ADVERTISEMENT

ಹಂಪಾಪುರ | ಫೆಂಜಲ್: ಬೆಳೆ ರಕ್ಷಣೆಗೆ ರೈತರ ಹರಸಾಹಸ

ರವಿಕುಮಾರ್
Published 3 ಡಿಸೆಂಬರ್ 2024, 5:39 IST
Last Updated 3 ಡಿಸೆಂಬರ್ 2024, 5:39 IST
ಎಚ್.ಡಿ.ಕೋಟೆ ತಾಲ್ಲೂಕಿನ ವಡ್ಡರಗುಡಿ ಗ್ರಾಮದಲ್ಲಿ ರಾಗಿ ಕಟಾವಿಗೆ ಮುಂದಾಗಿದ್ದ ರೈತರು
ಎಚ್.ಡಿ.ಕೋಟೆ ತಾಲ್ಲೂಕಿನ ವಡ್ಡರಗುಡಿ ಗ್ರಾಮದಲ್ಲಿ ರಾಗಿ ಕಟಾವಿಗೆ ಮುಂದಾಗಿದ್ದ ರೈತರು   

ಹಂಪಾಪುರ: ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನಾಂದ್ಯಂತ ಫೆಂಜಲ್ ‌ಚಂಡಮಾರುತದಿಂದಾಗಿ ಸೋಮವಾರ ಬೆಳಗ್ಗೆಯಿಂದಲೇ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಬೆಳೆಗಳು ಹಾನಿಯಾಗಿದೆ.

ರಾಗಿ, ಭತ್ತ, ಮುಸುಕಿನ ಜೋಳಗಳು ಬಹುಪಾಲು ಕಟಾವಿನ ಹಂತಕ್ಕೆ ಬಂದಿದ್ದು, 10 ದಿನಗಳಿಂದ ಶೇ 10ರಷ್ಟು ರೈತರು ರೈತರು ಕಟಾವು ಮಾಡಿದ್ದರು.

‘ಸರಗೂರು ಮತ್ತು ಎಚ್.ಡಿ. ಕೋಟೆ ತಾಲ್ಲೂಕುಗಳಲ್ಲಿ 6,200 ಎಕರೆ ರಾಗಿ ಬಿತ್ತನೆಯಾಗಿದ್ದು, ಕಟಾವು ಮಾಡಿರುವ  ರೈತರು ಮಳೆಯಿಂದ ರಕ್ಷಿಸಿಕೊಳ್ಳಬೇಕು. ಫೆಂಜಲ್ ಚಂಡಮಾರುತದ ಪ್ರಭಾವ ಕಡಿಮೆಯಾಗುವವರೆಗೂ ರಾಗಿ ಕಟಾವು ಮಾಡಬಾರದು’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜಯರಾಮಯ್ಯ ರೈತರಿಗೆ ಮನವಿ ಮಾಡಿದ್ದಾರೆ.

ADVERTISEMENT

‘ಅವಳಿ ತಾಲ್ಲೂಕುಗಳಲ್ಲಿ ಹಿಂಗಾರು ಬೆಳೆಯಾಗಿ 4000 ಎಕರೆ ರಾಗಿ ಬಿತ್ತನೆ ಮಾಡಿದ್ದು, ಕಾಳು ಕಟ್ಟುವ ಹಂತದಲ್ಲಿದೆ. ಈ ರಾಗಿ ಬೆಳೆಗೆ ಮಳೆ ಅವಶ್ಯಕತೆ ಇದ್ದ ಕಾರಣ ಫೆಂಜಲ್ ಚಂಡಮಾರುತ ಕೆಲವು ರೈತರಿಗೆ ವರದಾನವಾಗಿದೆ’ ಎಂದು  ತಿಳಿಸಿದರು.

ಭತ್ತಕ್ಕೂ ಹಾನಿ:

ಎಚ್.ಡಿ. ಕೋಟೆ ಮತ್ತು ಸರಗೂರು ತಾಲ್ಲೂಕುಗಳಲ್ಲಿ 15,000 ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದು, ಕೆಲವು ಪ್ರದೇಶಗಳಲ್ಲಿ ಚೆಲ್ಲುವ ಮೂಲಕ ಬಿತ್ತನೆ ಮಾಡಲಾಗಿದೆ. ಈ ಬಾರಿ ನಾಲೆಗಳಿಗೆ ಒಂದು ತಿಂಗಳು ತಡವಾಗಿ ನೀರು ಹರಿಸಿದ್ದರಿಂದಾಗಿ, ಕೆಲವು ಪ್ರದೇಶಗಳಲ್ಲಿ ಶೇ 20ರಷ್ಟು ಮಾತ್ರ ಕಟಾವಿಗೆ ಬಂದಿದೆ. ಕೆಲವೆಡೆ ಕಟಾವು ಆರಂಭಿಸಿದ್ದು,  ಮಳೆ ಮುಗಿಯುವವರೆಗೂ ಭತ್ತ ಕಟಾವು ಮಾಡಬಾರದು‘ ಎಂದು  ಕೃಷಿ ಇಲಾಖೆ ಸೂಚಿಸಿದೆ.

