ADVERTISEMENT

ತಿ.ನರಸೀಪುರ | ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧ: ಡಾ.ಯತೀಂದ್ರ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:59 IST
Last Updated 26 ಅಕ್ಟೋಬರ್ 2025, 7:59 IST
ತಿ.ನರಸೀಪುರ‌ ಪಟ್ಟಣದ ಗುರುಭವನದಲ್ಲಿ ಶನಿವಾರ ನಡೆದ ರೈತೋತ್ಸವವನ್ನು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ  ಉದ್ಘಾಟಿಸಿದರು. ‘ಮುಖ್ಯಮಂತ್ರಿ’ ಚಂದ್ರು,  ಕುರುಬೂರು ಶಾಂತಕುಮಾರ್ ಭಾಗವಹಿಸಿದ್ದರು
ತಿ.ನರಸೀಪುರ‌ ಪಟ್ಟಣದ ಗುರುಭವನದಲ್ಲಿ ಶನಿವಾರ ನಡೆದ ರೈತೋತ್ಸವವನ್ನು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ  ಉದ್ಘಾಟಿಸಿದರು. ‘ಮುಖ್ಯಮಂತ್ರಿ’ ಚಂದ್ರು,  ಕುರುಬೂರು ಶಾಂತಕುಮಾರ್ ಭಾಗವಹಿಸಿದ್ದರು   

ತಿ.ನರಸೀಪುರ: ‘ರೈತರನ್ನು ನಿರ್ಲಕ್ಷ್ಯಿಸಿ  ಯಾವ ಸರ್ಕಾರವೂ ಅಧಿಕಾರದಲ್ಲಿ ಉಳಿಯಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ರೈತರ ಹಿತ ರಕ್ಷಣೆಗೆ ಬದ್ಧವಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಪಟ್ಟಣದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘ ತಾಲ್ಲೂಕು ಶಾಖೆ ಶನಿವಾರ ಆಯೋಜಿಸಿದ್ದ ರೈತೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ, ಮಾರುಕಟ್ಟೆ ಒದಗಿಸಬೇಕು. ಇದರಿಂದ ಅವರ ಆದಾಯ ಹೆಚ್ಚುತ್ತದೆ.  ರೈತರು ತಿಳಿಸಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದು ಹಂತ ಹಂತವಾಗಿ ಬಗೆಹರಿಸಲಾಗುವುದು’ ಎಂದು  ಭರವಸೆ ನೀಡಿದರು. ‘ರೈತ ಪರ ಹೋರಾಟಗಾರ ಕುರುಬೂರು ಶಾಂತಕುಮಾರ್  ಅಪಘಾತ ಕ್ಕೊಳಗಾಗಿ ಗುಣಮುಖರಾಗುತ್ತಿದ್ದು, ಅವರ ಹೆಚ್ಚುವರಿ ವೈದ್ಯಕೀಯ ವೆಚ್ಚ ಭರಿಸಲು ಸರ್ಕಾರದ ಗಮನಕ್ಕೆ ತರುತ್ತೇನೆ’ ಎಂದರು.

ADVERTISEMENT

 ಮಾಜಿ ಶಾಸಕ ‘ಮುಖ್ಯಮಂತ್ರಿ’ ಚಂದ್ರು ಮಾತನಾಡಿ, ‘ಸರ್ಕಾರದಿಂದ ಎಲ್ಲ ವರ್ಗಗಳಿಗೂ ಸೌಲಭ್ಯ  ಸಿಗುತ್ತಿವೆ. ಆದರೆ, ರೈತರಿಗೆ ಮಾತ್ರ ಅನುಕೂಲವಿಲ್ಲ. ಅವರ ಸ್ಥಿತಿ ಗತಿಯ ಬಗ್ಗೆ ಸರ್ಕಾರಗಳು ಗಮನಹರಿಸುತ್ತಿಲ್ಲ. ರೈತರು ಸಂಘಟಿತ ಹೋರಾಟದ ಮೂಲಕ ಸರ್ಕಾರವನ್ನು ಎಚ್ಚರಿಸುವ ಕಾರ್ಯ ನಡೆಸಿದರೆ ನ್ಯಾಯ ಸಿಗಲು ಸಾಧ್ಯ’ ಎಂದರು.

‘ರೈತರು ಜಮೀನುಗಳಲ್ಲಿ ರಾಸಾಯನಿಕ ಮುಕ್ತ ಪದಾರ್ಥಗಳನ್ನು ಬೆಳೆಯಬೇಕು. ಮಣ್ಣಿನ ಫಲವತ್ತೆಯನ್ನು ಹೆಚ್ಚಿಸಿ ಗುಣಮಟ್ಟದ ಆಹಾರ ಉತ್ಪಾದನೆಯಲ್ಲಿ ತೊಡಿಗಿಸಿಕೊಂಡರೆ ಹೆಚ್ಚು ಆದಾಯಗಳಿಸಲು ಸಾಧ್ಯ’ ಎಂದು ಹೇಳಿದರು

ರೈತೋತ್ಸವದಲ್ಲಿ ಅಭಿನಂದನೆ ಸ್ವೀಕರಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ‘ದೇಶದಲ್ಲಿ ಎಲ್ಲ ಕ್ಷೇತ್ರಗಳು ಅಭಿವೃದ್ಧಿಯತ್ತ ಸಾಗುತ್ತಿವೆ. ಆದರೆ ರೈತರು ಮಾತ್ರ ಆತ್ಮಹತ್ಯೆಯತ್ತ ಸಾಗುವಂತಾಗಿದೆ. ರೈತರಿಗೆ ಸರ್ಕಾರದ ಯಾವುದೇ ಭಿಕ್ಷೆ ರೂಪದ ಸಹಾಯ ಬೇಕಾಗಿಲ್ಲ . ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ, ಮಾರುಕಟ್ಟೆ ಒದಗಿಸಿಕೊಟ್ಟರೆ ರೈತರು ನೆಮ್ಮದಿಯಾಗಿ ಬದುಕಬಹುದು’ ಎಂದು ಹೇಳಿದರು.

ರಾಜ್ಯ ಕಬ್ಬು ಬೆಳೆಗಾರ ಸಂಘದ ಖಜಾಂಚಿ ಎಂ. ಬಿ. ಚೇತನ್ ಮಾತನಾಡಿದರು. ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ಶಾಂತಕುಮಾರ್   ಗುಣಮುಖರಾಗುತ್ತಿದ್ದು, ಅವರ ನಾಯಕತ್ವದ ಹೋರಾಟವನ್ನು  ಸ್ವಾಗತಿಸುತ್ತಿರುವುದಾಗಿ ತಿಳಿಸಿದರು. 

ರೈತರ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಯಿತು. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕುರುಬೂರು ಸಿದ್ದೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು, ಗೌರಿಶಂಕರ್, ಪ್ರಸಾದ್ ನಾಯಕ್, ಅಪ್ಪಣ್ಣ, ಯೋಗೇಶ್, ಪರಶಿವಮೂರ್ತಿ, ನಂದೀಶ್, ವಾಚ್ ಕುಮಾರ್, ಮಹದೇವಸ್ವಾಮಿ, ಕುಪ್ಯ ಶಿವಣ್ಣ, ಜಯರಾಂ, ಮಹದೇವಪ್ಪ, ರಾಮಮೂರ್ತಿ, ಯೋಗೇಶ್, ಎಲ್ ಐಸಿ ವಿರೇಶ್ , ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.