ADVERTISEMENT

ಕೇಂದ್ರಕ್ಕೆ ನಿಯೋಗ ಕರೆದೊಯ್ಯಲು ಸಲಹೆ

ಎಂಜಿನಿಯರುಗಳ ಸಂಸ್ಥೆಯ ಕಾವೇರಿ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 20:22 IST
Last Updated 25 ಜೂನ್ 2019, 20:22 IST
ಎಂಜಿನಿಯರುಗಳ ಸಂಸ್ಥೆಯ ಕಾವೇರಿ ತಾಂತ್ರಿಕ ಸಲಹಾ ಸಮಿತಿಯು ಕಾವೇರಿ ನದಿ ನೀರು ಹಂಚಿಕೆ ಕುರಿತು ಮೈಸೂರಿನಲ್ಲಿ ಮಂಗಳವಾರ ನಡೆಸಿದ ಸಭೆಯಲ್ಲಿ ಹಲವು ಎಂಜಿನಿಯರುಗಳು ಭಾಗಿಯಾಗಿದ್ದರು
ಎಂಜಿನಿಯರುಗಳ ಸಂಸ್ಥೆಯ ಕಾವೇರಿ ತಾಂತ್ರಿಕ ಸಲಹಾ ಸಮಿತಿಯು ಕಾವೇರಿ ನದಿ ನೀರು ಹಂಚಿಕೆ ಕುರಿತು ಮೈಸೂರಿನಲ್ಲಿ ಮಂಗಳವಾರ ನಡೆಸಿದ ಸಭೆಯಲ್ಲಿ ಹಲವು ಎಂಜಿನಿಯರುಗಳು ಭಾಗಿಯಾಗಿದ್ದರು   

ಮೈಸೂರು: ನಗರದಲ್ಲಿ ಮಂಗಳವಾರ ನಡೆದ ಎಂಜಿನಿಯರುಗಳ ಸಂಸ್ಥೆಯ ಕಾವೇರಿ ತಾಂತ್ರಿಕ ಸಲಹಾ ಸಮಿತಿ ಸಭೆಯು ಕಾವೇರಿ ನದಿ ನೀರು ಹಂಚಿಕೆ ಕುರಿತು ಕೇಂದ್ರಕ್ಕೆ ನಿಯೋಗವನ್ನು ಕೊಂಡೊಯ್ಯಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿತು.

ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಅವರನ್ನು ರಾಜ್ಯ ಸರ್ಕಾರದ ಪ್ರತಿನಿಧಿಗಳು ಹಾಗೂ ರಾಜ್ಯದ ಎಲ್ಲ ಸಂಸದರನ್ನು ಒಳಗೊಂಡ ನಿಯೋಗ ಭೇಟಿ ಮಾಡಬೇಕು. ರಾಜ್ಯದ ಜಲಾಶಯಗಳ ಸ್ಥಿತಿಗತಿ ಹಾಗೂ ಮುಂಗಾರು ಮಳೆ ವಿಫಲಗೊಳ್ಳುತ್ತಿರುವ ಕುರಿತು ವಸ್ತುಸ್ಥಿತಿಯನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಭೆ ಆಗ್ರಹಿಸಿತು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ನೀರಾವರಿ ಇಲಾಖೆಯ ಎಂಜಿನಿಯರುಗಳ ತುರ್ತು ಸಭೆ ನಡೆಸಿ, ಜಲಾಶಯಗಳಲ್ಲಿ ಲಭ್ಯ ಇರುವ ನೀರಿನ ಹಂಚಿಕೆ ಕುರಿತು ವೈಜ್ಞಾನಿಕ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಬೆಳೆಗಳಿಗೆ ನೀರು ಹರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿರುವ ರೈತ ಸಂಘಟನೆಗಳ ಮುಖಂಡರು ಹಾಗೂ ರೈತರ ಮನವೊಲಿಸಬೇಕು ಎಂದು ಸಭೆ ಮನವಿ ಮಾಡಿತು.

ADVERTISEMENT

ಇದಕ್ಕೂ ಮುನ್ನ ಮಾತನಾಡಿದ ಮೇಜರ್ ಜನರಲ್ ಎಸ್.ಜಿ.ಒಂಬತ್ಕೆರೆ, ‘ಹವಾಮಾನ ಬದಲಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ರಾಷ್ಟ್ರ ಹಾಗೂ ರಾಜ್ಯದ ಜಲನೀತಿಗಳು ರೂಪುಗೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

‘ಸದ್ಯ ನಮ್ಮ ಜಲನೀತಿ ಹೇಗಿದೆ ಎಂದರೆ ಬೇಡಿಕೆಗೆ ಅನುಗುಣವಾಗಿ ನೀರನ್ನು ಬಿಡು ಎಂಬಂತಹ ಸ್ಥಿತಿಯಲ್ಲಿದೆ. ಬೇಡಿಕೆಗೆ ಅನುಗುಣವಾಗಿ ನೀರನ್ನು ನಿರ್ವಹಣೆ ಮಾಡುವ ಕುರಿತ ಪ್ರಸ್ತಾಪ ನಮ್ಮ ಸದ್ಯದ ಜಲನೀತಿಯಲ್ಲಿ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.‌

ತುರ್ತಾಗಿ ಸರ್ಕಾರ ಹವಾಮಾನ ಬದಲಾವಣೆ ಕುರಿತು ತಜ್ಞರ ಸಮಿತಿ ನೇಮಿಸಬೇಕು. ಇವರ ಸಲಹೆಯನ್ನು ವಿಧಾನ ಮಂಡಲದ ಅಧಿವೇಶನ ಕರೆದು ಚರ್ಚಿಸಬೇಕು. ಜಲ ಸಂರಕ್ಷಣೆ ಕುರಿತು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಸಮರೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಸರ್ಕಾರ ಜನರಿಗೆ ಆಹಾರ ಭದ್ರತೆಯ ಜತೆಜತೆಗೆ ನೀರಿನ ಭದ್ರತೆಯನ್ನೂ ನೀಡಬೇಕು. ಇದಕ್ಕಾಗಿ ಹೊಸ ಹೊಸ ದೊಡ್ಡ ಯೋಜನೆಗಳನ್ನು ಕೈಗೊಳ್ಳದೇ ಲಭ್ಯ ಇರುವ ನೀರನ್ನು ವೈಜ್ಞಾನಿಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.