ಮೈಸೂರು: ಕೆಸರೆ ಬಳಿಯ ಪುಷ್ಪಾಶ್ರಮ ಜಂಕ್ಷನ್‌ನಲ್ಲಿರುವ ಸರ್ವೆ ನಂ. 494ರಲ್ಲಿ ಇರುವ 5.21 ಎಕರೆ ನಗರಸಭೆಯ ಜಾಗವನ್ನು ಅತಿಕ್ರಮಿಸಿದ್ದ ಅಂಗಡಿ, ಗ್ಯಾರೇಜ್, ಕಟ್ಟಡಗಳನ್ನು ಪಾಲಿಕೆ ಅಧಿಕಾರಿಗಳು ಶನಿವಾರ ತೆರವುಗೊಳಿಸಿದರು.
ಶನಿವಾರ ಬೆಳಿಗ್ಗೆ ನರಸಿಂಹರಾಜ ಠಾಣೆಯ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದ ವಲಯ- 8ರ ಸಹಾಯಕ ಆಯುಕ್ತ ಸೋಮಶೇಖರ್ ನೇತೃತ್ವದ ಅಧಿಕಾರಿಗಳ ತಂಡ ಅತಿಕ್ರಮಣವಾಗಿದ್ದ ಜಾಗವನ್ನು ತೆರವುಗೊಳಿಸಿತು. ಕಾರ್ಯಾಚರಣೆ ವೇಳೆ ಅತಿಕ್ರಮಣ ಮಾಡಿಕೊಂಡಿದ್ದವರು ಅಡ್ಡಿಪಡಿಸಿದರು. ತೆರವುಗೊಳಿಸಲು ಒಂದು ದಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಕಿವಿಗೊಡದ ಅಧಿಕಾರಿಗಳು ತೆರವು ಕಾರ್ಯ ಮುಂದುವರಿಸಿದರು.
‘ನಗರಸಭೆಯ ಜಾಗ ಎಂಬುದನ್ನು ಮರೆಮಾಚಿ ಹೋಟೆಲ್, ಅಂಗಡಿ, ಗ್ಯಾರೇಜ್, ಕಲ್ಲು, ಮರಳು, ಇಟ್ಟಿಗೆ ಮುಂತಾದ ಕಟ್ಟಡ ಸಾಮಗ್ರಿಗಳನ್ನು ಇಟ್ಟುಕೊಂಡು ಹಲವಾರು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದರು. ಪಾಲಿಕೆಯಿಂದ ಅನುಮತಿ ಪಡೆದಿದ್ದೇವೆಂದು ಬೇಲಿಯನ್ನೂ ಹಾಕಿಕೊಂಡಿದ್ದರು. ಸಾರ್ವಜನಿಕರ ದೂರನ್ನು ಆಧರಿಸಿ ದಾಖಲೆ ಪರಿಶೀಲಿಸಿದಾಗ ನಗರಸಭೆಗೆ ಸೇರಿದ ಜಾಗವೆಂದು ಖಚಿತವಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
‘ಕೆಸರೆಯಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಇರುವುದರಿಂದ ಖಾಲಿ ಜಾಗದಲ್ಲಿ ಕಾಂಪ್ಯಾಕ್ಟರ್ ವಾಹನಗಳನ್ನು ನಿಲ್ಲಿಸಿಕೊಳ್ಳಲಾಗುವುದು. ಪಾಲಿಕೆ ಜಾಗಕ್ಕೆ ಕಾಂಪೌಂಡ್ ನಿರ್ಮಾಣ ಮಾಡಿ, ಪಾಲಿಕೆ ಕೇಂದ್ರ ಕಚೇರಿ ಅಥವಾ ವಲಯ ಕಚೇರಿಗಳಲ್ಲಿ ನಿಲ್ಲಿಸುವ ವಾಹನಗಳನ್ನು ಇಲ್ಲಿಯೇ ತಂದು ನಿಲ್ಲಿಸಲಾಗುವುದು’ ಎಂದು ಸೋಮಶೇಖರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.