ADVERTISEMENT

ತಮಿಳುನಾಡಿಗೆ ನೀರು– ರೈತರಿಂದ ಪ್ರತಿಭಟನೆ

‘ಕಾಡಾ’ ಕಚೇರಿಗೆ ಮುತ್ತಿಗೆ, ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 20:15 IST
Last Updated 22 ಜುಲೈ 2019, 20:15 IST
ಜಲಾಶಯಗಳು ತುಂಬುವ ಮೊದಲೇ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ಕ್ರಮ ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಮೈಸೂರಿನ ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ (‘ಕಾಡಾ’)ದ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಜಲಾಶಯಗಳು ತುಂಬುವ ಮೊದಲೇ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ಕ್ರಮ ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಮೈಸೂರಿನ ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ (‘ಕಾಡಾ’)ದ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.   

ಮೈಸೂರು: ಜಲಾಶಯಗಳು ತುಂಬುವ ಮೊದಲೇ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ಕ್ರಮ ಖಂಡಿಸಿ ರೈತರು ಇಲ್ಲಿನ ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ (‘ಕಾಡಾ’)ದ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ರೈತರು ‘ಕಾಡಾ’ ಕಚೇರಿ ಮುಂಭಾಗ ಜಮಾಯಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬರಗಾಲದಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಲಾಶಯಗಳು ತುಂಬಿಲ್ಲ. ಈ ಸಂದರ್ಭದಲ್ಲಿ ಒಳಹರಿವನ್ನು ಹೆಚ್ಚಿಸುವ ಮೂಲಕ ತಮಿಳುನಾಡಿಗೆ ನೀರು ಹರಿದು ಹೋಗುವಂತೆ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದು ಅವರು ಖಂಡಿಸಿದರು.

ADVERTISEMENT

ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಮಾತನಾಡಿ, ‘ರಾಜ್ಯದ ಜನರ ತೆರಿಗೆ ಹಣದಿಂದ ಜಲಾಶಯ ನಿರ್ಮಿಸಲಾಗಿದೆ. ಆದರೆ, ಜಲಾಶಯದ ಅಧಿಕಾರಿಗಳು ನೀರುಗಂಟಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನರ ತೆರಿಗೆ ಹಣದಿಂದ ಸಂಬಳ ಪಡೆಯುತ್ತಿದ್ದೇವೆ ಎಂಬ ಅರಿವು ಅಧಿಕಾರಿಗಳಿಗೆ ಇರಬೇಕು’ ಎಂದು ಚಾಟಿ ಬೀಸಿದರು.

ಜಲಾಶಯದ ಒಳ ಹರಿವಿನ ಶೇ 75ರಷ್ಟು ಭಾಗದಷ್ಟು ನೀರನ್ನು ನದಿ ಮೂಲಕ ತಮಿಳುನಾಡಿಗೆ ಹರಿಸಲು ಆದೇಶ ನೀಡಿರುವವರಾದರೂ ಯಾರು ಎಂದು ಪ್ರಶ್ನಿಸಿದ ಅವರು ಕೂಡಲೇ ಈ ನೀರನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಇಂತಹ ಪರಿಸ್ಥಿತಿಯಲ್ಲಿ ಅಧಿಕಾರದ ಆಸೆಗಾಗಿ ಜನಪ್ರತಿನಿಧಿಗಳು ಬೀದಿ ನಾಟಕವಾಡುತ್ತ ಮನರಂಜನೆ ನೀಡುತ್ತಿದ್ದಾರೆ. ಅಧಿಕಾರಿಗಳು ಸ್ವೇಚ್ಛಾಚಾರವಾಗಿ ವರ್ತಿಸುತ್ತಿದ್ದಾರೆ. ರೈತರ ಹಿತವನ್ನು ಇವರಿಬ್ಬರೂ ಬಲಿಕೊಡುತ್ತಿದ್ದಾರೆ. ಕೂಡಲೇ, ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಬಂದ ‘ಕಾಡ’ ಕಚೇರಿಯ ಅಧೀಕ್ಷಕ ಎಂಜಿನಿಯರ್ ಶ್ರೀಕಂಠಪ್ರಸಾದ್ ಮನವಿ ಪತ್ರ ಸ್ವೀಕರಿಸಿದರು. ಕಾವೇರಿ ನೀರು ನಿರ್ವಹಣಾ ಮಂಡಳಿ ಸೂಚನೆಯಂತೆ ನೀರು ಹರಿಸಬೇಕಿತ್ತು. ನಾಲೆಗಳಿಗೆ ನೀರು ಹರಿಸುವ ಸಂಬಂಧ ಒಂದು ವಾರದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ರಂಗಸಮುದ್ರ ಸುರೇಶ್, ಸಿದ್ದೇಶ್, ಮಾದಪ್ಪ ಹಾಗೂ ಇತರರು ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.