ADVERTISEMENT

ರಂಗದಿಂದ ಮಕ್ಕಳಿಗೆ ಪರಿಸರ ಜಾಗೃತಿ

ವಿದ್ಯಾರ್ಥಿಗಳಿಗೆ, ಕೊಳೆಗೇರಿ ಮಕ್ಕಳಿಗೆ ನಾಟಕ ಕಲಿಸಿದ ಅರಸೀಕೆರೆ ಯೋಗಾನಂದ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 2:34 IST
Last Updated 6 ಜೂನ್ 2022, 2:34 IST
ಅರಸೀಕೆರೆ ಯೋಗಾನಂದ ಅವರು ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸಿದರು
ಅರಸೀಕೆರೆ ಯೋಗಾನಂದ ಅವರು ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸಿದರು   

ಮೈಸೂರು: ಮಕ್ಕಳಿಗೆ ರಂಗ ಚಟುವಟಿಕೆಗಳ ಮೂಲಕ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ದಶಕಗಳಿಂದ ತೊಡಗಿ ದ್ದಾರೆ ಅರಸೀಕೆರೆ ಯೋಗಾನಂದ.

ಸದ್ಯ ರಂಗಾಯಣದಲ್ಲಿ ಕಾರ್ಯಕ್ರಮ ಸಂಯೋಜಕರಾಗಿರುವ ಅವರು, ಪರಿಸರ ಸಂರಕ್ಷಣೆ, ಘನತ್ಯಾಜ್ಯ ನಿರ್ವಹಣೆ, ಸಕಾಲ, ಮಾಹಿತಿ ಹಕ್ಕು ಕಾಯ್ದೆ, ಮಹಿಳಾಭಿವೃದ್ಧಿ ಹೀಗೆ... ಅನೇಕ ವಿಷಯಗಳ ಕುರಿತು ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆಯ ಬಸವರಾಜೇಂದ್ರ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿದ್ದ ಅವರು, 2000ರಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಅರಸೀಕೆರೆ ಘಟಕದ ಸಂಚಾಲಕರಾಗಿ ಹೆಚ್ಚುವರಿ ಹೊಣೆ ಹೊತ್ತರು. ಅಲ್ಲಿಂದಲೇ ಪರಿಸರಕ್ಕೆ ಸಂಬಂಧಿಸಿದ ಕೆಲಸ
ಗಳನ್ನು ವ್ಯಾಪಕವಾಗಿ ಕೈಗೊಂಡರು.

ADVERTISEMENT

ಪರಿಸರ ಅಧ್ಯಯನಕ್ಕೆಂದು ಶಾಲಾ ಮಕ್ಕಳನ್ನು ಕಾಡು–ಮೇಡು, ಬೆಟ್ಟ–ಗುಡ್ಡಗಳಿಗೆ ಕರೆದೊಯ್ಯುತ್ತಿದ್ದರು. ಗಿಡ, ಮರ, ಪ್ರಾಣಿ, ಪಕ್ಷಿಗಳನ್ನು ಗುರುತಿಸುವುದು, ಅವುಗಳ ಲಕ್ಷಣ, ಸ್ವರೂಪದ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. ಡೈನೋಸಾರ್‌ಗಳಿದ್ದ ಜುರಾಸಿಕ್‌ ಯುಗದಲ್ಲಿ ಅಸ್ತಿತ್ವದಲ್ಲಿದ್ದ ‘ಸೈಕಸ್‌’ ಪ್ರಭೇದದ ಸಸ್ಯಗಳು ಅರಸೀಕೆರೆ ಸಮೀಪದ ಸಿದ್ದರಬೆಟ್ಟದಲ್ಲಿ ಹೆಚ್ಚಾಗಿ ಕಂಡುಬಂದಿದ್ದು, ಈ ಸಸ್ಯಗಳ ಮಹತ್ವವನ್ನೂ ಮಕ್ಕಳಿಗೆ ತಿಳಿಸಿಕೊಟ್ಟಿದ್ದಾರೆ. ಜೀವ ಸಂಕುಲದ ಬಗ್ಗೆ ಸ್ಪರ್ಧೆಗಳನ್ನೂ ಏರ್ಪಡಿಸಿ ಮಕ್ಕಳಿಗೆ ಅರಿವು ಮೂಡಿಸಿದ್ದಾರೆ.

2004ರಿಂದ 2010ರವರೆಗೆ ರಂಗಾಯಣದ ‘ರಂಗ ಕಿಶೋರ’ ಮಕ್ಕಳ ರಂಗಭೂಮಿ ಮುಖ್ಯಸ್ಥರಾಗಿ ಕೆಲಸ ಮಾಡಿದ ಯೋಗಾನಂದ, ರಂಗಭೂಮಿಯನ್ನು ಬಳಸಿಕೊಂಡು ಮಕ್ಕಳಿಗೆ ಹೇಗೆ ಬೋಧಿಸಬಹುದು ಎಂಬುದರ ಬಗ್ಗೆ ಶಿಕ್ಷಕರು, ಶಿಕ್ಷಣ ತಜ್ಞರು, ರಂಗ ತಜ್ಞರಿಗೆ ತರಬೇತಿ ನೀಡುತ್ತಿದ್ದರು. ಈ ಕಾರ್ಯಕ್ರಮವು ಚೀನಾ, ಲಾವೋಸ್‌, ವಿಯೆಟ್ನಾಂ, ಸ್ವೀಡನ್‌, ಬಾಂಗ್ಲಾದೇಶದ ಒಡಂಬಡಿಕೆಯೊಂದಿಗೆ ನಡೆಯುತ್ತಿದ್ದರಿಂದ ಈ ದೇಶಗಳ ಪ್ರತಿನಿಧಿಗಳಿಗೆ ತರಬೇತಿ ನೀಡಿದ್ದರು.

ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಬೀದಿ ನಾಟಕವನ್ನು 2014 ಹಾಗೂ 2017ರಲ್ಲಿ ಮೈಸೂರು ನಗರದ ಎಲ್ಲ ವಾರ್ಡ್‌ಗಳಲ್ಲಿ ಪ್ರದರ್ಶಿಸಿದ್ದರು. ಈ ಎರಡೂ ವರ್ಷಗಳಲ್ಲಿ ಮೈಸೂರಿಗೆ ಸ್ವಚ್ಛನಗರಿ ಪ್ರಶಸ್ತಿ ಸಂದಿತ್ತು.

ಸರ್ವ ಶಿಕ್ಷಾ ಅಭಿಯಾನದಡಿ ಪ್ರಕಟಿಸಿರುವ ‘ಓದುವ ಸಿರಿ’ ಪುಸ್ತಕದಲ್ಲಿ ಇವರ ‘ನಿಸರ್ಗ ನಮ್ಮ ಮಂದಿರ’ ಪದ್ಯವಿದ್ದು, 7ನೇ ತರಗತಿ ಮಕ್ಕಳು ಕಲಿಯುತ್ತಿದ್ದಾರೆ.

ಔಷಧೀಯ ಸಸ್ಯಗಳಾದ ಬೇವು, ತುಳಸಿ, ಬೆಟ್ಟದ ನೆಲ್ಲಿಕಾಯಿ ಮುಂತಾದ ಸಸ್ಯಗಳ ಕುರಿತ ಪದ್ಯಗಳನ್ನೂ ಬರೆದಿರುವ ಯೋಗಾನಂದ, ‘ಈ ಬಾನು ಈ ಚುಕ್ಕಿ’ ಸಂಕಲನ ಹೊರತಂದಿದ್ದಾರೆ. ‘ಹಾರೋಣ ಬಾ...’ ಕೃತಿಯಲ್ಲಿ 31 ಪಕ್ಷಿಗಳ ಬಗ್ಗೆ ಹಾಡುಗಳನ್ನು ಬರೆದಿದ್ದಾರೆ. ಪಕ್ಷಿಗಳ ಗುಣಲಕ್ಷಣ, ಸ್ವರೂಪದ ಬಗ್ಗೆ ವಿವರಿಸಿದ್ದಾರೆ. ಇದರ ಧ್ವನಿಸುರುಳಿಯನ್ನೂ ಹೊರತಂದಿದ್ದಾರೆ.

2017–18ನೇ ಸಾಲಿನ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಗೌರವ ಪ್ರಶಸ್ತಿ ಇವರಿಗೆ ಸಂದಿದೆ.

ಮಕ್ಕಳಿಗೆ ನಾಟಕ, ನೃತ್ಯರೂಪಕ ಕಲಿಕೆ

ಯೋಗಾನಂದ ಅವರು ಕುಕ್ಕರಹಳ್ಳಿ ಶಾಲೆ, ಹೂಟಗಳ್ಳಿ, ಬೋಗಾದಿ, ಕುದುರೆ ಮಾಳ ಶಾಲೆ, ಡೈಸಿ ಕಾನ್ವೆಂಟ್‌ ಮಕ್ಕಳಿಗೆ ನಾಟಕ, ಬೀದಿನಾಟಕ, ನೃತ್ಯರೂಪಕ ಕಲಿಸಿದ್ದಾರೆ. ಮೇಟಗಳ್ಳಿಯ ಬಿಎಂಶ್ರೀ ನಗರದ ಕೊಳೆಗೇರಿ ಮಕ್ಕಳಿಂದ ಪರಿಸರದ ಹಾಡುಗಳ ನೃತ್ಯರೂಪಕ ಮಾಡಿಸಿರುವುದು ವಿಶೇಷ.

ಇದಲ್ಲದೆ, ಪರಿಸರಕ್ಕೆ ಸಂಬಂಧಿಸಿದ ವಿಷಯವನ್ನು ಕೊಟ್ಟು ಶಿಕ್ಷಕರಿಂದಲೇ ರಂಗರೂಪಕ್ಕೆ ತಂದು ಮಕ್ಕಳಿಂದ ನಾಟಕ ಮಾಡಿಸಿದ್ದಾರೆ. ಕಲಾವಿದರ ಮೂಲಕ ರಂಗದ ಮೇಲೆ ತಂದಿದ್ದಾರೆ.

***

ಗಿಡ ನೆಟ್ಟು ನೀರೆರೆದ ಮಾತ್ರಕ್ಕೆ ಪರಿಸರ ಸಂರಕ್ಷಣೆ ಸಾಧ್ಯವಿಲ್ಲ. ಇಡೀ ಜೀವ ಜಗತ್ತಿನ ಬಗ್ಗೆ ಜಾಗೃತಿ ಮೂಡಿಸುವುದು ಎಲ್ಲರ ಕರ್ತವ್ಯವಾಗಬೇಕು.

–ಅರಸೀಕೆರೆ ಯೋಗಾನಂದ, ರಂಗಕರ್ಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.