ಎಚ್.ಡಿ.ಕೋಟೆ: ತಾಲ್ಲೂಕಿನ ಗೌಡಿಮಾಚನಾಯಕನಹಳ್ಳಿ ಗ್ರಾಮದ ರೈತ ಎ.ಟಿ.ನಾಗರಾಜು ಅವರ 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ, 5 ತೆಂಗಿನ ಸಸಿಗಳು ಮತ್ತು ಮಾವಿನ ಗಿಡಗಳನ್ನು ಕಾಡಾನೆಗಳ ಹಿಂಡು ದಾಳಿ ಮಾಡಿ ನಾಶಪಡಿಸಿದೆ.
ಬಸವರಾಜು ಎಂಬ ರೈತನ ಜಮೀನಿನಲ್ಲಿ ಬೆಳೆದಿದ್ದ ಎರಡು ಎಕರೆ ಬಾಳೆಯನ್ನು ಆನೆಗಳು ಸಂಪೂರ್ಣ ತುಳಿದು ನಾಶಪಡಿಸಿವೆ.
ಸೂಕ್ತ ಪರಿಹಾರಕ್ಕೆ ಒತ್ತಾಯ: ಫಸಲು ನಾಶವಾಗಿರುವುದರಿಂದ ರೈತರಿಗೆ ಅಪಾರ ನಷ್ಟ ಆಗಿದೆ. ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿ ಶೀಘ್ರ ಪರಿಹಾರ ಕೊಡಿಸಬೇಕು ಎಂದು ರೈತರು ಒತ್ತಾಯಿಸಿದರು.
ಆನೆ ಹಾವಳಿಗೆ ಕಡಿವಾಣ ಹಾಕಿ: ವೀರನ ಹೊಸಹಳ್ಳಿ ಮತ್ತು ಮೇಟಿಕುಪ್ಪೆ ವಲಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ನಿರಂತರ ದಾಳಿ ನಡೆಸಿ, ಫಸಲುಗಳನ್ನು ತಿಂದು, ತುಳಿದು ನಾಶ ಪಡಿಸುತ್ತಿವೆ. ಮಾಹಿತಿ ಇದ್ದರೂ ಅರಣ್ಯಾಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಕೂಡಲೇ ಎಚ್ಚೆತ್ತುಕೊಂಡು ಆನೆಗಳ ಹಾವಳಿಗೆ ಕಡಿವಾಣ ಹಾಕದಿದ್ದರೆ ಅರಣ್ಯ ಕಚೇರಿಗೆ ಮುತ್ತಿಗೆ ಹಾಕುವುದಾಗಿ ರೈತ ಸಂಘಟನೆಯ ಮುಖಂಡ ಎ.ಟಿ.ನಾಗರಾಜು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.