ADVERTISEMENT

ವಾಸ ಸ್ಥಳದಲ್ಲೇ ನಿವೇಶನ ನೀಡಿ: ಜಿಲ್ಲಾಡಳಿತಕ್ಕೆ ಮಾಜಿ ಸೈನಿಕರ ಒತ್ತಾಯ

ಕುಂದುಕೊರತೆ ಸಭೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:28 IST
Last Updated 10 ಫೆಬ್ರುವರಿ 2026, 5:28 IST
ಮೈಸೂರಿನ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪಾಲ್ಗೊಂಡ ಮಾಜಿ ಸೈನಿಕರು ಹಾಗೂ ಅವರ ಕುಟುಂಬದವರು –ಪ್ರಜಾವಾಣಿ ಚಿತ್ರ
ಮೈಸೂರಿನ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪಾಲ್ಗೊಂಡ ಮಾಜಿ ಸೈನಿಕರು ಹಾಗೂ ಅವರ ಕುಟುಂಬದವರು –ಪ್ರಜಾವಾಣಿ ಚಿತ್ರ   

ಮೈಸೂರು: ‘ಜಿಲ್ಲೆಯಲ್ಲಿ 2ಸಾವಿರಕ್ಕೂ ಹೆಚ್ಚು ನಿವೃತ್ತ ಯೋಧರಿದ್ದು, ಅವರ ಹಾಲಿ ವಾಸ ಸ್ಥಳವನ್ನು ಪರಿಗಣಿಸಿ ಅಲ್ಲಿಯೇ ನಿವೇಶನ ಹಾಗೂ ಜಮೀನು ಮಂಜೂರು ಮಾಡಬೇಕು’ ಎಂದು ನಿವೃತ್ತ ಯೋಧರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ಮಾಜಿ ಸೈನಿಕರು ಹಾಗೂ ಅವಲಂಬಿತರ ಕುಂದು ಕೊರತೆ ಸಭೆಯಲ್ಲಿ ಮಾಜಿ ಸೈನಿಕರಾದ ರಾಜಶೇಖರ್ ಹಾಗೂ ನಾಣಯ್ಯ ಈ ವಿಷಯ ಪ್ರಸ್ತಾಪಿಸಿದರು.

‘ನಾವೆಲ್ಲ ಹತ್ತಾರು ವರ್ಷಗಳಿಂದ ಇಲ್ಲಿಯೇ ವಾಸವಿದ್ದರೂ ನಿವೇಶನ ಹಾಗೂ ಜಮೀನು ಹಂಚಿಕೆಗೆ ಹಾಲಿ ವಾಸ ಸ್ಥಳ ಪರಿಗಣಿಸುತ್ತಿಲ್ಲ. ಸರ್ಕಾರದ ನಿಯಮದಂತೆ ಮೂಲ ವಾಸ ಸ್ಥಳದಲ್ಲಿ ನಿವೇಶನ ಹಾಗೂ ಜಮೀನು ಮಂಜೂರು ಮಾಡಲಾಗುತ್ತಿದೆ. ಸಾಕಷ್ಟು ಜನರಿಗೆ ತಮ್ಮ ಮೂಲ ಊರುಗಳಲ್ಲಿ ಜಮೀನು–ಮನೆ ಏನೂ ಇಲ್ಲ. ಹೀಗಾಗಿ ಹಾಲಿ ವಾಸಸ್ಥಳವನ್ನೇ ಆಧಾರವಾಗಿ ಇಟ್ಟುಕೊಂಡು ಸೌಲಭ್ಯ ಕಲ್ಪಿಸಲು ಕಾನೂನಿನಲ್ಲಿ ತಿದ್ದುಪಡಿ ತರಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಅಧಿಕಾರವಿಲ್ಲ: ‘ಹಾಲಿ ವಾಸ ಸ್ಥಾನ ಪರಿಗಣಿಸಿ ನಿವೇಶನ ಹಾಗೂ ಜಮೀನು ನೀಡುವ ಅಧಿಕಾರ ಜಿಲ್ಲಾಡಳಿತಕ್ಕೆ ಇಲ್ಲ. ಇದು ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕು. ಈ ಸಂಬಂಧ ನೀವು ನೀಡಿದ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಭರವಸೆ ನೀಡಿದರು.

