಿನ ಭಾರ ಹೊರುವ ಸಾಮರ್ಥ್ಯ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರೈಸುವ ಆನೆಯನ್ನು ಉತ್ತರಾಧಿಕಾರಿಯನ್ನಾಗಿ ಮಾಡಬೇಕು. ಅಂಬಾರಿ ಹೊರಿಸಲು ಕೆಲ ವರ್ಷಗಳಿಂದ ಅಭಿಮನ್ಯು ಆನೆಯನ್ನು ಸಿದ್ಧಪಡಿಸಲಾಗುತ್ತಿದೆ. ಆ ದಿನ ಬಂದಾಗ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.

ಎರಡನೇ ಹಂತದ ಆನೆಗಳು ಸೆ.9ರಂದು ಬರುವ ಸಾಧ್ಯತೆ ಇದೆ. ಅವು ಸಾಲಾನೆಗಳಾಗಿ ಬರುತ್ತವೆ. ಹೀಗಾಗಿ, ಅವುಗಳಿಗೆ ಹೆಚ್ಚಿನ ತಾಲೀಮಿನ ಅಗತ್ಯವಿಲ್ಲ. ಈ ಆನೆಗಳ ಪೈಕಿ ಜಯಪ್ರಕಾಶ ಆನೆಗೆ ಮಾತ್ರ ಭಾರ ಹೊರಿಸುವ ತಾಲೀಮು ನಡೆಸಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.