ADVERTISEMENT

ನದಿಗೆ ಜಿಗಿದ ತಾಯಿ, ಮಕ್ಕಳು; ರಕ್ಷಿಸಲು ಯತ್ನಿಸಿದ್ದ ಸಾಕು ನಾಯಿ

ಪತಿಯ ಶವ ಮನೆಯಲ್ಲಿರಿಸಿ ಬಂದು ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 12:14 IST
Last Updated 1 ಅಕ್ಟೋಬರ್ 2019, 12:14 IST
ಬದುಕುಳಿದಿರುವ ಸಾಕುನಾಯಿ
ಬದುಕುಳಿದಿರುವ ಸಾಕುನಾಯಿ   

ಬಂಟ್ವಾಳ/ಮೈಸೂರು: ಹೃದಯಾಘಾತದಿಂದ ಮೃತಪಟ್ಟ ಪತಿಯ ಶವವನ್ನು ಮನೆಯಲ್ಲಿರಿಸಿ ಬೀಗ ಹಾಕಿಕೊಂಡು ಬಂದ ಮೈಸೂರಿನ ಕುಟುಂಬವೊಂದರ ತಾಯಿ ಮತ್ತು ಇಬ್ಬರು ಮಕ್ಕಳು ಶನಿವಾರ ತಡರಾತ್ರಿ ಇಲ್ಲಿನ ಪಾಣೆಮಂಗಳೂರು ಸೇತುವೆ ಬಳಿ ನೇತ್ರಾವತಿ ನದಿಗೆ ಹಾರಿದ್ದಾರೆ. ತಾಯಿ ಮತ್ತು ಮಗಳ ಶವ ಪತ್ತೆಯಾಗಿದೆ.

ಮೈಸೂರಿನ ವಿಜಯನಗರ 4ನೇ ಹಂತದ ನಿವಾಸಿಗಳಾದ ಕವಿತಾ (57), ಪುತ್ರ ಕೌಶಿಕ್ (29) ಪುತ್ರಿ ಕಲ್ಪಿತಾ (27) ಆತ್ಮಹತ್ಯೆ ಮಾಡಿಕೊಂಡವರು. ಕವಿತಾ ಮತ್ತು ಕಲ್ಪಿತಾ ಅವರ ಶವಗಳು ಪತ್ತೆಯಾಗಿವೆ. ಕೌಶಿಕ್ ಸುಳಿವು ಇನ್ನೂ ಲಭಿಸಿಲ್ಲ.

ಇವರು ತಮ್ಮ ಪ್ರೀತಿಯ ಸಾಕು ನಾಯಿಯೊಂದಿಗೆ ನೀರಿಗೆ ಹಾರಿದ್ದರು. ನದಿ ಮಧ್ಯದಲ್ಲಿ ಈಜುತ್ತಿದ್ದ ನಾಯಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ವಿರಾಜಪೇಟೆ ಸಮೀಪದ ಕಡಂಗದ ಈ ಕುಟುಂಬ ಹಲವು ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿತ್ತು.

ಕವಿತಾ ಅವರ ಪತಿ ಕಿಸನ್‌ ಮಂದಣ್ಣ (65) ಹೃದಯಾಘಾತಕ್ಕೆ ಒಳಗಾಗಿ ಶನಿವಾರವಷ್ಟೇ ಮನೆಯಲ್ಲಿ ನಿಧನ ಹೊಂದಿದ್ದರು. ಇದರಿಂದ ಮನನೊಂದ ತಾಯಿ ಮತ್ತು ಮಕ್ಕಳು ಮನೆ ಬಾಗಿಲಿಗೆ ಬೀಗ ಹಾಕಿಕೊಂಡು ಮಂಗಳೂರಿನತ್ತ ಬಂದಿದ್ದರು. ಸಾಕು ನಾಯಿಯನ್ನೂ ಜತೆಯಲ್ಲಿ ಕರೆ ತಂದಿ ದ್ದರು. ಪಾಣೆ ಮಂಗಳೂರು ಹೊಸ ಸೇತುವೆ ಬಳಿ ಮೂವರು ಸಂಬಂಧಿಯೊಬ್ಬರಿಗೆ ಕರೆಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ನಂತರ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ನಾಯಿಯೊಂದಿಗೆ ನದಿಗೆ ಹಾರಿದ್ದಾರೆ.

