ಮೈಸೂರು: ‘ಸರ್ಕಾರ ಮತ್ತು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್‌ಒ) ಎಂಪ್ಲಾಯಿಸ್ ಪೆನ್ಶನ್ ಸ್ಕೀಮ್ (ಇಪಿಎಸ್)– 95 ಪಿಂಚಣಿದಾರರಿಗೆ ವಂಚನೆ ಮಾಡುತ್ತಿದೆ’ ಎಂದು ರಾಷ್ಟ್ರೀಯ ಆಂದೋಲನ ಸಮಿತಿ(ಎನ್‌ಎಸಿ) ಕಾರ್ಯದರ್ಶಿ ಮಂಜುನಾಥ್ ಚಿಂತಾಮಣಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ನಟರಾಜ ಭವನದಲ್ಲಿ ನಡೆದ ಎನ್ಎಸಿ ಸಭೆಯಲ್ಲಿ ಬೆಂಗಳೂರು, ಮಂಡ್ಯ, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ಇಪಿಎಸ್– 95 ಪಿಂಚಣಿದಾರರಿಗೆ ಸಂಘಟನೆಯನ್ನು ಬಲಗೊಳಿಸಲು ಕರೆ ನೀಡಿ ಮಾತನಾಡಿದ ಅವರು, ‘ನಮ್ಮ ಹಣದಿಂದಲೇ ನಮಗೆ ಕನಿಷ್ಠ ಪಿಂಚಣಿ ಬರುವ ಹಾಗೆ ದೆಹಲಿಯಲ್ಲಿ ರಾಷ್ಟ್ರೀಯ ನಾಯಕರು ಯೋಜನೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಬಿಎಂಟಿಸಿ, ಕೆಎಸ್ಆರ್‌ಟಿಸಿ ನಿವೃತ್ತ ಸಿಬ್ಬಂದಿ ಸಂಘದ ಅಧ್ಯಕ್ಷ, ಎನ್ಎಸಿ ಕಾನೂನು ಸಲಹೆಗಾರ ನಂಜುಡೇಗೌಡ ಮಾತನಾಡಿ, ‘ಕಾನೂನಿನ ಚೌಕಟ್ಟಿನಲ್ಲಿ ಇಪಿಎಫ್ಒ ಕೆಲಸ ಮಾಡುತ್ತಿಲ್ಲ. ಸುಪ್ರೀಂ ಕೋರ್ಟಿನ ತೀರ್ಪನ್ನು ಅನುಷ್ಠಾನಕ್ಕೆ ತರದೇ, ಪಿಂಚಣಿದಾರೆಗೆ ಕಿರುಕುಳ ಕೊಡುತ್ತಿದೆ, ಇದರ ಬಗ್ಗೆ ಸರ್ಕಾರ ಹಾಗೂ ಸುಪ್ರೀಂ ಕೋರ್ಟಿನ ಗಮನಕ್ಕೆ ತರಲಾಗುವುದು. ಸದ್ಯದಲ್ಲಿಯೇ ಎಲ್ಲರಿಗೂ ಹೆಚ್ಚುವರಿ ಪಿಂಚಣಿ ಸಿಗುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದರು.
ಎನ್ಎಸಿ ಮುಖ್ಯ ಸಂಯೋಜಕ ರಮಾಕಾಂತ ನರಗುಂದ ಮಾತನಾಡಿ, ‘ಕನಿಷ್ಠ ಪಿಂಚಣಿ ಸದ್ಯದಲ್ಲೇ ಇತ್ಯರ್ಥ ಆಗುವ ಲಕ್ಷಣಗಳು ಇವೆ, ರಾಷ್ಟ್ರೀಯ ಎನ್ಎಸಿ ನಾಯಕರಾದ ಕಮಾಂಡರ್ ಅಶೋಕ್ ರಾವುತ್, ವೀರೇಂದ್ರ ಸಿಂಗ್ ಅವರು ಹಣಕಾಸು ಮಂತ್ರಿ ಹಾಗೂ ಇಪಿಎಫ್ಒ ಮೇಲೆ ಹೆಚ್ಚು ಒತ್ತಡ ಹೇರುತ್ತಿದ್ದಾರೆ. ಸಮಸ್ಯೆ ಇತ್ಯರ್ಥ ಆಗುವುದಾದರೆ ಮಾತ್ರ ಸಭೆಗೆ ಬರುವುದಾಗಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆಗೆ ನಾನು ದೆಹಲಿಗೆ ತೆರಳಲಿದ್ದೇನೆ’ ಎಂದು ತಿಳಿಸಿದರು.
ವಾಸು, ಸಕ್ಕರೆ ಫೆಡರೇಷನ್ ನಾಗರಾಜ್, ಕೆ.ಎಸ್.ಆರ್.ಟಿ.ಸಿ ಮಂಜುನಾಥ ಅವರು ಮಾತನಾಡಿದರು. ಎನ್ಎಸಿಗೆ ಸಹಕಾರ ನೀಡಿದರು. ಸುಬ್ಬಣ್ಣ, ಷಡಕ್ಷರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.