ನಂಜನಗೂಡು: ‘ತಾಲ್ಲೂಕಿನಲ್ಲಿ ಭೂಗಳ್ಳರ ಹಾವಳಿ ಜಾಸ್ತಿಯಾಗಿದೆ. ದಾಖಲೆಗಳು ಸರಿಯಾಗಿದ್ದರೂ ರೈತರ ಕೆಲಸಗಳು ನಡೆಯುತ್ತಿಲ್ಲ, ರೈತರ ಕಷ್ಟಗಳ ಬಗ್ಗೆ ಅರಿವು ಮೂಡಿಸಲು ಶಾಸಕ ದರ್ಶನ್ ಧ್ರುವನಾರಾಯಣ ಅವರೊಂದಿಗೆ ಮುಖಾಮುಖಿ ಕಾರ್ಯಕ್ರಮ ನಡೆಸಿ ಗಮನಕ್ಕೆ ತಂದರೂ ವ್ಯವಸ್ಥೆ ಬದಲಾಗಿಲ್ಲ’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಆರೋಪಿಸಿದರು.
ನಗರದ ತಹಶೀಲ್ದಾರ್ ಕಚೇರಿ ಮುಂಭಾಗ ಗುರುವಾರ ತಾಲ್ಲೂಕು ರೈತ ಸಂಘ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಚಾಲನೆ ನೀಡಿ ಮಾತನಾಡಿದರು.
‘ತಾಲ್ಲೂಕಿನ ಕೃಷ್ಣಾಪುರ, ಅಹಲ್ಯ ಗ್ರಾಮಗಳಲ್ಲಿ ರೈತರ ಜಮೀನು ದಾಖಲೆಗಳನ್ನು ತಿದ್ದಿ, ಸುಳ್ಳು ದಾಖಲೆ ಸೃಷ್ಟಿ ಮಾಡಿಕೊಟ್ಟಿರುವ ಅಧಿಕಾರಿಗಳು ಭೂಗಳ್ಳರ ಲೂಟಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ತಹಶೀಲ್ದಾರ್ ಸೇರಿದಂತೆ ಆರೋಪಕ್ಕೊಳಗಾಗಿರುವ ಅಧಿಕಾರಿಗಳನ್ನು ತಾಲ್ಲೂಕಿನಿಂದ ಎತ್ತಂಗಡಿ ಮಾಡಬೇಕು’ ಎಂದು ಆಗ್ರಹಿಸಿದರು.
‘ತಾಂಡವಪುರ, ಅಡಕನಹಳ್ಳಿ ಹುಂಡಿ ಗ್ರಾಮಗಳ ನೂರಾರು ಮನೆಗಳು, ಗುರುಕಂಬಳೀಶ್ವರ ಮಠದ ಜಮೀನುಗಳನ್ನು ಕೆಐಎಡಿಬಿ ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೈಬಿಡಬೇಕು. ತಾಂಡವಪುರ ಗ್ರಾಮಕ್ಕೆ ಸ್ಮಶಾನ ಭೂಮಿ ಮಂಜೂರು ಮಾಡಬೇಕು. ಕಾಡು ಪ್ರಾಣಿಗಳಿಂದ ರೈತರ ಬೆಳೆ ನಾಶ, ಪ್ರಾಣ ಹಾನಿಗಳಿಗೆ ಸರ್ಕಾರ ₹1 ಕೋಟಿ ಪರಿಹಾರ ಧನ ನೀಡಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಇಮ್ಮಾವು ರಘು, ಅಹಲ್ಯ ನಂಜುಂಡೇಗೌಡ, ದೇವರಾಜು, ಮಹದೇವನಾಯ್ಕ, ಮೋಹನ್, ವರದರಾಜು, ಹಾಲಪ್ಪ, ಗಜೇಂದ್ರ, ಚಿನ್ನಸ್ವಾಮಿ, ಶಿವಣ್ಣ, ಸಿದ್ದರಾಜ ನಾಯಕ, ಶಂಕರ ನಾಯಕ, ಮಮತಾ, ಸಿದ್ದಪ್ಪಾಜಿ ಭಾಗವಹಿಸಿದ್ದರು.
‘ಟನ್ ಕಬ್ಬಿಗೆ ₹5500 ನಿಗದಿ ಮಾಡಿ’
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸತೀಶ್ ರಾವ್ ಮಾತನಾಡಿ ‘ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ರೈತರು ಸರಬರಾಜು ಮಾಡುವ ಪ್ರತಿಟನ್ ಕಬ್ಬಿಗೆ ₹5500 ದರವನ್ನು ಸರ್ಕಾರ ನಿಗದಿ ಮಾಡಬೇಕು ರಾಂಪುರ ಹುಲ್ಲಹಳ್ಳಿ ಕಬಿನಿ ಬಲದಂಡೆ ನಾಲೆ ಹಾಗೂ ಕಪಿಲಾನದಿಗೆ ಸೇರುತ್ತಿರುವ ಒಳಚರಂಡಿ ನೀರನ್ನು ತಪ್ಪಿಸಬೇಕು ಭೂ ಉಳುಮೆದಾರ ರೈತರಿಗೆ ಸರ್ಕಾರ ಸಾಗುವಳಿ ಚೀಟಿ ನೀಡಬೇಕು ರೈತರಿಗೆ ನೀಡಬೇಕಾದ ಹಾಲಿನ ಬಾಕಿ ₹650 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಬೇಕು. ನಾಲೆಗಳ ಹೂಳು ತೆಗಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.