ADVERTISEMENT

ಬೂಜು, ಕೇದಿಗೆ ರೋಗ: ಔಷಧ ಸಿಂಪಡಣೆ ಅಗತ್ಯ

‘ಹತ್ತಿ,ಮುಸುಕಿನ ಜೋಳ ಬೆಳೆಯಲ್ಲಿ ಕೀಟ, ರೋಗ ಹತೋಟಿ ಕ್ರಮ’ ತರಬೇತಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 14:27 IST
Last Updated 14 ಜೂನ್ 2025, 14:27 IST
ಎಚ್‌.ಡಿ.ಕೋಟೆಯಲ್ಲಿ ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಸಸ್ಯರೋಗ ಶಾಸ್ತ್ರಜ್ಞೆ ಆರ್.ಎನ್.ಪುಷ್ಪಾ ಮಾತನಾಡಿದರು
ಎಚ್‌.ಡಿ.ಕೋಟೆಯಲ್ಲಿ ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಸಸ್ಯರೋಗ ಶಾಸ್ತ್ರಜ್ಞೆ ಆರ್.ಎನ್.ಪುಷ್ಪಾ ಮಾತನಾಡಿದರು   

ಮೈಸೂರು: ‘ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಮುಸುಕಿನ ಜೋಳದಲ್ಲಿ ಬೂಜು, ಕೇದಿಗೆ ರೋಗ ಉಲ್ವಣಗೊಳ್ಳುತ್ತಿದೆ’ ಎಂದು ಸಸ್ಯರೋಗ ಶಾಸ್ತ್ರಜ್ಞೆ ಆರ್.ಎನ್.ಪುಷ್ಪಾ ಹೇಳಿದರು. 

ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ 2025-26ನೇ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಎಚ್.ಡಿ.ಕೋಟೆ ತಾಲ್ಲೂಕಿನ ಕಸಬಾ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ‘ಹತ್ತಿ ಮತ್ತು ಮುಸುಕಿನ ಜೋಳದ ಬೆಳೆಯಲ್ಲಿ ಕೀಟ, ರೋಗಗಳ ಹತೋಟಿ ಕ್ರಮ’ ಕುರಿತು ಶುಕ್ರವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೋಗದಿಂದಾಗಿ ಇಳುವರಿ ನಷ್ಟ ಸಾಧ್ಯತೆ ಹೆಚ್ಚು. ರೈತರು ರೋಗ ಲಕ್ಷಣ ಕಂಡ ಕೂಡಲೇ ಔಷಧ ಸಿಂಪಡಿಸಬೇಕು ಎಂದರು.

ADVERTISEMENT

ಮೆಟಲಾಕ್ಸಿಲ್ 8 ಡಬ್ಲುಪಿ, ಮ್ಯಾಂಕೊಜೆಬ್ 64 ಡಬ್ಲುಪಿ ಸಂಯುಕ್ತ ಶಿಲೀಂದ್ರನಾಶಕವನ್ನು ಪ್ರತೀ 1 ಲೀ ನೀರಿಗೆ 2 ಗ್ರಾಂನಂತೆ ಮಿಶ್ರಣಮಾಡಿ ಗರಿಗಳ ತಳಭಾಗ ಹಾಗೂ ಮೇಲ್ಭಾಗಕ್ಕೂ ಸಿಂಪಡಿಸಬೇಕು ಎಂದು ತಿಳಿಸಿದರು.

ತರಬೇತಿ ಸಂಯೋಜಕ ಎಚ್.ಆರ್.ರಾಜಶೇಖರ, ‘ತರಬೇತಿಗಳಲ್ಲಿ ರೈತರು ಭಾಗವಹಿಸಿ ಅದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು. 

ವಿಜ್ಞಾನಿ ರಾಜಣ್ಣ ಜೆ.ಜಿ., ಮಣ್ಣು ಪರೀಕ್ಷೆ ಮಹತ್ವ, ಮಣ್ಣು ಮಾದರಿ ಸಂಗ್ರಹಿಸುವ ವಿಧಾನದ ಕುರಿತು ತಿಳಿಸಿದರು.

ಕೃಷಿ ಇಲಾಖೆಯಲ್ಲಿ ಅನುಷ್ಠಾನಗೊಳಿಸುವ ವಿವಿಧ ಯೋಜನೆಗಳಡಿ ದೊರೆಯುವ ಸಹಾಯಧನ ಹಾಗೂ ವಿವಿಧ ಕಾರ್ಯಕ್ರಮ ಕುರಿತು ಎಚ್.ಡಿ.ಕೋಟೆ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಜಯರಾಮಯ್ಯ ತಿಳಿಸಿದರೆ, ತೋಟಗಾರಿಕೆ ಇಲಾಖೆಯ ಸೌಲಭ್ಯಗಳ ಕುರಿತು ಸರಗೂರು ಹೋಬಳಿ ಸಹಾಯಕ ತೋಟಗಾರಿಕೆ ಅಧಿಕಾರಿ ಚೈತ್ರಾ ಮಾಹಿತಿ ನೀಡಿದರು.

ಕರ್ನಾಟಕ ರೈತ ಕಲ್ಯಾಣ ಸಂಘದ ಅಧ್ಯಕ್ಷ ಮಹದೇವನಾಯಕ, ಗೌರವಾಧ್ಯಕ್ಷ ಮಂಚಯ್ಯ, ಕೃಷಿ ಅಧಿಕಾರಿ ಸಿದ್ದಪ್ಪಸ್ವಾಮಿ ಜಿ, ಆತ್ಮ ಯೋಜನೆಯ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಶಿಲ್ಪಾ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರಕ್ಷಿತಾ, ವಿನಯ್ ಅಸೋಡೆ, ಜಗನ್ನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.