ADVERTISEMENT

ಬಹುರೂಪಿ ವಿಚಾರ ಸಂಕಿರಣ| ಫ್ಯಾಸಿಸಂ ಬೆಳವಣಿಗೆಗೆ ಪ್ರತಿರೋಧ ಅಗತ್ಯ: ಸಿದ್ಧಾರ್ಥ್

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 11:36 IST
Last Updated 17 ಜನವರಿ 2026, 11:36 IST
<div class="paragraphs"><p>ಬಹುರೂಪಿ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿದ ಪತ್ರಕರ್ತ ಸಿದ್ಧಾರ್ಥ್ ವರದರಾಜನ್ ಮಾತನಾಡಿದರು</p></div>

ಬಹುರೂಪಿ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿದ ಪತ್ರಕರ್ತ ಸಿದ್ಧಾರ್ಥ್ ವರದರಾಜನ್ ಮಾತನಾಡಿದರು

   

ಮೈಸೂರು: ‘ಫ್ಯಾಸಿಸಂ ಅನ್ನು ಆರಂಭದಲ್ಲೇ ಗುರುತಿಸಿ, ಪ್ರತಿರೋಧ ತೋರದಿದ್ದರೆ ಅದು ದೇಶ ಮತ್ತು ಜನರನ್ನು ನಾಶ ಮಾಡುತ್ತದೆ. ಪ್ರಜಾಪ್ರಭುತ್ವಕ್ಕೆ ಮಾದರಿಯಾಗಿದ್ದ ಭಾರತ ಮತ್ತು ಅಮೆರಿಕ ದೇಶಗಳಲ್ಲಿ ಕಾಣುತ್ತಿರುವುದು ಇದನ್ನೇ’ ಎಂದು ಪತ್ರಕರ್ತ ಸಿದ್ಧಾರ್ಥ ವರದರಾಜನ್ ಅಭಿಪ್ರಾಯಪಟ್ಟರು. 

ಇಲ್ಲಿನ ರಂಗಾಯಣದಲ್ಲಿ ನಡೆಯುತ್ತಿರುವ ‘ಬಹುರೂಪಿ ಬಾಬಾಸಾಹೇಬ್’ ರಾಷ್ಟ್ರೀಯ ನಾಟಕೋತ್ಸವದಲ್ಲಿ‌ ಶನಿವಾರ ‘ರಾಷ್ಟ್ರೀಯ ವಿಚಾರ‌ ಸಂಕಿರಣ’ ಉದ್ಘಾಟಿಸಿ ಮಾತನಾಡಿ, ‘ಜರ್ಮನಿ, ಇಟಲಿಗಳು ಏನಾದವು ಎಂಬ ಇತಿಹಾಸ ಕಣ್ಣ ಮುಂದಿದೆ. ಹೀಗಾಗಿ, ಫ್ಯಾಸಿಸಂ ವಿರುದ್ಧದ ಹೋರಾಟವನ್ನು ಮುಂದೂಡುವುದು ಸಲ್ಲ. ದೇಶದ ‌ಪ್ರಜಾಪ್ರಭುತ್ವವು ನಿರಂಕುಶತ್ವಕ್ಕೆ ಹೊರಳುವ ಮೊದಲೇ ಪ್ರತಿರೋಧ ತೋರಬೇಕು. ಇಲ್ಲದಿದ್ದರೇ ನಾಳೆಗಳು ಕಠಿಣವಾಗಿರುತ್ತವೆ’ ಎಂದರು. 

ADVERTISEMENT

‘ಫ್ಯಾಸಿಸಂ ಎಂದಿಗೂ ದೊಡ್ಡ ಘೋಷಣೆಯೊಂದಿಗೆ ಬರುವುದಿಲ್ಲ. ಅಧಿಕಾರ ಹಿಡಿದ ನಂತರ ಬೇಕಾದ ಕಾನೂನು ಜಾರಿಗೊಳಿಸುತ್ತದೆ. ಭಾಷೆ, ಸಂಸ್ಕೃತಿ ಹೆಸರಿನಲ್ಲಿ ಸಾಮಾಜಿಕ ಶ್ರೇಣೀಕರಣವನ್ನು ಜೀವಂತವಾಗಿ ಇರಿಸುತ್ತದೆ’ ಎಂದರು. 

