ADVERTISEMENT

ಮೈಸೂರು: ಜಿಲ್ಲೆಯಲ್ಲಿ ವರ್ಷದ ಕೊನೆಯ ದಿನ ಮದ್ಯದ ಹೊಳೆ

ಡಿ.31ರಂದು ₹11.77 ಕೋಟಿ ಮೌಲ್ಯದ 39,885 ಬಾಕ್ಸ್ ಮದ್ಯ ಮಾರಾಟ

ಮೋಹನ್ ಕುಮಾರ ಸಿ.
Published 2 ಜನವರಿ 2025, 5:19 IST
Last Updated 2 ಜನವರಿ 2025, 5:19 IST
ನಗರದ ಕ್ಲಬ್‌ವೊಂದರಲ್ಲಿ ಮಂಗಳವಾರ ರಾತ್ರಿ ನಡೆದ ಹೊಸ ವರ್ಷಾಚರಣೆ ಕಾರ್ಯಕ್ರಮ –ಪ್ರಜಾವಾಣಿ ಚಿತ್ರ
ನಗರದ ಕ್ಲಬ್‌ವೊಂದರಲ್ಲಿ ಮಂಗಳವಾರ ರಾತ್ರಿ ನಡೆದ ಹೊಸ ವರ್ಷಾಚರಣೆ ಕಾರ್ಯಕ್ರಮ –ಪ್ರಜಾವಾಣಿ ಚಿತ್ರ   

ಮೈಸೂರು: ಹೊಸ ವರ್ಷಾಚರಣೆ ಕಾರಣ ಜಿಲ್ಲೆಯಲ್ಲಿ ಮದ್ಯ ಖರೀದಿಗೆ ಭಾರಿ ಬೇಡಿಕೆ ವ್ಯಕ್ತವಾಗಿತ್ತು. ಡಿ.31ರಂದು ದಾಖಲೆಯ ₹11.77 ಕೋಟಿ ಮೌಲ್ಯದ ಮದ್ಯ ಮಾರಾಟ ನಡೆದಿದೆ.

ನಗರದಲ್ಲಿ 18,302 ಹಾಗೂ ಗ್ರಾಮೀಣ ಭಾಗದಲ್ಲಿ 21,583 ಮದ್ಯದ ಬಾಕ್ಸ್ ಮಾರಾಟವಾಗಿವೆ. ಡಿ.31ರ ಸಂಜೆ 4ರಿಂದ ರಾತ್ರಿ 11ರ ವರೆಗೆ ಮದ್ಯದಂಗಡಿಗಳಲ್ಲಿ ವಹಿವಾಟು ಜೋರಾಗಿ ನಡೆಯಿತು. ಗ್ರಾಹಕರು ಸರದಿ ಸಾಲಿನಲ್ಲಿ ನಿಂತು ಖರೀದಿಸಿದ್ದರು. 

ಡಿಸೆಂಬರ್ ತಿಂಗಳಲ್ಲಿ ಭಾರತೀಯ ತಯಾರಿಕಾ ಮದ್ಯವು 3,16,339 ಪೆಟ್ಟಿಗೆ ಮಾರಾಟವಾಗಿದೆ. ಡಿ.31ರಂದೇ ಜಿಲ್ಲೆಯಲ್ಲಿ 39,885 ಬಾಕ್ಸ್ ಮಾರಾಟವಾಗಿವೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಇಡೀ ತಿಂಗಳಿನಲ್ಲಿ ಮದ್ಯದ ವ್ಯಾಪಾರ ಅಲ್ಪ ಕುಸಿದಿದೆ.

ADVERTISEMENT

2023ರ ಡಿಸೆಂಬರ್‌ನಲ್ಲಿ 3,23,428 ಪೆಟ್ಟಿಗೆ ಮಾರಾಟವಾಗಿದ್ದು, ಅದು ದಾಖಲೆಯಾಗಿತ್ತು. ಈ ವರ್ಷ 7,089 ಬಾಕ್ಸ್ ಇಳಿಕೆಯಾಗಿವೆ. ಈ ವರ್ಷದ ಡಿಸೆಂಬರ್‌ನಲ್ಲಿ ಜಿಲ್ಲೆಯ ಮದ್ಯದಂಗಡಿಗಳಲ್ಲಿ ₹ 120.17 ಕೋಟಿ ಮೌಲ್ಯದ ಐಎಂಎಲ್ ಮದ್ಯ ಹಾಗೂ ₹ 22.17 ಕೋಟಿ ಮೌಲ್ಯದ ಬಿಯರ್‌ ಬಾಕ್ಸ್‌ಗಳು ಬಿಕರಿಯಾಗಿವೆ.

‘ಜಿಲ್ಲೆಯಲ್ಲಿ ಡಿಸೆಂಬರ್‌ ತಿಂಗಳ ಒಟ್ಟು ಮಾರಾಟ ₹ 142.29 ಕೋಟಿ ಆಗಿದ್ದು, ಡಿ.31ರಂದು ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಬಾಕ್ಸ್‌ಗಳು ಮಾರಾಟವಾಗಿವೆ’ ಎಂದು ಅಬಕಾರಿ ಇಲಾಖೆಯ ಜಿಲ್ಲೆಯ ಗ್ರಾಮೀಣ ವಿಭಾಗದ ಉಪ ಆಯುಕ್ತೆ ಮಹದೇವಿ ಬಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷದ ಕೊನೆ ದಿನ ಹೆಚ್ಚು ಮದ್ಯ ಮಾರಾಟವಾಗಿತ್ತು. ಹೊಸ ವರ್ಷದಿಂದ ದರ ಹೆಚ್ಚಳವಾಗುತ್ತದೆಂಬ ಕಾರಣದಿಂದ ಹೆಚ್ಚು ಖರೀದಿ ಆಗಿತ್ತು’ ಎಂದರು.

ಪ್ರತಿ ಬಾಕ್ಸ್‌ನಲ್ಲಿ 8.46 ಲೀಟರ್‌ ಮದ್ಯ ಇರುತ್ತದೆ. ಈ ವರ್ಷ 25 ಸಾವಿರ ಬಾಕ್ಸ್ ಹೆಚ್ಚುವರಿಯಾಗಿ ಅಬಕಾರಿ ಇಲಾಖೆಯು ತರಿಸಿತ್ತು.  

‘ನಗರದಲ್ಲಿ ಮದ್ಯ ಮಾರಾಟ ಚೆನ್ನಾಗಿ ಆಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 2 ರಷ್ಟು ಕಡಿಮೆಯಾಗಿದೆ. ನಗರದಲ್ಲಿ 10,260 ಐಎಂಎಲ್‌, 8,042 ಬಿಯರ್ ಬಾಕ್ಸ್ ಮಾರಾಟವಾಗಿವೆ’ ಎಂದು ಇಲಾಖೆಯ ನಗರ ವಿಭಾಗದ ಉಪ ಆಯುಕ್ತ ನಾಗರಾಜಪ್ಪ ಹೇಳಿದರು. 

ಡಿಸೆಂಬರ್ ವಹಿವಾಟು ₹142.29 ಕೋಟಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಖರೀದಿ ಕಳೆದ ವರ್ಷಕ್ಕಿಂತ ಶೇ 2ರಷ್ಟು ಮಾರಾಟ ಇಳಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.