ಉತ್ತಮ ಭತ್ತದ ನಿರೀಕ್ಷೆ :


‘ಈ ಬಾರಿ ತಾಲ್ಲೂಕಿನಾದ್ಯಂತ ಭತ್ತ ಉತ್ತಮ ಫಸಲು ಬಂದಿದ್ದು, ಯಾವುದೇ ರೋಗ ಇದುವರೆಗೂ ಕಂಡು ಬಂದಿಲ್ಲ. ಅತ್ಯುತ್ತಮವಾಗಿ ತೆಂಡೆಗಳು ಮೂಡಿರುವುದರಿಂದ ಉತ್ತಮ ಇಳುವರಿ ನಿರೀಕ್ಷೆ ಇದ್ದು, ರೈತರಿಗೆ ಈ ಬಾರಿ ಲಾಭದಾಯಕವಾಗಲಿದೆ’ ಎಂದು ಜಯರಾಮಯ್ಯ ಆಶಾಭವನೆ ವ್ಯಕ್ತಪಡಿಸಿದರು.

ಮೆಕ್ಕೆಜೋಳ ರಕ್ಷಿಸಿ :


‘ಮುಂಗಾರುನಲ್ಲಿ ಹಾಕಿದ್ದ ಮೆಕ್ಕೆಜೋಳ ಸಂಪೂರ್ಣ ಕಟಾವಾಗಿದ್ದು, ರೈತರು ಕಾಳನ್ನೂ ಮಾರಾಟ ಮಾಡಿದ್ದಾರೆ. ಹಿಂಗಾರಿಗೆ ಬಿತ್ತಿದ್ದ ಜೋಳ ಅಲ್ಲಲ್ಲಿ ಸೈನಿಕ ಹುಳು ಬಾಧೆಯಿಂದ ಹಾನಿಯಾಗಿದ್ದು, ಕೆಲವು ಕಡೆ ಕಟಾವಿಗೆ ಬಂದಿದೆ. ಮಳೆ ನಿಂತು ಬಿಸಿಲು ಬಂದಾಗ ಕಟಾವು ಮಾಡಬೇಕು‌’ ಎಂದು ರೈತರಿಗೆ ಸಲಹೆ ನೀಡಲಾಗಿದೆ.

‘ತಾಲ್ಲೂಕಿನಾದ್ಯಂತ 15000 ಎಕರೆಯಲ್ಲಿ ಹುರುಳಿಯನ್ನು ಬಿತ್ತನೆ‌ ಮಾಡಿದ್ದು, ಮಳೆ ಆಗುತ್ತಿರುವುದರಿಂದ ಉತ್ತಮವಾಗಿ ಇಳುವರಿ ಬರಲಿದೆ’ ಎಂದು ಜಯರಾಮಯ್ಯ ತಿಳಿಸಿದರು.

ಮಳೆಯ ನಡುವೆಯೂ ಮೇವಿಗೆ ತೆರಳಿದ ಜಾನುವಾರುಗಳು
ಮಳೆಯಲ್ಲಿ ಜಾನುವಾರು ಮೇಯಿಸಲು ಹೊರಟಿರುವ ರೈತ ಮಹಿಳೆ
ರಾಗಿಯನ್ನು ಕಟಾವು ಮಾಡಿದ್ದು ಮೋಡ ಇದ್ದುದ್ದರಿಂದ ಕಟಾವು ಮಾಡಿದ ರಾಗಿಯನ್ನು ಭಾನುವಾರವೇ ಬಣವೆ ಹಾಕಲಾಗಿದೆ. ಮಳೆಯಾಗುತ್ತಿರುವುದರಿಂದ ಹಾನಿಯಾಗುವ ಭೀತಿ ಇದೆ.
ಕುಮಾರ್ ರೈತ ವಡ್ಡರಗುಡಿ
ರೈತರು ಕಟಾವು ಮಾಡಿರುವ ಫಸಲನ್ನು ರಕ್ಷಿಸಿಕೊಳ್ಳಿ ಮಳೆ ಮುಗಿಯುವವರೆಗೂ ಕಟಾವು ಮಾಡಬೇಡಿ.
ಜಯರಾಮಯ್ಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಡಿ. ಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.