‘ರಾಜಕೀಯದಲ್ಲಿ ಹಣಬಲವೇ ಪ್ರಧಾನ. ಅದನ್ನು ಭಾರತ ಮತ್ತು ಅಮೆರಿಕದಲ್ಲಿ ಕಾಣುತ್ತಿದ್ದೇವೆ. ವ್ಯವಹಾರಿಕ, ಹಣಕಾಸು ಹಿತಾಸಕ್ತಿಗಳು ಡೊನಾಲ್ಡ್ ಟ್ರಂಪ್‌ ಅವರ ಆಡಳಿತದ ನಿರ್ಧಾರ ರೂಪಿಸುತ್ತಿದೆ. ಭಾರತದಲ್ಲೂ ಬಿಜೆಪಿಗೆ ಶೇ 85ರಷ್ಟು ದೇಣಿಗೆ ಹರಿದು ಬಂದಿದೆ. ದೇಣಿಗೆ ಕೊಟ್ಟವರ ಹಿತಾಸಕ್ತಿಗಳೇ ಚುಕ್ಕಾಣಿ ಹಿಡಿದವರಿಗೆ ಮುಖ್ಯವಾಗಿದೆ. ಆದರೆ, ಸಾಮಾನ್ಯ ಜನರು ಮಾತ್ರ ಸಂತ್ರಸ್ತರಾಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು. 

‘ನಾಯಕ ಪ್ರಶ್ನಾತೀತನಾದಾಗ ಪ್ರಜಾಪ್ರಭುತ್ವ ಇಕ್ಕಟ್ಟಿಗೆ ಸಿಲುಕುತ್ತದೆ ಎಂದು ಎಚ್ಚರಿಸಿದ್ದ ಅಂಬೇಡ್ಕರ್ ಅವರು ವ್ಯಕ್ತಿ ಪೂಜೆ ವಿರೋಧಿಸಿದ್ದರು. ದೇಶದಲ್ಲಿ ಪ್ರಶ್ನಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಅಂಬೇಡ್ಕರ್ ಅವರಂತೆ ಮನುಸ್ಮೃತಿ ಸುಟ್ಟ ಯುವತಿಯ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ. ಅಂಬೇಡ್ಕರ್ ಅವರನ್ನು ಹೊಗಳುವ ನಾಯಕರು, ಅವರ ಹೋರಾಟ ಮಾದರಿಯಲ್ಲಿ ನಡೆದವರ ವಿರುದ್ಧವೇ ಪ್ರಕರಣ ದಾಖಲಿಸುವುದು ದ್ವಂದ್ವ ನಿಲುವಲ್ಲವೇ’ ಎಂದು ಪ್ರಶ್ನಿಸಿದರು.

‘ಸ್ವಾತಂತ್ರ್ಯ ಭಾರತವು ಸಾರ್ವಭೌಮವಾಗಿ ಉಳಿಯಲು ಬೇಕಾದ ಅಡಿಪಾಯವನ್ನು ಸಂವಿಧಾನದ ಮೂಲಕ ಅಂಬೇಡ್ಕರ್ ನೀಡಿದರು. ಅದು ಕೇವಲ ನಮಗೆ ಮಾತ್ರ ಸಂಬಂಧಿಸಿದ್ದಲ್ಲ ಜಗತ್ತಿನ ಎಲ್ಲ ದೇಶಗಳಿಗೂ ಮಾದರಿಯಾಗಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಕುಲಪತಿ‌ ಪ್ರೊ.ಎನ್.ಲೋಕನಾಥ್, ಮೈಸೂರು ವಿಶ್ವವಿದ್ಯಾಯದ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ನರೇಂದ್ರಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಎಂ.ಡಿ.ಸುದರ್ಶನ್ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.