‘ನನ್ನ ಪತಿ ಸೈನಿಕರಾಗಿ ಸೇವೆ ಸಲ್ಲಿಸಿ ಹುತಾತ್ಮರಾಗಿದ್ದಾರೆ. ಅವರ ಜೀವಿತಾವಧಿಯಲ್ಲಿ ಆಸ್ತಿ ವಿಲ್ ಮಾಡಿದ್ದಾರೆ. ಆದರೆ, ಈ ತನಕ ಆ ಜಮೀನು ನೀಡಿಲ್ಲ’ ಎಂದು ಚಂದ್ರಾಂಬಿಕೆ ಆರೋಪಿಸಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ‘ದಾಖಲಾತಿಗಳನ್ನು ಪರಿಶೀಲಿಸಿ ಶೀಘ್ರವೇ ಪೌತಿ ಖಾತೆ ಮಾಡಿಕೊಡಿ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಹತ್ತಾರು ವರ್ಷ ಗಡಿಯಲ್ಲಿ ದೇಶ ಕಾದಿದ್ದೇವೆ. ನಿವೃತ್ತನಾದ ನಂತರ ಮೈಸೂರಿನಲ್ಲಿ ನೆಲೆಸಿದ್ದು, ಈವರೆಗೆ ಸಣ್ಣ ಸೂರೂ ಇಲ್ಲ. ನಿವೇಶನಕ್ಕಾಗಿ ಮುಡಾಗೆ ಅಲೆದು ಸಾಕಾಗಿದೆ. ಈಗಾಲಾದರೂ ನಿವೇಶನ ಕೊಡಿಸಿ’ ಎಂದು ರಾಜಶೇಖರ್ ಕೋರಿದರು.

‘ನಿವೃತ್ತನಾದ ಬಳಿಕ ಹುಣಸೂರಿನಲ್ಲಿ ಸರ್ಕಾರ ನಮಗೆ ಜಮೀನು ಮಂಜೂರು ಮಾಡಿದೆ. ಆದರೆ, ನನ್ನ ಜಾಗವನ್ನು ಅತಿಕ್ರಮಿಸಿಕೊಂಡಿರುವ ಖಾಸಗಿ ವ್ಯಕ್ತಿಗಳು ಅಲ್ಲಿ ಮನೆಗಳನ್ನು ನಿರ್ಮಾಣ ಮಾಡಿದ್ದು, ಆಸ್ತಿ ನನ್ನ ಕೈ ತಪ್ಪಿದೆ’ ಎಂದು ಸುರೇಶ್ ಎಂಬ ಯೋಧ ಅಸಹಾಯಕತೆ ವ್ಯಕ್ತಪಡಿಸಿದರು.

ಉಚಿತ ಕಾನೂನು ನೆರವು: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವಕೀಲ ಜಿ.ಎಸ್.ಶಿವಸ್ವಾಮಿ, ‘ಹಿರಿಯರು ಹಾಗೂ ಅಶಕ್ತರ ಪರವಾಗಿ ವಾದ ಮಾಡಲು ಪ್ರಾಧಿಕಾರವು ಜಿಲ್ಲಾ ಹಾಗೂ ತಾಲ್ಲೂಕುಮಟ್ಟದಲ್ಲಿ ವಕೀಲರನ್ನು ನೇಮಿಸಿದೆ. ಏನೇ ತೊಂದರೆ ಇದ್ದರೂ ಅಲ್ಲಿ ಲಿಖಿತ ಮನವಿ ಸಲ್ಲಿಸಿದರೆ ನಿಮ್ಮ ಪರವಾಗಿ ಅವರು ಕಾನೂನಾತ್ಮಕ ಹೋರಾಟ ಮಾಡುತ್ತಾರೆ’ ಎಂದು ಭರವಸೆ ನೀಡಿದರು.

ಎಂಡಿಎ ಆಯುಕ್ತ ಕೆ.ಆರ್. ರಕ್ಷಿತ್, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಇಲಾಖೆಯ ಅಧಿಕಾರಿಗಳು ಇದ್ದರು.

ವೈದ್ಯಕೀಯ ಸೇವೆ ವಿಸ್ತರಣೆಗೆ ಮನವಿ

‘ನಿವೃತ್ತ ಯೋಧರಿಗೆ ಉಚಿತ ಚಿಕಿತ್ಸಾ ಸೌಲಭ್ಯ ಪಡೆಯಲು ಕೆ.ಆರ್. ಆಸ್ಪತ್ರೆ ಹಾಗೂ ಜೆಎಎಸ್ಎಸ್ ಆಸ್ಪತ್ರೆಯಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ಮಣಿಪಾಲ್ ಆಸ್ಪತ್ರೆ ಅಪೋಲೊ ಆಸ್ಪತ್ರೆ ನಾರಾಯಣ ಹೃದಯಾಲಯ ಸೇರಿದಂತೆ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿಯೂ ಅವಕಾಶ ಕಲ್ಪಿಸಬೇಕು’ ಎಂದು ಮಾಜಿ ಸೈನಿಕರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.