ADVERTISEMENT

ಮೈಸೂರು: ಭತ್ತ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 4:53 IST
Last Updated 20 ನವೆಂಬರ್ 2025, 4:53 IST
ಭತ್ತ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ತಿ.ನರಸೀಪುರ ತಾಲ್ಲೂಕು ರಾಜ್ಯ ರೈತ ಸಂಘದ ಮುಖಂಡರು ಬುಧವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಬಳಿಕ‌ ಗ್ರೇಡ್ 2 ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು
ಭತ್ತ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ತಿ.ನರಸೀಪುರ ತಾಲ್ಲೂಕು ರಾಜ್ಯ ರೈತ ಸಂಘದ ಮುಖಂಡರು ಬುಧವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಬಳಿಕ‌ ಗ್ರೇಡ್ 2 ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು   

ತಿ.ನರಸೀಪುರ: ತಾಲ್ಲೂಕಿನಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಬುಧವಾರ ತಾಲ್ಲೂಕು ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಸಂಘದ ತಾಲ್ಲೂಕು ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ , ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಭತ್ತವನ್ನು ಬೆಳೆದಿರುತ್ತಾರೆ. ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕು, ಭತ್ತದ ಕಣಜ ಎಂದು ಹೆಸರುವಾಸಿಯಾಗಿದೆ. ಭತ್ತದ ಫಸಲಿನ ಕಟಾವು ಪ್ರಾರಂಭವಾಗಿದೆ. ಕೂಡಲೇ ಸರ್ಕಾರ ಎಲ್ಲಾ ತಾಲ್ಲೂಕುಗಳಲ್ಲಿ ಅಗತ್ಯವಿರುವ ಕಡೆ ಖರೀದಿ ಕೇಂದ್ರಗಳನ್ನು ತೆರೆದು ಭತ್ತವನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯದ ಪಡಿತರ ವ್ಯವಸ್ಥೆಗೆ ಬೇಕಾದ ಅಕ್ಕಿ ಪೂರೈಕೆಗೆ ಅಗತ್ಯವಿರುವ ಭತ್ತವನ್ನು ರೈತರಿಂದಲೇ ನೇರವಾಗಿ ಕೊಳ್ಳಬೇಕು. ಈ ಹಿಂದೆ ರೈಸ್ ಮಿಲ್ ಗಳಿಗೂ ಕನಿಷ್ಠ ಬೆಂಬಲ ಬೆಲೆಯಲ್ಲಿ ಭತ್ತವನ್ನು ಕೊಳ್ಳಲು ಅವಕಾಶವಿತ್ತು. ಅದನ್ನು ಮತ್ತೆ ಜಾರಿಗೆ ತರಬೇಕು. ರೈತರು ಬೆಳೆದ ಭತ್ತಕ್ಕೆ ಕೇಂದ್ರ ಸರ್ಕಾರ ನಿರ್ಧರಿಸುವ ಬೆಂಬಲ ಬೆಲೆಯೊಂದಿಗೆ ರಾಜ್ಯ ಸರ್ಕಾರ ಒಂದು ಕ್ವಿಂಟಲ್ ಭತ್ತಕ್ಕೆ ₹500 ಗಳ ಪ್ರೋತ್ಸಾಹ ಧನ ಘೋಷಣೆ ಮಾಡಿ ನೀಡುವಂತೆ ಹಕ್ಕೊತ್ತಾಯ ಮಾಡಿದರು.

ADVERTISEMENT

ಕುರುಬೂರು ಅಡ್ಡಾಳದ ಕೆರೆಯು ಸುಮಾರು 171 ಎಕರೆ ಇದ್ದು, ಗಿಡಗಂಟೆಗಳು ಬೆಳೆದು ನೀರು ಶೇಖರಣೆಯಾಗುತ್ತಿಲ್ಲ. ಇದರಲ್ಲಿ ರೈತರು ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದುದರಿಂದ ಸದರಿ ಭೂಮಿಗೆ ನೀಲಿ ನಕ್ಷೆ ತಯಾರಿಸಿ, ನೀರಾವರಿ ವ್ಯವಸ್ಥೆ ಮಾಡಿಕೊಟ್ಟು ರೈತರು ಬೆಳೆಯನ್ನು ಬೆಳೆಯಲು ಅನುಕೂಲ ಮಾಡಿಕೊಡುವಂತೆ ಹಾಗೂ ಖರೀದಿ ಕೇಂದ್ರಗಳಲ್ಲಿ ಅವ್ಯವಹಾರ ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಬೇಕು ಎಂದು ರೈತರು ಆಗ್ರಹಿಸಿದರು.

ಬಳಿಕ ತಾಲ್ಲೂಕು ಕಚೇರಿಯ ಗ್ರೇಡ್ 2 ತಹಶೀಲ್ದಾರ್ ರಾಜಾಕಾಂತ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಬೂದಹಳ್ಳಿ ಶಂಕರ್, ಗೌರವಾಧ್ಯಕ್ಷ ಮಹದೇವಸ್ವಾಮಿ, ಮಾರ್ಬಳ್ಳಿ ನಂಜುಂಡಸ್ವಾಮಿ, ಈ. ರಾಜು, ಸುಜ್ಜಲೂರು ಚಂದ್ರಶೇಖರ, ಕೊತ್ತೇಗಾಲ ಶಾಂತಮೂರ್ತಿ, ಶಿವಮೂರ್ತಿ, ನಾಗೇಂದ್ರ, ಸಿದ್ದೇಗೌಡ, ಮಲ್ಲೇಶ್, ನಾಗೇಶ್, ದೊರೆಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.