ಸಚಿವ ಎಚ್.ಕೆ. ಪಾಟೀಲ
ಮೈಸೂರು: ‘ರೈತರ ಕಲ್ಯಾಣಕ್ಕೆ ಸಂಬಂಧಿಸಿದವೂ ಸೇರಿದಂತೆ ಒಟ್ಟು ನೂರು ಮಸೂದೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಜವಾಬ್ದಾರಿಯನ್ನು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಗೆ ವಹಿಸಲಾಗಿದೆ’ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಇಲ್ಲಿನ ಬನ್ನೂರು ರಸ್ತೆಯಲ್ಲಿರುವ ವಿದ್ಯಾವಿಕಾಸ ಕಾನೂನು ಅಧ್ಯಯನ ಸಂಸ್ಥೆಯಲ್ಲಿ ವಿದ್ಯಾವಿಕಾಸ ಶಿಕ್ಷಣ ಟ್ರಸ್ಟ್ ಹಾಗೂ ಬೆಂಗಳೂರಿನ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕೃಷಿ ಉತ್ಪನ್ನ ಮಾರುಕಟ್ಟೆ ಕಾನೂನು’ ಕುರಿತ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ರೈತರ ಉತ್ಪನ್ನಗಳಿಗೆ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ)ಗಿಂತ ಕಡಿಮೆ ಬಿಡ್ ಮಾಡಿದರೆ ಅದನ್ನು ಅಪರಾಧ ಎಂದು ಪರಿಗಣಿಸಬೇಕು, ಇದಕ್ಕಾಗಿ ಕಾನೂನೇ ಬರಬೇಕು. ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ, ಇನ್ನೂ ಎಲ್ಲಿಯವರೆಗೆ ರೈತರನ್ನು ಶೋಷಣೆ ಮಾಡುತ್ತಿರುತ್ತೀರಿ? ಇದೆಲ್ಲವನ್ನೂ ತಡೆಯುವ ಕೆಲಸ ಮಾಡಬೇಕು’ ಎಂದರು.
‘ದೇಶದಲ್ಲಿ ರೈತರಿಗೆ ಮಾಡಲಾಗುವ ಪಾವತಿಗಳನ್ನೆಲ್ಲಾ ‘ಡಿಜಿಟಲ್ ಪೇಮೆಂಟ್’ ಮೂಲಕ ಈವರೆಗೂ ಕಡ್ಡಾಯಗೊಳಿಸಿಲ್ಲವೇಕೆ? ಇದನ್ನು ಡಿಜಿಟೈಸ್ ಮಾಡಿದರೆ, ಉತ್ಪನ್ನಕ್ಕೆ ಎಷ್ಟು ಬೆಲೆ ಸಿಕ್ಕಿತು ಎನ್ನುವುದು ಗೊತ್ತಾಗುತ್ತದೆ. ಕಪ್ಪು ಹಣ ಬಳಕೆಯೂ ತಗ್ಗುತ್ತದೆ. ಈ ವಿಷಯದಲ್ಲಿ ಪ್ರತ್ಯೇಕ ಕಾನೂನು ಜಾರಿಗೆ ಬರಬೇಕು’ ಹೇಳಿದರು.
‘ನಮ್ಮಲ್ಲಿ ಈವರೆಗೂ ಬಂದಿರುವ ಕಾನೂನುಗಳು ಸಮಸ್ಯೆಗಳ ಮೂಲವನ್ನು ಕಿತ್ತು ಹಾಕುತ್ತಿಲ್ಲ. ಶ್ರೀಮಂತರ ರಕ್ಷಣೆಗೆ ಇರುವಷ್ಟು ಕಾನೂನುಗಳು ಬಡವರು ಮತ್ತು ರೈತರ ರಕ್ಷಣೆಗಿಲ್ಲ. ಆದರೂ, ರೈತರಿಗೆ ವೃದ್ಧಾಪ್ಯ ವೇತನ, ಸಹಾಯಧನ, ರಸ್ತೆ ಮೊದಲಾದ ಸೌಲಭ್ಯ ಕೊಡಲಾಗುತ್ತದೆಯೆಲ್ಲವೇ ಎಂದು ಕೇಳುವವರೂ ಇದ್ದಾರೆ. ಆದರೆ, ರೈತರಿಗೆ ಸೌಲಭ್ಯ ದೊರೆಯದಿರುವುದನ್ನು ಮಾನವ ಹಕ್ಕು ಉಲ್ಲಂಘನೆ ಎಂದು ಯಾರೂ ಹೇಳಿಲ್ಲ. ವಿದೇಶಗಳಲ್ಲಿ ಲಕ್ಷುರಿಗಳು (ಐಷಾರಾಮಿ ಸೇವೆಗಳು) ಮಾನವ ಹಕ್ಕುಗಳಾಗಿವೆ. ಆದರೆ, ನಮ್ಮ ದೇಶದಲ್ಲಿ, ರೈತರ ಬೆಳೆಗೆ ಸೂಕ್ತ ಬೆಲೆ ಸಿಗದಿರುವುದು ಮಾನವ ಹಕ್ಕು ಉಲ್ಲಂಘನೆ ಎಂಬುದನ್ನು ಯಾರೂ ಹೇಳುತ್ತಿಲ್ಲ’ ಎಂದು ವಿಷಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.