ಮೂವರು ನದಿಗೆ ಹಾರುತ್ತಿರುವು ದನ್ನು ಗಮನಿಸಿದ ಸ್ಥಳೀಯರು ಪೊಲೀಸ ರಿಗೆ ಮಾಹಿತಿ ನೀಡಿದ್ದರು. ತಕ್ಷಣ ಅಗ್ನಿ ಶಾಮಕ ದಳದ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಮಹಿಳೆಯನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. 25 ಕಿ.ಮೀ. ದೂರದ ಪಾವೂರು ಬಳಿ ಕಲ್ಪಿತಾ ಅವರ ಮೃತ ದೇಹ ಭಾನುವಾರ ಸಂಜೆ ಪತ್ತೆಯಾಗಿದೆ.

‌ಬಹರೇನ್‌ನಲ್ಲಿ ಕೆಲಸದಲ್ಲಿದ್ದ ಕಿಸನ್ ಅಲ್ಲಿಂದ ವಾಪ‍ಸ್ ಬಂದು ಮೈಸೂರಿನಲ್ಲಿ ಕೃಷಿಕರಾಗಿದ್ದರು. ಮಗಳು ಕಲ್ಪಿತಾ ಎಂಬಿಎ ಪದವೀಧರರಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿ ಈಚೆಗಷ್ಟೇ ಕೆಲಸ ಬಿಟ್ಟಿದ್ದರು. ಪುತ್ರ ಕೌಶಿಕ್ ಬಿಬಿಎ ಪದವೀಧರ. ಕುಟುಂಬಸ್ಥರೆಲ್ಲರೂ ಕಿಸನ್ ಅವರ ಜತೆ ‌ಹೆಚ್ಚಿನ ಭಾವಾನಾತ್ಮಕ ಸಂಬಂಧ ಹೊಂದಿದ್ದರು. ಇವರ ಸಾವನ್ನು ಅರಗಿಸಿಕೊಳ್ಳಲಾರದೇ ನೀರಿಗೆ ಹಾರಿದ್ದಾರೆ ಎನ್ನಲಾಗಿದೆ.

ಮಹಿಳೆ ರಕ್ಷಿಸಲು ಯತ್ನಿಸಿದ್ದ ನಾಯಿ

ತನ್ನ ಮುದ್ದಿನ ಸಾಕು ನಾಯಿ ಹಿಡಿದುಕೊಂಡೇ ನದಿಗೆ ಹಾರಿದ್ದ ಮಹಿಳೆಯ ಸೀರೆಯನ್ನು ಕಚ್ಚಿ ಹಿಡಿದು ಹಳೆ ಸೇತುವೆವರೆಗೆ ಎಳೆದೊಯ್ದು ಆಕೆಯನ್ನು ಬದುಕಿಸಲು ನಾಯಿ ಭಾರೀ ಪ್ರಯತ್ನ ನಡೆಸಿರುವುದು ಕಂಡು ಬಂದಿದೆ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ತಿಳಿಸಿದ್ದಾರೆ.

ತನ್ನನ್ನು ಮುದ್ದಿನಿಂದ ಸಾಕುತ್ತಿದ್ದ ಮಹಿಳೆಯ ಸಾವಿನಿಂದ ನಾಯಿ ಕಂಗಾಲಾಗಿದ್ದು, ಆಹಾರ ಸೇವಿಸಲು ಹಿಂದೇಟು ಹಾಕುತ್ತಿದೆ. ನಾಯಿಯನ್ನು ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.