ಮೈಸೂರು: ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳು ವಾಸ್ತವ್ಯ ಹೂಡಿರುವ ಸ್ಥಳಕ್ಕೆ ಗುರುವಾರ ರಾತ್ರಿ ಅನುಮತಿ ಪಡೆಯದೆ ತೆರಳಿ ಆನೆಗಳೊಂದಿಗೆ ಅಪಾಯಕಾರಿಯಾಗಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಕೃತಿ ವಿರುದ್ಧ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ.
‘ಅನುಮತಿ ಪಡೆಯದೆ ಆನೆಗಳ ಬಳಿ ತೆರಳಿರುವ ಬಗ್ಗೆ ಮೂರು ದಿನಗಳೊಳಗೆ ಹೇಳಿಕೆ ನೀಡಬೇಕು ಎಂದು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆಯ ಗಂಭೀರತೆ ಆಧರಿಸಿ ₹ 50 ಸಾವಿರದವರೆಗೆ ದಂಡ ಹಾಕುವ ಅಧಿಕಾರವಿದೆ’ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಬಿ. ಪ್ರಭುಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ರಾತ್ರಿ 7ಕ್ಕೆ ಆನೆಗಳ ಬಳಿ ತೆರಳಿರುವುದು ಗೊತ್ತಾಗಿದೆ. ಆಕೆ ಕೋಡಿ ಸೋಮನಾಥೇಶ್ವರ ದೇವಾಲಯಕ್ಕೆ ತೆರಳುವುದಾಗಿ ತಿಳಿಸಿದ್ದು, ಅಲ್ಲಿ ಆನೆಗಳೊಂದಿಗೆ ಫೋಟೊ ತೆಗೆಸಿಕೊಂಡಿದ್ದಾರೆ’ ಎಂದು ವಿವರಿಸಿದರು.
ವ್ಯಕ್ತಿ ಆತ್ಮಹತ್ಯೆ
ಮೈಸೂರು: ಇಲ್ಲಿನ ವಿಜಯನಗರ ವಾಟರ್ ಟ್ಯಾಂಕ್ ಬಳಿಯ ಖಾಸಗಿ ಲಾಡ್ಜ್‌ನಲ್ಲಿ ಈಚೆಗೆ ಕಾರು ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಲವಾಲ ತಾಲ್ಲೂಕಿನ ಹುಯಿಲಾಳು ಗ್ರಾಮದ ನಿವಾಸಿ ಶಂಕರ್ (38) ಆತ್ಮಹತ್ಯೆ ಮಾಡಿಕೊಂಡವರು.
ಸಾಲಗಾರರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
‘ಸಾಲಕ್ಕಾಗಿ ಕಾರನ್ನು ಗಿರವಿ ಇಟ್ಟಿದ್ದರು. ಸಾಲವನ್ನು ಸಕಾಲದಲ್ಲಿ ತೀರಿಸದೇ ಇದ್ದುದ್ದರಿಂದ, ಸಾಲ ನೀಡಿದ್ದ ಸ್ನೇಹಿತ ಅಭಿ ಸೇರಿದಂತೆ ಇತರರು ಗಲಾಟೆ ಮಾಡಿದ್ದರು. ಇದರಿಂದ ಮನನೊಂದ ಅವರು, ಖಾಸಗಿ ಲಾಡ್ಜ್‌ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಶಂಕರ್ ಪತ್ನಿ ದೂರು ನೀಡಿದ್ದಾರೆ.
ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.