
ಮೈಸೂರು: ಇಲ್ಲಿನ ದಟ್ಟಗಳ್ಳಿಯಲ್ಲಿ ಭಾನುವಾರ ‘ದಟ್ಟಗಳ್ಳಿ ಗ್ರೀನ್ ಫೌಂಡೇಶನ್’ ದಶಮಾನೋತ್ಸವ ಪ್ರಯುಕ್ತ ಆಯೋಜಿಸಿದ್ದ ಆಹಾರ ಮೇಳ, ಆರೋಗ್ಯ ತಪಾಸಣೆ ಹಾಗೂ ವಸ್ತುಪ್ರದರ್ಶನಕ್ಕೆ ಶಾಸಕರಾದ ಕೆ.ಹರೀಶ್‌ಗೌಡ ಹಾಗೂ ಜಿ.ಟಿ.ದೇವೇಗೌಡ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಪರಿಸರ ಕಾಳಜಿ ಹಾಗೂ ಸ್ವಚ್ಛತೆಯ ಮಹತ್ವ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲು ಚಿತ್ರಕಲಾ ಸ್ಪರ್ಧೆಯೂ ನಡೆಯಿತು. ಆಶುಭಾಷಣ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು. ಸಂಗೀತ ಗಾಯನದಲ್ಲಿ ನಿವಾಸಿಗಳು ಪಾಲ್ಗೊಂಡರು. ಪರಿಸರ ಕಾಳಜಿಯ ಉತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು.
ಹಿರಿಯ ನಾಗರಿಕರಿಗೆ ಕಣ್ಣಿನ ಉಚಿತ ತಪಾಸಣೆ ನಡೆದರೆ, ಯುವಕರು ಹಾಗೂ ವಯಸ್ಕರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು. ಆಹಾರ ಮೇಳದಲ್ಲಿ ಸಸ್ಯಹಾರ ಹಾಗೂ ಮಾಂಸಹಾರದ ಖಾದ್ಯಗಳನ್ನು ನಾಗರಿಕರು ಸವಿದರು.
ಪರಿಸರ ಸಂರಕ್ಷಣೆ ಅಗತ್ಯ: ‘ದಟ್ಟಗಳ್ಳಿ ಹಾಗೂ ಲಿಂಗಾಂಬುಧಿ ಕೆರೆ ಪರಿಸರ ಉಳಿಸಲು ಪ್ರಜ್ಞಾವಂತ ನಿವಾಸಿಗಳು 2015ರಲ್ಲಿ ಆರಂಭಿಸಿದ ಸಂಸ್ಥೆಯು ಸಂರಕ್ಷಣೆಯ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ಬಡಾವಣೆಯ ನಿವಾಸಿಗಳು ಒಗ್ಗೂಡಿ ಗಿಡ ನೆಟ್ಟು ಹಸಿರು ವಲಯ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ’ ಎಂದು ಜಿ.ಟಿ.ದೇವೇಗೌಡ ಪ್ರಶಂಸೆ ವ್ಯಕ್ತಪಡಿಸಿದರು.
‘ಸಂಸ್ಥೆಯು ಸಾವಿರಾರು ಗಿಡಗಳನ್ನು ನೆಟ್ಟಿದೆ. ಹೈಟೆನ್ಶನ್ ವಿದ್ಯುತ್ ಲೇನ್ ಅಳವಡಿಸುವ ವಿರುದ್ಧ ಹೋರಾಟ ನಡೆಸಿ ಮರಗಳನ್ನು ಸಂರಕ್ಷಿಸಿದೆ. ಪರಿಸರ ರಕ್ಷಣೆ, ಸ್ವಚ್ಚತೆ, ಉದ್ಯಾನ ನಿರ್ವಹಣೆ ಮತ್ತು ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಿದೆ. ಆಟದ ಮೈದಾನಕ್ಕಾಗಿ ಹೋರಾಟ ನಡೆಸಿದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಂ.ಎನ್.ನಟರಾಜು ತಿಳಿಸಿದರು.
ಜೆಡಿಎಸ್ ಮುಖಂಡ ಸಾ.ರಾ.ಮಹೇಶ್, ಸಂಘದ ಪದಾಧಿಕಾರಿಗಳಾದ ಆರ್.ನಾಗೇಂದ್ರ ಕುಮಾರ್, ಆರ್.ಕೆ.ರಾಜು, ಎಚ್.ಟಿ.ನಟೇಶ್, ಪುರುಷೋತ್ತಮ, ಎಂ.ರಮೇಶ್, ಹರೀಶ್ ಎಂ.ನಾಯಕ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.