ADVERTISEMENT

ಮೈಸೂರು: ಕೃಷಿ ಮಾಹಿತಿಗಾಗಿ ರೈತರ ಪರದಾಟ

ಕೃಷಿ ಇಲಾಖೆಯಲ್ಲಿ ಹಲವು ವರ್ಷಗಳಿಂದ ಸಿಬ್ಬಂದಿ ಕೊರತೆ

ಕೆ.ಓಂಕಾರ ಮೂರ್ತಿ
Published 13 ಜುಲೈ 2021, 3:04 IST
Last Updated 13 ಜುಲೈ 2021, 3:04 IST
ಮಹಾಂತೇಶಪ್ಪ
ಮಹಾಂತೇಶಪ್ಪ   

ಮೈಸೂರು: ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದು, ಕೃಷಿ ಅಧಿಕಾರಿಗಳು– ಸಿಬ್ಬಂದಿಯ ಕೊರತೆಯಿಂದ ಸರಿಯಾದ ಮಾಹಿತಿ ಸಿಗದೆ ರೈತರು ಪರದಾಡುತ್ತಿದ್ದಾರೆ.

ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಶೇ 60ಕ್ಕೂ ಅಧಿಕ ಕೃಷಿ ಅಧಿಕಾರಿಗಳ ಕೊರತೆ ಇದ್ದು, ಸರ್ಕಾರ ಇದುವರೆಗೆ ಭರ್ತಿ ಮಾಡಿಲ್ಲ. ಕೃಷಿ ಕೇಂದ್ರಿತ ತಾಲ್ಲೂಕು ಮಟ್ಟದಲ್ಲೇ 76 ಸಹಾಯಕ ಕೃಷಿ ಅಧಿಕಾರಿಗಳ ಹಾಗೂ 25 ಕೃಷಿ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ.

ಎಚ್.ಡಿ.ಕೋಟೆ ತಾಲ್ಲೂಕಿಗೆ 7, ಹುಣಸೂರು ತಾಲ್ಲೂಕಿಗೆ 6 ಕೃಷಿ ಅಧಿಕಾರಿ ಹುದ್ದೆ ಮಂಜೂರಾಗಿದ್ದರೂ ಇರುವುದು ತಲಾ ಒಬ್ಬರು ಮಾತ್ರ. ಮೈಸೂರು ತಾಲ್ಲೂಕಿಗೆ 14 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆ ಮಂಜೂರಾಗಿದ್ದು, ಭರ್ತಿ ಆಗಿರುವುದು ಕೇವಲ ಒಂದು. ಪ್ರತಿ ತಾಲ್ಲೂಕಿನಲ್ಲೂ ಇದೇ ಸ್ಥಿತಿ. ಮೈಸೂರಿನ ಕೇಂದ್ರ ಕಚೇರಿಯಲ್ಲೂ ಹಲವಾರು ಹುದ್ದೆಗಳು ಖಾಲಿ ಇವೆ.

ADVERTISEMENT

‘ಬಿತ್ತನೆ ಬೀಜ, ರಸಗೊಬ್ಬರ, ಕೀಟ ನಾಶಕ, ಮಣ್ಣಿನ ಗುಣಮಟ್ಟದ ಬಗ್ಗೆ ಮಾಹಿತಿ ನೀಡುವವರಿಲ್ಲ. ರೈತ ಸಂಪರ್ಕ ಕೇಂದ್ರಗಳಲ್ಲಿ ಒಬ್ಬರೇ ಸಿಬ್ಬಂದಿ ಇದ್ದು, ಅವರೇ ಎಲ್ಲಾ ಕೆಲಸ ಮಾಡುತ್ತಿರುತ್ತಾರೆ’ ಎಂದು ರೈತರು ದೂರುತ್ತಾರೆ.

ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಸರ್ಕಾರದ ಯೋಜನೆಗಳನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ. ಕ್ಷೇತ್ರ ಭೇಟಿಯೂ ಕಡಿಮೆ ಆಗಿದೆ. ‌ ಸಮಗ್ರ ಕೃಷಿ ಅಭಿಯಾನದಡಿ ಕೃಷಿ ರಥದ ಮೂಲಕ ‘ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಎಂಬ ಯೋಜನೆಯಡಿ ಈಚೆಗೆ ಮಾಹಿತಿ ನೀಡುವ ಪ್ರಯತ್ನ ನಡೆದಿದೆ. ಅದಕ್ಕೂ ಸಿಬ್ಬಂದಿ ಕೊರತೆ ಕಾಡುತ್ತಿದೆ.

‘ಡಿ ದರ್ಜೆ ನೌಕರರು, ಚಾಲಕರು, ಟೈಪಿಸ್ಟ್‌ ಹುದ್ದೆಗಳೂ ಖಾಲಿ ಇವೆ. ಅವುಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಅವಕಾಶವಿದೆ. ತಾಂತ್ರಿಕ ಸಿಬ್ಬಂದಿ ಹುದ್ದೆಗಳನ್ನು (‘ಬಿ’ ಗ್ರೂಪ್‌) ಭರ್ತಿ ಮಾಡಿಕೊಳ್ಳಲು ನೇಮಕಾತಿಯೇ ನಡೆಯಬೇಕು. ಬೇರೆ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ’ ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಮಹಾಂತೇಶಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಮಣ್ಣು ಪರೀಕ್ಷೆ, ಬೆಳೆ ಕಟಾವು ಪ್ರಯೋಗ ಮಾಡಲು, ಕೃಷಿ ಪರಿಕರಗಳ ಗುಣಮಟ್ಟ ಪರೀಕ್ಷಿಸಲು, ವಿಮೆ, ಕನಿಷ್ಠ ಬೆಂಬಲ ಬೆಲೆ ಯೋಜನೆ, ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಿಬ್ಬಂದಿ ಕೊರತೆಯಿಂದಾಗಿ ಸಮಸ್ಯೆ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.