ADVERTISEMENT

ಆರ್‌ಸಿಇಪಿ ಒಪ್ಪಂದದ ವಿರುದ್ಧ ಸಿಡಿದೆದ್ದ ರೈತರು

ಪ್ರತಿಭಟನೆಯಲ್ಲಿ ಭಾಗಿಯಾದ ದೇವನೂರ ಮಹಾದೇವ, ಪ.ಮಲ್ಲೇಶ್

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 10:12 IST
Last Updated 25 ಅಕ್ಟೋಬರ್ 2019, 10:12 IST
ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಗುರುವಾರ ಮೈಸೂರಿನಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿದರು
ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಗುರುವಾರ ಮೈಸೂರಿನಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿದರು   

ಮೈಸೂರು: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಆಗ್ರಹಿಸಿ ನೂರಾರು ರೈತರು ನಗರದಲ್ಲಿ ಗುರುವಾರ ಪ್ರತಿಭಟನಾ ಜಾಥಾ ನಡೆಸಿದರು.

ರಾಮಸ್ವಾಮಿ ವೃತ್ತದಿಂದ ಹಸುಗಳೊಂದಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಾಥಾ ಆರಂಭಿಸಿದ ಸುಮಾರು 500ಕ್ಕೂ ಹೆಚ್ಚಿನ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಹೋರಾಟಗಾರ ಪ.ಮಲ್ಲೇಶ್ ತಮಟೆ ಬಡಿಯುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ತಲುಪಿದ ರೈತರು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ಒಪ್ಪಂದದಿಂದ ಹಾಲು, ರೇಷ್ಮೆ, ಸಕ್ಕರೆ ಸೇರಿದಂತೆ ಅನೇಕ ಉತ್ಪನ್ನಗಳು ಯಾವುದೇ ಸುಂಕ ಇಲ್ಲದೇ ಗಡಿ ದಾಟಿ ಬರುತ್ತವೆ. ಇದರಿಂದ ದೇಶಿಯ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಿ ಇಲ್ಲಿನ ರೈತರ ಸ್ಥಿತಿ ಅಯೋಮಯವಾಗುತ್ತದೆ’ ಎಂದು ಕಿಡಿಕಾರಿದರು.

ಈ ವಿಷಯವನ್ನು ಸಂಸತ್ತಿನಲ್ಲಿ ಸಂಸದರು ಪ್ರಸ್ತಾಪಿಸಬೇಕಿದೆ. ಒಪ್ಪಂದಕ್ಕೆ ಸಹಿ ಹಾಕುವುದನ್ನು ಈಗಲಾದರೂ ತಡೆಯಬೇಕಿದೆ ಎಂದು ಅವರು ಆಗ್ರಹಿಸಿದರು.

ಹೋರಾಟಗಾರ ಪ.ಮಲ್ಲೇಶ್ ಮಾತನಾಡಿ, ‘ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು ಸ್ಥಗಿತಗೊಳಿಸುವ ರೀತಿಯಲ್ಲಿ ಹೋರಾಟ ನಡೆಯಬೇಕು. ಈ ಮಾದರಿಯ ಹೋರಾಟವನ್ನು ಕಟ್ಟಬೇಕು’ ಎಂದು ಕರೆ ನೀಡಿದರು.

ಹಿಂದೆ ಕಾಂಗ್ರೆಸ್ ಇತ್ತು, ಈಗ ಬಿಜೆಪಿ ಇದೆ. ಸ್ವಾತಂತ್ರ್ಯ ನಂತರ 70 ವರ್ಷ ಕಾಂಗ್ರೆಸ್‌ ಏನು ಮಾಡಿದರೂ ಜನ ಸಹಿಸಿಕೊಂಡಿದ್ದರು. ಈಗ ಇದೇ ಮಾದರಿಯನ್ನು ಬಿಜೆಪಿ ಅನುಸರಿಸುತ್ತಿದೆ. ಇದರ ವಿರುದ್ಧ ನಿರ್ಣಾಯಕವಾದ ಹೋರಾಟವನ್ನು ರೂಪಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ದೇಶಕ್ಕೆ ಹೊಸ ಚರಿತ್ರೆ ಬರೆಯುವೆ ಎಂದು ಅಮಿತ್ ಶಾ ಹೇಳುತ್ತಾರೆ. ಹಾಗಾದರೆ, ದೇಶದ ಹಳೆಯ ಚರಿತ್ರೆ ಕಥೆ ಏನಾಗಬೇಕು ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಸಾಹಿತಿ ದೇವನೂರ ಮಹಾದೇವ, ಲೇಖಕ ಕೆ.ಪಿ.ಸುರೇಶ್, ಎಐಡಿವೈಒ ಸಂಚಾಲಕ ಚಂದ್ರಶೇಖರ ಮೇಟಿ, ಜನಾಂದೋಲನ ಮಹಾಮೈತ್ರಿಯ ಅಭಿರುಚಿ ಗಣೇಶ್, ದಸಂಸದ ಚನ್ನಯ್ಯ, ಶಂಭುಲಿಂಗಸ್ವಾಮಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿದ್ದೇಗೌಡ, ನಿರ್ದೇಶಕ ಈರೇಗೌಡ, ಕಾರ್ಮಿಕ ಸಂಘಟನೆಗಳ ಮುಖಂಡ ಬಿ.ರವಿ, ರಂಗಕರ್ಮಿ ಜನಾರ್ದನ್ (ಜನ್ನಿ), ರೈತ ಸಂಘದ ರಾಜ್ಯ ವರಿಷ್ಠ ಎಂ.ಎಸ್.ಅಶ್ವಥನಾರಾಯಣರಾಜೇಅರಸ್, ಎಚ್.ಸಿ.ಲೋಕೇಶ್‍ರಾಜೇ ಅರಸ್, ಸುನಿತಾ ಪುಟ್ಟಣ್ಣಯ್ಯ, ವಿಭಾಗಮಟ್ಟದ ಕಾರ್ಯದರ್ಶಿ ಸರಗೂರು ನಟರಾಜ್, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ ಹಾಗೂ ಇತರರು ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.